< ಕೀರ್ತನೆಗಳು 138 >

1 ದಾವೀದನ ಕೀರ್ತನೆ. ಯೆಹೋವನೇ, ಪೂರ್ಣಮನಸ್ಸಿನಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಎದುರಿನಲ್ಲಿ ನಿನ್ನನ್ನು ಕೀರ್ತಿಸುವೆನು.
ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿಮ್ಮನ್ನು ಸ್ತುತಿಸುವೆನು.
2 ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುತ್ತೇನೆ; ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ ನಿನ್ನ ನಾಮವನ್ನು ಕೊಂಡಾಡುತ್ತೇನೆ. ನಿನ್ನ ನಾಮದ ಮತ್ತು ಆಜ್ಞೆಯ ಘನಪಡಿಸಿ ತೋರಿಸಿದ್ದೀ.
ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಅಡ್ಡಬಿದ್ದು, ನಿಮ್ಮ ಒಡಂಬಡಿಕೆಯ ಪ್ರೀತಿ, ನಿಮ್ಮ ಸತ್ಯತೆಯ ನಿಮಿತ್ತ ನಿಮ್ಮ ಹೆಸರನ್ನು ಕೊಂಡಾಡುವೆನು; ನೀವು ನಿಮ್ಮ ವಾಕ್ಯವನ್ನು ನಿಮ್ಮ ಹೆಸರಿಗಿಂತಲೂ ಮಿಗಿಲಾಗಿ ಘನಪಡಿಸಿದ್ದೀರಿ.
3 ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ.
ನಾನು ಕರೆದಾಗ ನೀವು ನನಗೆ ಉತ್ತರಕೊಟ್ಟಿರುವಿರಿ. ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು, ನನ್ನನ್ನು ಬಲಪಡಿಸಿದ್ದೀರಿ.
4 ಯೆಹೋವನೇ, ಭೂರಾಜರೆಲ್ಲರು ನೀನು ನುಡಿದ ನುಡಿಗಳನ್ನು ಕೇಳಿ ನಿನ್ನನ್ನು ಸ್ತುತಿಸುವರು.
ಯೆಹೋವ ದೇವರೇ, ನಿಮ್ಮ ತೀರ್ಪುಗಳನ್ನು ಭೂಮಿಯ ಅರಸರೆಲ್ಲರೂ ಕೇಳುವಾಗ, ನಿಮ್ಮನ್ನು ಕೊಂಡಾಡಲಿ.
5 ಅವರು ಯೆಹೋವನ ಮಾರ್ಗಗಳನ್ನು ಹಾಡಿಹರಸುವರು; ಯೆಹೋವನ ಪ್ರಭಾವವು ದೊಡ್ಡದಾಗಿದೆಯಲ್ಲಾ.
ಹೌದು, ಅವರು ಯೆಹೋವ ದೇವರ ಮಾರ್ಗಗಳ ಯೆಹೋವ ದೇವರ ಮಹಿಮೆಯು ಮಹೋನ್ನತವಾಗಿದೆ.
6 ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತು ಹಿಡಿಯುತ್ತಾನೆ.
ಯೆಹೋವ ದೇವರು ಉನ್ನತರಾಗಿದ್ದರೂ, ದೀನನನ್ನು ಗಮನಿಸುತ್ತಾರೆ; ಆದರೆ ಗರ್ವಿಷ್ಠನನ್ನು ದೂರದಿಂದ ತಿಳಿದುಕೊಳ್ಳುತ್ತಾರೆ.
7 ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ, ನನ್ನನ್ನು ಚೈತನ್ಯಗೊಳ್ಳಿಸುವಿ, ನನ್ನ ಶತ್ರುಗಳ ಕೋಪಕ್ಕೆ ವಿರುದ್ಧವಾಗಿ ನಿನ್ನ ಕೈ ಚಾಚುವಿ, ನಿನ್ನ ಬಲಗೈ ನನ್ನನ್ನು ರಕ್ಷಿಸುವುದು.
ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ, ನೀವು ನನ್ನನ್ನು ಬದುಕಿಸಿ, ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿಮ್ಮ ಕೈಯನ್ನು ಚಾಚಿದ್ದೀರಿ; ನಿಮ್ಮ ಬಲಗೈಯಿಂದ ನನ್ನನ್ನು ರಕ್ಷಿಸಿದ್ದೀರಿ.
8 ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು. ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು, ನೀನು ಕೈಹಾಕಿದ ಕೆಲಸವನ್ನು ನೆರವೇರಿಸದೆ ಬಿಡಬೇಡ.
ಯೆಹೋವ ದೇವರು ನನ್ನ ನ್ಯಾಯವನ್ನು ಸಿದ್ಧಿಗೆ ತರುತ್ತಾರೆ; ಯೆಹೋವ ದೇವರೇ, ನಿಮ್ಮ ಪ್ರೀತಿಯು ಎಂದೆಂದಿಗೂ ಇರುವುದು; ನಿಮ್ಮ ಕೈಕೆಲಸಗಳನ್ನು ನೆರವೇರಿಸಿರಿ.

< ಕೀರ್ತನೆಗಳು 138 >