< ಯೋವೇಲನು 1 >

1 ಪೆತೂವೇಲನ ಮಗನಾದ ಯೋವೇಲನಿಗೆ ಯೆಹೋವನು ದಯಪಾಲಿಸಿದ ವಾಕ್ಯವು.
ಪೆತುಯೇಲನ ಮಗನಾದ ಯೋಯೇಲನಿಗೆ ಬಂದ ಯೆಹೋವ ದೇವರು ವಾಕ್ಯವು:
2 ವೃದ್ಧರೇ, ಇದನ್ನು ಕೇಳಿರಿ, ದೇಶದ ನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ. ಇಂಥ ಬಾಧೆಯು ನಿಮ್ಮ ಕಾಲದಲ್ಲಾಗಲಿ ನಿಮ್ಮ ಪೂರ್ವಿಕರ ಕಾಲದಲ್ಲಿಯಾಗಲಿ ಸಂಭವಿಸಿತ್ತೋ?
ಹಿರಿಯರೇ, ಇದನ್ನು ಕೇಳಿರಿ: ದೇಶದ ನಿವಾಸಿಗಳೇ, ಕಿವಿಗೊಡಿರಿ. ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ?
3 ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ ಮತ್ತು ಅವರು ಮುಂದಿನ ತಲೆಮಾರಿನವರಿಗೆ ತಿಳಿಸಲಿ.
ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ, ಅವರ ಮಕ್ಕಳೂ ಮತ್ತೊಂದು ತಲಾಂತರಕ್ಕೂ ತಿಳಿಸಲಿ.
4 ಚೂರಿಮಿಡತೆ ತಿಂದು ಉಳಿದಿದ್ದ ಬೆಳೆಯನ್ನು ಗುಂಪು ಮಿಡತೆ ತಿಂದು ಬಿಟ್ಟಿತು; ಗುಂಪು ಮಿಡತೆ ತಿಂದು ಉಳಿದದ್ದನ್ನು ಕುದರೆ ಮಿಡತೆ ತಿಂದು ಬಿಟ್ಟಿತು; ಕುದರೆ ಮಿಡತೆ ತಿಂದು ಉಳಿದದ್ದನ್ನು ಕಂಬಳಿ ಮಿಡತೆ ತಿಂದುಬಿಟ್ಟಿತು.
ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು ಗುಂಪುಮಿಡತೆ ತಿಂದುಬಿಟ್ಟಿತು. ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು, ಕುದುರೆಮಿಡತೆ ತಿಂದುಬಿಟ್ಟಿತು. ಕುದುರೆಮಿಡತೆ ಬಿಟ್ಟಿದ್ದನ್ನು ಕಂಬಳಿಮಿಡತೆ ತಿಂದುಬಿಟ್ಟಿತು.
5 ಅಮಲೇರಿದವರೇ, ಎಚ್ಚರಗೊಳ್ಳಿರಿ ಮತ್ತು ಅಳಿರಿ! ದ್ರಾಕ್ಷಾರಸ ಕುಡಿಯುವವರೇ, ಗೋಳಾಡಿರಿ, ಏಕೆಂದರೆ ದ್ರಾಕ್ಷಾರಸದ ಸಿಹಿಯು ನಿಮ್ಮ ಬಾಯಿಗೆ ಸಿಕ್ಕುವುದಿಲ್ಲ.
ಅಮಲೇರಿದವರೇ, ಎಚ್ಚೆತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾರಸದ ನಿಮಿತ್ತ ಗೋಳಾಡಿರಿ; ಏಕೆಂದರೆ, ಅದು ನಿಮ್ಮ ಬಾಯಿಗೆ ಇನ್ನು ದೊರಕುವುದಿಲ್ಲ.
6 ನನ್ನ ದೇಶದ ಮೇಲೆ ಬಲಿಷ್ಠವಾದ ಹಾಗೂ ಅಸಂಖ್ಯಾತವಾದ ಒಂದು ಜನಾಂಗವು ಏರಿ ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ; ಅದರ ಕೋರೆ ಹಲ್ಲುಗಳು ಮೃಗರಾಜನ ಕೋರೆಗಳೇ.
ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು. ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ; ಅದರ ಕೋರೆಗಳು ಸಿಂಹದ ಹಲ್ಲುಗಳು, ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ.
7 ಅದು ನನ್ನ ದ್ರಾಕ್ಷಾತೋಟವನ್ನು ಹಾಳುಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದುಹಾಕಿದೆ. ಅವುಗಳನ್ನು ಹಾಳುಮಾಡಿ ದೂರ ಬಿಸಾಡಿಬಿಟ್ಟಿದೆ; ಅದರ ಕೊಂಬೆಗಳು ಬಿಳುಪಾದವು.
ಅದು ನನ್ನ ದ್ರಾಕ್ಷಿಬಳ್ಳಿಯನ್ನು ಹಾಳು ಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ. ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ. ಅದರ ಕೊಂಬೆಗಳು ಬಿಳುಪಾದವು.
8 ಯೌವನದ ಪತಿಗಾಗಿ ದುಃಖದಿಂದ ಗೋಣಿತಟ್ಟನ್ನು ಧರಿಸಿಕೊಂಡು ಗೋಳಾಡುವ ಕನ್ಯೆಯಂತೆ ಗೋಳಾಡಿರಿ.
ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ, ಕನ್ಯೆಯ ಹಾಗೆ ಪ್ರಲಾಪಿಸು.
9 ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ಯೆಹೋವನ ಆಲಯದಿಂದ ತೆಗೆಯಲ್ಪಟ್ಟಿದೆ. ಯೆಹೋವನ ಸೇವಕರಾದ ಯಾಜಕರು ಗೋಳಾಡುತ್ತಾರೆ.
ಧಾನ್ಯ ಸಮರ್ಪಣೆಯನ್ನಾಗಲಿ ಪಾನಾರ್ಪಣೆಯನ್ನಾಗಲಿ ಯೆಹೋವ ದೇವರ ಆಲಯದಲ್ಲಿ ಅರ್ಪಿಸುವುದಿಲ್ಲ. ಯೆಹೋವ ದೇವರ ಸೇವಕರಾದ ಯಾಜಕರು ಗೋಳಾಡುತ್ತಾರೆ.
10 ೧೦ ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ.
ಹೊಲವು ಹಾಳಾಗಿದೆ; ಭೂಮಿಯು ಒಣಗಿದೆ, ಧಾನ್ಯವು ನಾಶವಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ತೀರಿಹೋಗಿದೆ.
11 ೧೧ ರೈತರೇ, ರೋದಿಸಿರಿ, ತೋಟಗಾರರೇ ಗೋಳಾಡಿರಿ, ಗೋದಿಯೂ ಮತ್ತು ಜವೆಗೋದಿಯೂ ಹಾಳಾಗಿವೆ. ಹೊಲದ ಬೆಳೆಯು ನಾಶವಾಗಿದೆ.
ರೈತರೇ, ರೋದಿಸಿರಿ, ತೋಟಗಾರರೇ, ಪರಿತಪಿಸಿರಿ; ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; ಏಕೆಂದರೆ ಹೊಲದ ಬೆಳೆ ನಾಶವಾಗಿದೆ.
12 ೧೨ ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ.
ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿ ಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.
13 ೧೩ ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಗೋಳಾಡಿರಿ! ಯಜ್ಞವೇದಿಯ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಬಿದ್ದುಕೊಂಡಿರಿ. ಏಕೆಂದರೆ ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ನಿಮ್ಮ ದೇವರ ಆಲಯಕ್ಕೆ ಬಾರದೆ ನಿಂತುಹೋಗಿದೆ.
ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ. ಬಲಿಪೀಠದ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ. ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ.
14 ೧೪ ಉಪವಾಸ ಪ್ರಾರ್ಥನೆಯ ದಿನವನ್ನು ಏರ್ಪಡಿಸಿರಿ, ಪವಿತ್ರ ಸಭೆಯನ್ನು ಸೇರಿಸಿರಿ. ಹಿರಿಯರನ್ನೂ ಮತ್ತು ಸಮಸ್ತ ದೇಶದ ನಿವಾಸಿಗಳನ್ನೂ ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಬರಮಾಡಿ, ಯೆಹೋವನಿಗೆ ಮೊರೆಯಿಡಿರಿ.
ಪವಿತ್ರ ಉಪವಾಸವನ್ನು ಘೋಷಿಸಿರಿ. ಪವಿತ್ರ ಸಭೆಯನ್ನು ಕರೆಯಿರಿ. ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ, ಯೆಹೋವ ದೇವರಿಗೆ ಮೊರೆಯಿಡಿರಿ.
15 ೧೫ ಯೆಹೋವನು ಬರುವ ದಿನವು ಸಮೀಪಿಸಿತು. ಅದು ಸರ್ವಶಕ್ತನಾದ ಯೆಹೋವನಿಂದ ನಾಶವಾಗುವ ದಿನ.
ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.
16 ೧೬ ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ, ಸಂತೋಷವೂ ಹಾಗೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತ್ತಲ್ಲಾ!
ನಮ್ಮ ಕಣ್ಣೆದುರೇ ಆಹಾರವು ಹಾಳಾಯಿತಲ್ಲಾ. ಸಂತೋಷವೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತಲ್ಲವೇ?
17 ೧೭ ಬೀಜಗಳು, ಹೆಂಟೆಗಳ ಕೆಳಗೆ ಕೆಟ್ಟುಹೋಗಿವೆ. ಉಗ್ರಾಣಗಳು ಬರಿದಾಗಿವೆ. ಕಣಜಗಳು ಕೆಡವಲ್ಪಟ್ಟಿವೆ, ಏಕೆಂದರೆ ಧಾನ್ಯವು ಒಣಗಿದೆ.
ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ. ಉಗ್ರಾಣಗಳು ನಾಶವಾಗಿವೆ. ಕಣಜಗಳು ಕುಸಿದುಬಿದ್ದಿವೆ. ಏಕೆಂದರೆ ಧಾನ್ಯವು ಒಣಗಿದೆ.
18 ೧೮ ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ. ಕುರಿಹಿಂಡುಗಳು ಕಷ್ಟಪಡುತ್ತವೆ.
ಪಶುಗಳು ನರಳುತ್ತವೆ. ದನದ ಹಿಂಡುಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ; ಕುರಿಮಂದೆಗಳು ಸಹ ಕಷ್ಟಪಡುತ್ತಲಿವೆ.
19 ೧೯ ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಲುಗಾವಲನ್ನು ಬೆಂಕಿಯು ನುಂಗಿಬಿಟ್ಟಿದೆ, ವನವೃಕ್ಷಗಳನ್ನೆಲ್ಲಾ ಜ್ವಾಲೆಯು ಸುಟ್ಟುಬಿಟ್ಟಿದೆ.
ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ.
20 ೨೦ ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿಹೋಗಿವೆ. ಕಾಡಿನ ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.
ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿ ಹೋಗಿವೆ. ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.

< ಯೋವೇಲನು 1 >