< ಹೋಶೇಯನು 1 >

1 ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ಕಾಲದಲ್ಲಿ, ಅಂದರೆ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಬೆಯೇರಿಯ ಮಗನಾದ ಹೋಶೇಯನಿಗೆ ಯೆಹೋವನು ತನ್ನ ವಾಕ್ಯವನ್ನು ದಯಪಾಲಿಸಿದನು.
ಯೆಹೂದದ ಅರಸರಾದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗ ಹೋಶೇಯನಿಗೆ ಯೆಹೋವ ದೇವರ ವಾಕ್ಯವು ಬಂದಿತು.
2 ಯೆಹೋವನು ಹೋಶೇಯನ ಸಂಗಡ ಮೊದಲು ಮಾತನಾಡಿದಾಗ ಆತನು ಅವನಿಗೆ, “ನೀನು ಹೋಗಿ ಒಬ್ಬ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ. ಏಕೆಂದರೆ, ದೇಶವು ನನ್ನನ್ನು ಬಿಟ್ಟು ಅಧಿಕ ವ್ಯಭಿಚಾರವನ್ನು ನಡೆಸುತ್ತದೆ ಎಂಬುದಕ್ಕೆ ಇದು ದೃಷ್ಟಾಂತವಾಗಿರಲಿ” ಎಂದು ಹೇಳಿದನು.
ಯೆಹೋವ ದೇವರು ಹೋಶೇಯನೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಯೆಹೋವ ದೇವರು ಹೋಶೇಯನಿಗೆ, “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೋ ಮತ್ತು ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ. ಏಕೆಂದರೆ ಈ ದೇಶವು ನನ್ನನ್ನು ತೊರೆದುಬಿಟ್ಟು, ವ್ಯಭಿಚಾರಿಣಿಯಾದ ಹೆಂಡತಿಯಂತೆ ಯೆಹೋವ ದೇವರಿಗೆ ದ್ರೋಹ ಬಗೆದಿದೆ,” ಎಂದು ಹೇಳಿದರು.
3 ಅದರಂತೆ ಹೋಶೇಯನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ಕೊಟ್ಟಳು.
ಆಗ ಅವನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಬ್ಬ ಮಗನನ್ನು ಹೆತ್ತಳು.
4 ಯೆಹೋವನು ಅವನನ್ನು ಕುರಿತು, “ಈ ಮಗುವಿಗೆ ಇಜ್ರೇಲ್ ಎಂಬ ಹೆಸರಿಡು; ಇಜ್ರೇಲಿನಲ್ಲಿ ಸುರಿಸಿದ ರಕ್ತಕ್ಕೆ ಪ್ರತಿಯಾಗಿ ಸ್ವಲ್ಪ ಕಾಲದೊಳಗೆ ನಾನು ಯೇಹು ವಂಶದವರಿಗೆ ಮುಯ್ಯಿ ತೀರಿಸಿ ಇಸ್ರಾಯೇಲ್ ಜನಾಂಗವನ್ನು ನಿರ್ನಾಮ ಮಾಡುವೆನು.
ಆಗ ಯೆಹೋವ ದೇವರು ಹೋಶೇಯನಿಗೆ, “ಈ ಮಗುವಿಗೆ ಇಜ್ರೆಯೇಲ್ ಎಂದು ಹೆಸರಿಡು. ಏಕೆಂದರೆ ಶೀಘ್ರದಲ್ಲಿಯೇ ನಾನು ಇಜ್ರೆಯೇಲ್ ಕಣಿವೆಯಲ್ಲಿ ರಕ್ತವನ್ನು ಸುರಿಸಿದ ಯೇಹುವಿನ ಮನೆತನದವರ ಮೇಲೆ ಮುಯ್ಯಿತೀರಿಸಿಕೊಳ್ಳುವೆನು. ಇಸ್ರಾಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು.
5 ಆ ದಿನದಲ್ಲಿ ನಾನು ಇಜ್ರೇಲ್ ತಗ್ಗಿನೊಳಗೆ ಇಸ್ರಾಯೇಲಿನ ಬಿಲ್ಲನ್ನು ಮುರಿದುಬಿಡುವೆನು” ಎಂದನು.
ಆ ದಿನದಲ್ಲಿ, ನಾನು ಇಸ್ರಾಯೇಲಿನ ಬಿಲ್ಲು ಶಕ್ತಿಯನ್ನು ಇಜ್ರೆಯೇಲ್ ಕಣಿವೆಯಲ್ಲಿ ಮುರಿದು ಹಾಕುವೆನು,” ಎಂದು ಹೇಳಿದರು.
6 ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಯೆಹೋವನು ಹೋಶೇಯನಿಗೆ, “ಈ ಮಗುವಿಗೆ ‘ಲೋ ರುಹಾಮ’ ಎಂಬ ಹೆಸರಿಡು; ಏಕೆಂದರೆ ನಾನು ಇಸ್ರಾಯೇಲ್ ವಂಶದವರಲ್ಲಿ ಇನ್ನು ವಾತ್ಸಲ್ಯವಿಡುವುದಿಲ್ಲ, ಅವರನ್ನು ಕ್ಷಮಿಸುವುದಿಲ್ಲ.
ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವನ್ನು ಹೆತ್ತಳು. ಆಗ ಯೆಹೋವ ದೇವರು ಹೋಶೇಯನಿಗೆ, “ಅವಳನ್ನು ‘ಲೋರುಹಾಮಾ’ ಎಂಬ ಹೆಸರಿನಿಂದ ಕರೆ. ಏಕೆಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನದವರಿಗೆ ಪ್ರೀತಿ ತೋರಿಸುವುದೇ ಇಲ್ಲ, ಅವರನ್ನು ಯಾವ ರೀತಿಯೂ ಕ್ಷಮಿಸುವದಿಲ್ಲ.
7 ಆದರೆ ನಾನು ಯೆಹೂದ ವಂಶದವರಲ್ಲಿ ವಾತ್ಸಲ್ಯವಿಟ್ಟು ಅವರನ್ನು ಉದ್ಧರಿಸುವೆನು. ಬಿಲ್ಲು, ಕತ್ತಿ, ಕಾಳಗ, ಕುದುರೆ, ರಾಹುತರ, ಮೂಲಕವಲ್ಲ, ಅವರ ದೇವರಾದ ಯೆಹೋವನ ಬಲದಿಂದಲೇ ಅವರನ್ನು ರಕ್ಷಿಸುವೆನು” ಅಂದನು.
ಆದರೆ ನಾನು ಯೆಹೂದದ ಮನೆತನದವರನ್ನು ಪ್ರೀತಿಸಿ ಅವರನ್ನು ಬಿಲ್ಲುಬಾಣ, ಖಡ್ಗ, ಕಾಳಗ, ಕುದುರೆ ರಾಹುತರು ಇವುಗಳಿಂದಲ್ಲ, ಅವರನ್ನು ಅವರ ದೇವರಾದ ನಾನೇ ಯೆಹೋವ ದೇವರೇ ರಕ್ಷಿಸುವೆನು,” ಎಂದು ಹೇಳಿದರು.
8 ಆ ಕೂಸು ಮೊಲೆ ಬಿಟ್ಟ ಮೇಲೆ ಅವಳು ಪುನಃ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು.
ಗೋಮೆರಳು ಲೋರುಹಾಮಾಳನ್ನು ಎದೆಹಾಲಿನ ಸೇವನೆಯಿಂದ ಬಿಡಿಸಿದ ಮೇಲೆ ಪುನಃ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
9 ಆಗ ಯೆಹೋವನು, “ಈ ಮಗುವಿಗೆ ‘ಲೋ ಅಮ್ಮಿ’ ಎಂಬ ಹೆಸರಿಡು; ಏಕೆಂದರೆ ನೀವು ನನ್ನ ಪ್ರಜೆಯಲ್ಲ, ನಾನು ಇನ್ನು ನಿಮ್ಮ ದೇವರಲ್ಲ” ಎಂದನು.
ಆಗ ಯೆಹೋವ ದೇವರು, “‘ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ. ಏಕೆಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವುದಿಲ್ಲ,’ ಎಂದು ಹೇಳಿದರು.
10 ೧೦ ಇಸ್ರಾಯೇಲರ ಸಂಖ್ಯೆಯು ಅಳೆಯುವುದಕ್ಕೂ, ಲೆಕ್ಕಿಸುವುದಕ್ಕೂ ಅಸಾಧ್ಯವಾದ ಸಮುದ್ರತೀರದ ಮರಳಿನಂತಾಗುವುದು. ಆಗ ಅವರು ನನ್ನ ಪ್ರಜೆಯಲ್ಲ ಎನಿಸಿಕೊಳ್ಳುವುದಕ್ಕೆ ಬದಲಾಗಿ ಜೀವಸ್ವರೂಪನಾದ ದೇವರ ಮಕ್ಕಳು ಎನಿಸಿಕೊಳ್ಳುವರು.
“ಆದರೂ ಇಸ್ರಾಯೇಲ್ ಜನರು ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವರು. ದೇವರು ಯಾವ ಸ್ಥಳದಲ್ಲಿ ಅವರನ್ನು, ‘ನೀವು ನನ್ನ ಜನರಲ್ಲ’ ಎಂದಿದ್ದಾರೋ ಆ ಸ್ಥಳದಲ್ಲಿಯೇ, ‘ನೀವು ಜೀವಸ್ವರೂಪಿಯಾದ ದೇವರ ಮಕ್ಕಳು’ ಎನಿಸಿಕೊಳ್ಳುವ ದಿನ ಬರುವುದು.
11 ೧೧ ಯೆಹೂದ್ಯರು ಮತ್ತು ಇಸ್ರಾಯೇಲರೂ ಒಟ್ಟುಗೂಡಿ ಒಬ್ಬನನ್ನೇ ಶಿರಸ್ಸನ್ನಾಗಿ ಮಾಡಿಕೊಂಡು ದೇಶದೊಳಗಿಂದ ಹೊರಡುವರು; ಇಜ್ರೇಲಿನ ಸುದಿನವು ಅತಿವಿಶೇಷವಾದದ್ದು.
ಆಗ ಯೆಹೂದದ ಜನರು ಮತ್ತು ಇಸ್ರಾಯೇಲ್ ಜನರು ಒಟ್ಟುಗೂಡಿಕೊಂಡು ತಮಗೆ ಒಬ್ಬ ನಾಯಕನನ್ನು ನೇಮಕ ಮಾಡಿಕೊಂಡು, ದೇಶದೊಳಗಿಂದ ಹೊರಗೆ ಬರುವರು. ಏಕೆಂದರೆ ಇಜ್ರೆಯೇಲಿನ ಆ ದಿನವು ಮಹಾದಿನವಾಗಿರುವುದು.

< ಹೋಶೇಯನು 1 >