< ಕೀರ್ತನೆಗಳು 124 >

1 ಯಾತ್ರಾಗೀತೆ; ದಾವೀದನದು. “ಯೆಹೋವನು ನಮಗಿಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?”, ಎಂದು ಇಸ್ರಾಯೇಲರೇ ಹೇಳಲಿ.
ದಾವೀದನ ಯಾತ್ರಾ ಗೀತೆ. ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ, ಏನಾಗುತ್ತಿತ್ತು ಎಂದು ಇಸ್ರಾಯೇಲರೇ ಹೇಳಲಿ.
2 ನರ ಮನುಷ್ಯರು ನಮಗೆ ವಿರುದ್ಧವಾಗಿ ಎದ್ದಾಗ, ಯೆಹೋವನು ನಮಗಿಲ್ಲದಿದ್ದರೆ,
ವೈರಿಗಳು ನಮಗೆ ವಿರೋಧವಾಗಿ ಎದ್ದಾಗ ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ,
3 “ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು, ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು;
ಅವರು ನಮ್ಮ ಮೇಲೆ ರೋಷಗೊಂಡು ನಮ್ಮನ್ನು ನಾಶಮಾಡಿಬಿಡುತ್ತಿದ್ದರು.
4 ನಿಶ್ಚಯವಾಗಿ ಪ್ರವಾಹವು ನಮ್ಮನ್ನು ಬಡಿದುಕೊಂಡು ಹೋಗುತ್ತಿತ್ತು; ನದಿಯು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತಿತ್ತು;
ಆಗ ಪ್ರವಾಹವು ನಮ್ಮನ್ನು ಮುಳುಗಿಸುತ್ತಿತ್ತು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.
5 ಮೀರಿದ ಪ್ರವಾಹವು ನಮ್ಮನ್ನು ಮುಳುಗಿಸಿಬಿಡುತ್ತಿತ್ತು.”
ರಭಸ ಪ್ರವಾಹ ನಮ್ಮನ್ನು ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು.
6 ಯೆಹೋವನಿಗೆ ಕೊಂಡಾಟವಾಗಲಿ; ಆತನು ನಮ್ಮನ್ನು ಅವರ ಹಲ್ಲುಗಳಿಗೆ ಸೀಳಿಬಿಡಲು ಕೊಡಲಿಲ್ಲ.
ಆದರೆ ನಮ್ಮನ್ನು ವೈರಿಗಳ ಹಲ್ಲುಗಳಿಗೆ ಬೇಟೆಯಾಗಿ ಕೊಡದೆ ಇದ್ದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
7 ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು.
ನಾವು ಬೇಟೆಗಾರರ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತೆ ಇದ್ದೇವೆ. ನಾವು ಹರಿದುಹೋದ ಬಲೆಯಿಂದ ತಪ್ಪಿಸಿಕೊಂಡೆವು.
8 ಭೂಮಿ, ಆಕಾಶಗಳನ್ನು ಉಂಟುಮಾಡಿದ, ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವುದು.
ನಮ್ಮ ಸಹಾಯವು ಆಕಾಶವನ್ನೂ, ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರ ಹೆಸರಿನಲ್ಲಿ ಒದಗಿ ಬಂತು.

< ಕೀರ್ತನೆಗಳು 124 >