< ಹೋಶೇಯನು 4 >

1 ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.
ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.
2 ಸುಳ್ಳುಸಾಕ್ಷಿ, ನರಹತ್ಯ, ಕಳ್ಳತನ, ವ್ಯಭಿಚಾರ, ಇವುಗಳೇ ನಡೆಯುತ್ತವೆ; ದೊಂಬಿಗಳು ನಡೆಯುತ್ತಿವೆ, ದೇಶವೆಲ್ಲಾ ರಕ್ತಮಯವಾಗಿದೆ.
ಶಪಿಸುವದೂ, ಸುಳ್ಳು ಹೇಳುವುದೂ, ಕೊಲ್ಲುವುದು, ಕದಿಯುವುದೂ, ವ್ಯಭಿಚಾರ ಮಾಡುವುದೂ ಹೆಚ್ಚಾಗಿ ಬಿಟ್ಟಿವೆ. ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ದೇಶವೆಲ್ಲಾ ರಕ್ತಮಯವಾಗಿದೆ.
3 ಹೀಗಿರಲು ದೇಶವು ನರಳುವುದು, ಅದರಲ್ಲಿ ವಾಸಿಸುವ ಸಕಲ ಭೂಜಂತುಗಳೂ ಮತ್ತು ಆಕಾಶದ ಪಕ್ಷಿಗಳೂ ಬಳಲಿ ಹೋಗುವವು; ಸಮುದ್ರದ ಮೀನುಗಳು ಸಹ ನಶಿಸಿ ಹೋಗುವವು.
ಆದ್ದರಿಂದ ದೇಶವು ದುಃಖಪಡುತ್ತಿದೆ. ಅದರಲ್ಲಿ ವಾಸಿಸುವ ಪ್ರತಿಯೊಬ್ಬನು ಕುಗ್ಗಿಹೋಗಿದ್ದಾನೆ. ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ, ಸಮುದ್ರ ಮೀನುಗಳು ನಶಿಸಿ ಹೋಗುತ್ತಿವೆ.
4 ಯಾರೂ ಪ್ರತಿಭಟಿಸದಿರಲಿ, ಯಾರೂ ಖಂಡಿಸದಿರಲಿ; ನಿಮ್ಮ ಜನರು ಯಾಜಕನೊಂದಿಗೆ ಹೋರಾಡುವವರಂತಿದ್ದಾರೆ.
“ಆದರೂ ಯಾವನಾದರೂ ವಾದಿಸದಿರಲಿ ಇಲ್ಲವೆ ಬೇರೆಯವರನ್ನು ಖಂಡಿಸದಿರಲಿ. ಏಕೆಂದರೆ ನಿಮ್ಮ ಜನರೆಲ್ಲರೂ ಯಾಜಕನೊಂದಿಗೆ ವಾದಿಸುವವರಾಗಿದ್ದಾರೆ.
5 ಆಹಾ, ಯಾಜಕರೇ, ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.
ನೀನು ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಬೀಳುವೆ. ಪ್ರವಾದಿಗಳು ನಿನ್ನ ಸಂಗಡ ಮುಗ್ಗರಿಸಿಬೀಳುವರು. ಆದ್ದರಿಂದ ನಾನು ನಿನ್ನ ತಾಯಿಯನ್ನು ನಾಶಮಾಡುವೆನು.
6 ನನ್ನ ಜನರು ಜ್ಞಾನಹೀನರಾಗಿ ಹಾಳಾಗಿದ್ದಾರೆ; ನೀವು ಜ್ಞಾನವನ್ನು ತಳ್ಳಿಬಿಟ್ಟಿದ್ದರಿಂದ ಇನ್ನು ನನಗೆ ಯಾಜಕಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು. ನೀವು ನಿಮ್ಮ ದೇವರ ಧರ್ಮೋಪದೇಶವನ್ನು ಮರೆತ ಕಾರಣ, ನಾನು ನಿಮ್ಮ ಸಂತತಿಯವರನ್ನು ಮರೆತು ಬಿಡುವೆನು.
ನನ್ನ ಜನರು ಜ್ಞಾನಹೀನರಾಗಿ ಅಳಿದು ಹೋಗುತ್ತಿದ್ದಾರೆ. “ಏಕೆಂದರೆ ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ. ನಾನು ಸಹ ಯಾಜಕ ವರ್ಗದಿಂದ ನಿಮ್ಮನ್ನು ವರ್ಜಿಸಿ ಬಿಡುತ್ತೇನೆ. ಏಕೆಂದರೆ ನೀವು ದೇವರ ನಿಯಮವನ್ನು ಮರೆತುಬಿಟ್ಟಿದ್ದೀರಿ, ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.
7 ಅವರು ಹೆಚ್ಚಿದ ಹಾಗೆಲ್ಲಾ ನನ್ನ ವಿರುದ್ಧ ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಂದರು; ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.
ಯಾಜಕರು ಹೆಚ್ಚಿದ ಹಾಗೆಲ್ಲಾ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ. ಆದ್ದರಿಂದ ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.
8 ನನ್ನ ಜನರ ಪಾಪವೇ ಅವರಿಗೆ ಜೀವನ; ಅವರು ಅಧರ್ಮವನ್ನು ಆಶಿಸುತ್ತಾರೆ.
ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ. ಅವರು ದುಷ್ಟತನದ ಮೇಲೆ ಅವರ ಮನಸ್ಸನ್ನು ಇಡುತ್ತಾರೆ.
9 ಜನರೂ, ಯಾಜಕರೂ ಒಂದೇ; ಅವರ ದುಷ್ಕಾರ್ಯಗಳಿಗೆ ಅವರನ್ನು ದಂಡಿಸುವೆನು, ಅವರ ದುಷ್ಕೃತ್ಯಗಳನ್ನು ಅವರಿಗೆ ಕಟ್ಟುವೆನು.
ಯಾಜಕನು ಹೇಗೋ ಹಾಗೆಯೇ ಜನರು ಇರುವರು. ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವೆನು.
10 ೧೦ ಅವರು ಉಣ್ಣುತ್ತಿದ್ದರೂ ತೃಪ್ತಿ ದೊರೆಯದು, ಹಾದರ ಮಾಡುತ್ತಿದ್ದರೂ ಪ್ರಜಾಭಿವೃದ್ಧಿಯಾಗದು; ಯೆಹೋವನ ಕಡೆಗೆ ಗಮನಿಸುವುದನ್ನು ಬಿಟ್ಟುಬಿಟ್ಟಿದ್ದಾರಷ್ಟೆ.
“ಏಕೆಂದರೆ ಅವರು ತಿಂದರೂ ಸಾಕಾಗುವುದಿಲ್ಲ. ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರನ್ನೇ ಬಿಟ್ಟುಬಿಟ್ಟಿದ್ದಾರೆ.
11 ೧೧ ವ್ಯಭಿಚಾರ, ದ್ರಾಕ್ಷಾರಸ ಮತ್ತು ಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.
ಮದ್ಯಪಾನ, ದ್ರಾಕ್ಷಾರಸ ಇವು ಜನರನ್ನು ಜ್ಞಾನಹೀನರನ್ನಾಗಿ ಮಾಡುತ್ತವೆ.
12 ೧೨ ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.
ನನ್ನ ಜನರು ಮರದ ತುಂಡುಗಳಿಂದ ಕಣಿ ಕೇಳುತ್ತಾರೆ. ಹಿಡಿದ ಕೋಲಿನಿಂದ ಉತ್ತರ ಪಡೆಯಲು ಯತ್ನಿಸುತ್ತಾರೆ. ಏಕೆಂದರೆ ವ್ಯಭಿಚಾರದ ಆತ್ಮವು ಅವರನ್ನು ತಪ್ಪಿಸಿಬಿಟ್ಟಿದೆ. ಅವರು ತಮ್ಮ ದೇವರಿಗೆ ಅಪನಂಬಿಗಸ್ತರಾಗಿ ದ್ರೋಹ ಮಾಡಿದ್ದಾರೆ.
13 ೧೩ ಪರ್ವತಾಗ್ರಗಳಲ್ಲಿ ಯಜ್ಞ ಮಾಡುತ್ತಾರೆ, ಗುಡ್ಡಗಳ ಮೇಲೆ ಧೂಪ ಹಾಕುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ನೆರಳು ದಟ್ಟವಾಗಿರುವುದರಿಂದ ಅವುಗಳ ಕೆಳಗೆ ಇವುಗಳನ್ನು ನಡೆಸುತ್ತಾರೆ. ಹೀಗಿರಲು ನನ್ನ ಜನರೇ, ನಿಮ್ಮ ಕುಮಾರಿಯರು ವ್ಯಭಿಚಾರಿಗಳಾಗಿ ನಡೆಯುವುದೂ, ನಿಮ್ಮ ವಧುಗಳು ವ್ಯಭಿಚಾರ ಮಾಡುವುದೂ ಏನಾಶ್ಚರ್ಯ?
ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸುತ್ತಾರೆ. ಗುಡ್ಡಗಳ ಮೇಲೆ ಏಲಾ, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ದಟ್ಟವಾಗಿರುವುದರಿಂದ ಧೂಪವನ್ನು ಸುಡುತ್ತಾರೆ. ಆದ್ದರಿಂದ ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವರು. ನಿಮ್ಮ ಸೊಸೆಯಂದಿರು ವ್ಯಭಿಚಾರಿಣಿಗಳಾಗುವರು.
14 ೧೪ ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.
“ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವಾಗಲೂ, ನಿಮ್ಮ ಸೊಸೆಯಂದಿರು ವ್ಯಭಿಚಾರ ಮಾಡುವಾಗಲೂ ನಾನು ಅವರನ್ನು ಶಿಕ್ಷಿಸುವುದಿಲ್ಲ. ಏಕೆಂದರೆ ಪುರುಷರು ಸ್ವತಃ ವೇಶ್ಯೆಯರೊಂದಿಗೆ ವಾಸಿಸುತ್ತಾರೆ ಮತ್ತು ದೇವಾಲಯದ ವೇಶ್ಯೆಯರೊಂದಿಗೆ ಬಲಿ ಅರ್ಪಿಸುತ್ತಾರೆ. ಆದ್ದರಿಂದ ವಿವೇಕವಿಲ್ಲದ ಜನರು ನಾಶವಾಗುತ್ತಾರೆ.
15 ೧೫ ಇಸ್ರಾಯೇಲೇ, ನೀನು ವ್ಯಭಿಚಾರಿಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಸೇರಬೇಡಿರಿ, ಬೇತ್ ಅವೆನಿಗೆ ಯಾತ್ರೆ ಹೋಗಬೇಡಿರಿ, “ಯೆಹೋವನ ಜೀವದಾಣೆ” ಎಂದು ಶಪಥ ಮಾಡಬಾರದು.
“ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿದರೂ, ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. “ಗಿಲ್ಗಾಲಿಗೆ ಹೋಗದೆ, ಇಲ್ಲವೆ ಬೇತಾವೆನಿಗೆ ಏರದೇ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡದೆ ಇರಲಿ.
16 ೧೬ ಇಸ್ರಾಯೇಲು ಮೊಂಡ ಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲ ಸ್ಥಳದಲ್ಲಿ ಮೇಯಿಸುವನೋ?
ಹಠಮಾರಿ ಹಸುವಿನ ಹಾಗೆ ಇಸ್ರಾಯೇಲು ಹಟಮಾರಿಯಾಗಿದೆ. ಈಗ ಯೆಹೋವ ದೇವರು ಹುಲ್ಲುಗಾವಲಲ್ಲಿರುವ ಕುರಿಮರಿಯ ಹಾಗೆ ಅವರನ್ನು ಹೇಗೆ ಮೇಯಿಸುವರು?
17 ೧೭ ಎಫ್ರಾಯೀಮು ವಿಗ್ರಹಗಳಲ್ಲಿ ಬೆರತುಹೋಗಿದೆ; ಅದನ್ನು ಬಿಟ್ಟುಬಿಡಿರಿ.
ಎಫ್ರಾಯೀಮನು ವಿಗ್ರಹಗಳಿಗೆ ಸೇರಿಕೊಂಡಿದ್ದಾನೆ. ಅವನನ್ನು ಅವನಷ್ಟಕ್ಕೆ ಬಿಟ್ಟುಬಿಡು.
18 ೧೮ ಮದ್ಯಪಾನ ಮುಗಿದ ಕೂಡಲೆ ವ್ಯಭಿಚಾರದಲ್ಲಿ ತೊಡಗುತ್ತಾರೆ; ದೇಶಪಾಲಕರು ಅವಮಾನದಲ್ಲಿ ಅತ್ಯಾಶೆಪಡುತ್ತಾರೆ.
ಅವರು ಮಿತಿಮೀರಿ ಕುಡಿಯುತ್ತಾರೆ. ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ. ಅವರನ್ನು ಆಳುವವರು ಅವಮಾನ ಕಾರ್ಯಗಳಲ್ಲಿ ಇಷ್ಟಪಡುತ್ತಾರೆ.
19 ೧೯ ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವುದು; ತಾವು ಮಾಡುತ್ತಿದ್ದ ವಿಗ್ರಹದ ಯಜ್ಞಗಳಿಗೆ ನಾಚಿಕೆಪಡುವರು.
ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸಿದೆ. ಅವರು ತಮ್ಮ ಬಲಿಗಳಿಂದ ನಾಚಿಕೆಪಡುವರು.

< ಹೋಶೇಯನು 4 >