< ಯೋಬನು 30 >

1 ಈಗಲಾದರೋ ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ; ಇವರ ಹೆತ್ತವರನ್ನು ನನ್ನ ಕುರಿ ಮಂದೆಯ ನಾಯಿಗಳ ಸಂಗಡ ಸೇರಿಸುವುದಕ್ಕೂ ಉದಾಸಿನ ಮಾಡಿದೆನು.
“ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು, ನನ್ನನ್ನು ನೋಡಿ ಪರಿಹಾಸ್ಯ ಮಾಡುತ್ತಾರೆ. ಇವರ ಪಿತೃಗಳನ್ನು ನನ್ನ ಕುರಿಮಂದೆಯ ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆನು.
2 ಅವರ ಕೈ ಬಲದಿಂದ ನನಗೆ ಏನಾದೀತು? ಅವರ ಪುಷ್ಟಿಯು ಕುಗ್ಗಿಹೋಗಿದೆಯಷ್ಟೆ.
ಇವರ ಕೈಗಳ ಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಚೈತನ್ಯವು ಕುಗ್ಗಿಹೋಗಿತ್ತು!
3 ಅವರು ಕೊರತೆಯಿಂದಲೂ, ಹಸಿವಿನಿಂದಲೂ ಸೊರಗಿ, ನಿನ್ನೆಯವರೆಗೂ ಹಾಳುಬೀಳಾದ ಒಣ ನೆಲವನ್ನು ನೆಕ್ಕುವರು.
ಅವರು ಬಡತನದಿಂದಲೂ ಹಸಿವಿನಿಂದಲೂ ಬಳಲಿಹೋಗಿದ್ದರು. ನಿರ್ಜನ ಮತ್ತು ಕತ್ತಲೆಯಾದ ಮರುಭೂಮಿಗಳ ಕಡೆಗೆ ಆಹಾರಕ್ಕಾಗಿ ಓಡಾಡುತ್ತಿದ್ದರು.
4 ಪೊದೆಗಳಲ್ಲಿ ಉಪ್ಪಿನ ಸೊಪ್ಪನ್ನು ಕಿತ್ತು, ತಿಂದು ಜಾಲಿಯ ಬೇರುಗಳನ್ನೂ ಆಹಾರಮಾಡಿಕೊಳ್ಳುವರು.
ಪೊದೆಗಳಲ್ಲಿನ ಉಪ್ಪಿನ ಸೊಪ್ಪು ಸಂಗ್ರಹಿಸುತ್ತಿದ್ದರು. ಜಾಲಿಯ ಬೇರುಗಳೇ ಅವರ ಆಹಾರವಾಗಿತ್ತು.
5 ಜನರು ಅವರನ್ನು ತಮ್ಮ ಮಧ್ಯದಿಂದ ತಳ್ಳಿಬಿಟ್ಟು, ಕಳ್ಳನನ್ನು ಓಡಿಸುವ ಹಾಗೆ ಕೂಗಾಡಿ ಓಡಿಸುವರು.
ಜನರು ಅವರನ್ನು ಹೊರಗೆ ಹಾಕುತ್ತಿದ್ದರು; ಕಳ್ಳರು ಎಂಬಂತೆ ಅವರನ್ನು ಓಡಿಸುತ್ತಿದ್ದರು.
6 ಅವರು ಭಯಂಕರವಾದ ತಗ್ಗುಗಳ ಸಂದುಗಳಲ್ಲಿ ವಾಸಿಸತಕ್ಕವರು, ಭೂಮಿಯಲ್ಲಿಯೂ, ಬಂಡೆಗಳಲ್ಲಿಯೂ ಇರುವ ಗುಹೆಗಳೇ ಅವರ ಮನೆಗಳು.
ಆಗ ಅವರು ಭಯಂಕರ ತಗ್ಗುಗಳ ಸಂದುಗಳಲ್ಲಿಯೂ, ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸಿಸುತ್ತಿದ್ದರು.
7 ಪೊದೆಗಳ ಮಧ್ಯದಲ್ಲಿ ಅರಚುವರು ಕತ್ತೆಗಳಂತೆ, ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುವರು.
ಪೊದೆಗಳ ನಡುವೆ ಇದ್ದುಕೊಂಡು ಅರಚುತ್ತಿದ್ದರು. ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
8 ಮೂರ್ಖರ ಮಕ್ಕಳಾದ ಈ ನೀಚ ಜಾತಿಯವರು ದೇಶಭ್ರಷ್ಟರು. ಅವರು ಕೊರಡೆಗಳ ಪೆಟ್ಟಿನಿಂದ ದೇಶದಿಂದ ಹೊರಹಾಕಲ್ಪಟ್ಟಿದ್ದರೆ.
ಆಗ ಅವರು ಹುಚ್ಚರಂತೆಯೂ ಹೆಸರಿಲ್ಲದ ಮಕ್ಕಳಂತೆಯೂ ನಾಡಿನಿಂದ ಹೊರಗೆ ಅಲೆದಾಡುತ್ತಿದ್ದರು.
9 ಈಗಲಾದರೋ ನನ್ನ ಮೇಲೆ ಗೇಲಿಮಾಡುವ ಹಾಡುಗಳನ್ನು ಕಟ್ಟುವರು. ಮತ್ತು ಅವರ ಕಟ್ಟುಕಥೆಗಳಿಗೆ ಆಸ್ಪದವಾಗಿದ್ದೇನೆ.
“ಆದರೆ ಈಗ ನಾನು ಅವರ ಹಾಸ್ಯದ ಹಾಡೂ, ಅವರಿಗೆ ಗಾದೆಯೂ ಆಗಿದ್ದೇನೆ.
10 ೧೦ ನನಗೆ ಅಸಹ್ಯಪಟ್ಟು ದೂರ ನಿಂತು, ನನ್ನ ಮೇಲೆ ಉಗುಳುವುದಕ್ಕೂ ಹಿಂದೆಗೆಯರು.
ಈಗ ನನ್ನನ್ನು ಕಂಡು ಅಸಹ್ಯಪಟ್ಟು, ನನ್ನಿಂದ ದೂರಸರಿಯುತ್ತಿದ್ದಾರೆ. ನನ್ನ ಮುಖದ ಮೇಲೆ ಉಗುಳಲೂ ಹಿಂಜರಿಯುವದಿಲ್ಲ.
11 ೧೧ ದೇವರು ತಾನು ಹಾಕಿದ್ದ ಕಟ್ಟನ್ನು ಸಡಲಿಸಿ ನನ್ನನ್ನು ಬಾಧಿಸುವುದಕ್ಕೆ ಅವರನ್ನು ಬಿಟ್ಟಿದ್ದಾನೆ. ಅವರು ನನ್ನ ಎದುರಿನಲ್ಲಿಯೇ ಕಡಿವಾಣವನ್ನು ಕಿತ್ತು ಹಾಕಿದ್ದಾರೆ.
ಏಕೆಂದರೆ, ದೇವರು ನನ್ನ ಬಿಲ್ಲಿನ ಹಗ್ಗವನ್ನು ಸಡಲಿಸಿ, ಅವರಿಂದ ನನ್ನನ್ನು ಬಾಧಿಸಿದ್ದಾರೆ. ಆದ್ದರಿಂದ ಈಗ ಅವರು ಯಾವುದೇ ನಿರ್ಬಂಧವಿಲ್ಲದಂತೆ ನನ್ನ ಮೇಲೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ.
12 ೧೨ ಆ ಕಲಹಗಾರರು ನನ್ನ ಬಲಗಡೆ ಎದ್ದು, ನನ್ನ ಕಾಲುಗಳನ್ನು ಹಿಂದಕ್ಕೆ ತಳ್ಳುತ್ತಾ ನನ್ನ ನಾಶಕ್ಕಾಗಿ ಹೊಂಚು ಹಾಕಿದ್ದಾರೆ.
ಬಲಗಡೆಯಲ್ಲಿ ಯುವಕರು ಎದ್ದಿದ್ದಾರೆ; ಅವರು ನನ್ನ ಕಾಲುಗಳಿಗೆ ಬಲೆ ಹಾಕಿದ್ದಾರೆ. ನನ್ನನ್ನು ನಾಶಮಾಡಲು ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಿದ್ದಾರೆ.
13 ೧೩ ಅವರು ನನ್ನ ದಾರಿಯನ್ನು ಕಡಿದು, ನನ್ನ ಉಪದ್ರವವನ್ನು ಹೆಚ್ಚಿಸುತ್ತಾರೆ; ಅವರನ್ನು ಎದುರಿಸತಕ್ಕ ಸಹಾಯಕನು ಯಾರೂ ಇಲ್ಲ.
ನನ್ನ ದಾರಿಯನ್ನೂ ಕಡಿದುಹಾಕಿದ್ದಾರೆ; ಅವರು ನನ್ನನ್ನು ನಾಶಮಾಡಲು ಯಶಸ್ವಿಯಾಗುತ್ತಿದ್ದಾರೆ; ‘ಅವನಿಗೆ ಸಹಾಯಕನಿಲ್ಲ,’ ಎಂದು ಹೇಳುತ್ತಿದ್ದಾರೆ.
14 ೧೪ ಕೋಟೆ ಬಿರುಕುಗಳಲ್ಲಿ ನುಗ್ಗಿ, ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ.
ಆ ಯುವಕರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬರುತ್ತಿದ್ದಾರೆ; ನಾಶನದಲ್ಲಿರುವ ನನ್ನ ಮೇಲೆ ಅವರು ಉರುಳಿಬೀಳಲಿದ್ದಾರೆ.
15 ೧೫ ಅಪಾಯಗಳು ನನ್ನ ಮೇಲೆ ತಿರುಗಿಬಿದ್ದು; ನನ್ನ ಮಾನವನ್ನು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿವೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಯಿತು.
ವಿಪತ್ತುಗಳು ನನ್ನ ಮೇಲೆ ತಿರುಗಿಬಿದ್ದು, ನನ್ನ ಮಾನಮರ್ಯಾದೆ ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಗುತ್ತಿದೆ.
16 ೧೬ ಈಗ ನನ್ನ ಆತ್ಮವು ಕರಗಿಹೋಗಿದೆ, ಬಾಧೆಯ ದಿನಗಳು ನನ್ನನ್ನು ಹಿಡಿದುಕೊಂಡಿವೆ.
“ಆದರೆ ಈಗ ನನ್ನ ಪ್ರಾಣವು ನನ್ನಲ್ಲಿಯೇ ಕರಗಿಹೋಗಿದೆ; ಸಂಕಟದ ದಿವಸಗಳು ನನ್ನನ್ನು ಬಿಗಿಹಿಡಿದಿವೆ.
17 ೧೭ ರಾತ್ರಿಯು ನನ್ನ ಎಲುಬುಗಳನ್ನು ಕೊರೆದು ಕೀಳುತ್ತದೆ, ನನ್ನನ್ನು ಕಚ್ಚುತ್ತಿರುವ ಸಂಕಟಗಳು ಸುಮ್ಮನಿರುವುದಿಲ್ಲ.
ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ಕೊರೆಯುತ್ತಿವೆ; ನನ್ನ ಸಂಕಟಗಳು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
18 ೧೮ ನನ್ನ ಬಟ್ಟೆಯು ರೋಗದ ಅಧಿಕ ಬಲದಿಂದ ಕೆಟ್ಟುಹೋಗಿ; ಅಂಗಿಯ ಕೊರಳ ಪಟ್ಟಿಯ ಹಾಗೆ ನನ್ನನ್ನು ಸುತ್ತಿಕೊಂಡಿದೆ.
ದೇವರ ಅಧಿಕ ಬಲದಲ್ಲಿ ನನ್ನ ಬಟ್ಟೆಯು ರೋಗದಿಂದ ಬಿಗಿಯಾಗಿ, ಅಂಗಿಯ ಕೊರಳ ಪಟ್ಟಿಯಂತೆ ನನ್ನನ್ನು ಸುತ್ತಿಕೊಂಡಿದೆ.
19 ೧೯ ಆತನು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾನೆ, ಧೂಳುಬೂದಿಗಳಿಗೆ ಸಮಾನನಾಗಿದ್ದೇನೆ.
ದೇವರು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾರೆ; ನಾನು ಧೂಳಿಗೂ ಬೂದಿಗೂ ಸಮಾನನಾಗಿದ್ದೇನೆ.
20 ೨೦ ಓ ದೇವರೇ ನಾನು ನಿನಗೆ ಮೊರೆಯಿಟ್ಟರೂ ನೀನು ಉತ್ತರಕೊಡುವುದಿಲ್ಲ, ಎದ್ದು ನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿ.
“ದೇವರೇ, ನಿಮಗೆ ಮೊರೆಯಿಡುತ್ತೇನೆ ಆದರೆ ನೀವು ನನಗೆ ಉತ್ತರ ಕೊಡುವುದಿಲ್ಲ, ನಾನು ಎದ್ದುನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿರಿ.
21 ೨೧ ನೀನು ನನಗೆ ಕ್ರೂರನಾಗಿ ಮಾರ್ಪಟ್ಟಿದ್ದಿ, ನಿನ್ನ ಕೈಬಲದಿಂದ ನನ್ನನ್ನು ಹಿಂಸಿಸುತ್ತಿ.
ನೀವು ನನಗೆ ಕ್ರೂರರಾಗಿದ್ದೀರಿ, ನಿಮ್ಮ ಹಸ್ತ ಶಕ್ತಿಯಿಂದ ನನಗೆ ಹಿಂಸೆಕೊಡುತ್ತೀರಿ.
22 ೨೨ ನನ್ನನ್ನು ಬಿರುಗಾಳಿಗೆ ಎತ್ತಿ ತೂರಿಬಿಟ್ಟು, ಅದರ ಆರ್ಭಟದಲ್ಲಿ ಮಾಯಮಾಡುತ್ತಿ.
ನನ್ನನ್ನು ಗಾಳಿಗೆ ಎತ್ತಿ ತೂರಿಬಿಟ್ಟಿರುವಿರಿ, ನನ್ನನ್ನು ಬಿರುಗಾಳಿಗೆ ತೊಳಲಾಡುವಂತೆ ಮಾಡಿದ್ದೀರಿ.
23 ೨೩ ನೀನು ನನ್ನನ್ನು ಮರಣಕ್ಕೆ ಗುರಿಮಾಡಿ, ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ.
ದೇವರೇ, ನೀವು ನನ್ನನ್ನು ಎಲ್ಲಾ ಜೀವಿಗಳಿಗೆ ನೇಮಕವಾದ ಮನೆಯೆಂಬ ಮರಣಕ್ಕೆ, ಸೇರಿಸುವಿರಿ ಎಂದು ನನಗೆ ಗೊತ್ತಿದೆ.
24 ೨೪ ಆದರೂ ನಾಶಕ್ಕೆ ಒಳಗಾದವನು ಕೈಚಾಚುವುದಿಲ್ಲವೋ? ಆಪತ್ತಿಗೆ ಒಳಪಟ್ಟವನು ಕೂಗಿಕೊಳ್ಳುವುದಿಲ್ಲವೋ?
“ಆದರೂ ಮುರಿದ ಮನುಷ್ಯನಾಗಿರುವ ನಾನು ಸಹಾಯಕ್ಕಾಗಿ ಕೈಚಾಚಬಾರದೆ? ಆಪತ್ತಿಗೆ ಒಳಪಟ್ಟವನಾದ ನಾನು ಕೂಗಿಕೊಳ್ಳಬಾರದೆ?
25 ೨೫ ಕಷ್ಟಾನುಭವಿಯನ್ನು ಕಂಡು ನಾನು ಕಣ್ಣೀರಿಡಲಿಲ್ಲವೇ? ದಿಕ್ಕಿಲ್ಲದವನಿಗೆ ದುಃಖಿಸುವವನೂ ಆಗಿದ್ದೇನಷ್ಟೆ.
ಕಷ್ಟದಲ್ಲಿ ಇದ್ದವರಿಗೋಸ್ಕರ ನಾನು ಕಣ್ಣೀರಿಡಲಿಲ್ಲವೆ? ದರಿದ್ರನಿಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೆ?
26 ೨೬ ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರುವಲ್ಲಿ ಕೇಡು ಬಂತು, ಬೆಳಕನ್ನು ಎದುರು ನೋಡುತ್ತಿರುವಾಗ ಕತ್ತಲಾಯಿತು.
ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರಲು ಕೇಡು ಬಂದೊದಗಿತು; ನಾನು ಬೆಳಕನ್ನು ಎದುರು ನೋಡಲು, ಅಂಧಕಾರ ಬಂದು ಕವಿಯಿತು.
27 ೨೭ ನನ್ನ ಹೃದಯವು ಕುದಿಯುತ್ತಿದೆ, ಅದಕ್ಕೆ ಶಾಂತಿಯಿಲ್ಲ; ಬಾಧೆಯ ದಿನಗಳು ನನಗೆ ಒದಗಿವೆ.
ನನ್ನ ಹೃದಯವು ಯಾವಾಗಲೂ ಅಶಾಂತಿಯಿಂದ ಕುದಿಯುತ್ತಿದೆ; ಸಂಕಟಗಳ ದಿವಸಗಳು ನನ್ನನ್ನು ಎದುರಿಸುತ್ತಿವೆ.
28 ೨೮ ಸಂತೈಸುವ ಸೂರ್ಯನಿಲ್ಲದೆ; ಮಂಕುಬಡಿದಂತೆ ಅಲೆಯುತ್ತಾ ಸಭೆಯ ಮಧ್ಯನಿಂತು ಅಂಗಲಾಡುತ್ತಿದ್ದೇನೆ. ಸಂಘದಲ್ಲಿ ನಿಂತು ಅಂಗಲಾಚಿಕೊಳ್ಳುತ್ತೇನೆ.
ಬಿಸಿಲು ನನ್ನ ಮೇಲೆ ಬೀಳದಿದ್ದರೂ ನಾನು ಕಪ್ಪಾಗಿ ಹೋದೆನು; ನಾನು ಸಭೆಯಲ್ಲಿ ಎದ್ದು ನಿಂತು ಸಹಾಯಕ್ಕಾಗಿ ಕೂಗಿದೆನು.
29 ೨೯ ನಾನು ನರಿಗಳ ತಮ್ಮನೂ, ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.
ನಾನು ನರಿಗಳಿಗೆ ಸಹೋದರನಾದೆನು; ಗೂಬೆಗಳಿಗೆ ನಾನು ಜೊತೆಯವನಾದೆನು.
30 ೩೦ ನನ್ನ ಚರ್ಮವು ಕರಿದಾಗಿ ಉದುರುತ್ತದೆ, ನನ್ನ ಎಲುಬುಗಳು ತಾಪದಿಂದ ಬೆಂದಿದೆ.
ನನ್ನ ಮೇಲಿನ ಚರ್ಮವು ಕಪ್ಪಾಗಿ ಉದುರುತ್ತಿದೆ; ನನ್ನ ಶರೀರ ಜ್ವರದಿಂದ ಬಿಸಿಯಾಗಿದೆ.
31 ೩೧ ಇದರಿಂದ ನನ್ನ ಕಿನ್ನರಿಯಲ್ಲಿ ಗೋಳಾಟವೂ, ನನ್ನ ಕೊಳಲಿನಲ್ಲಿ ಅಳುವ ಧ್ವನಿಯೂ ಕೇಳಿಸುತ್ತವೆ.
ನನ್ನ ಕಿನ್ನರಿಯಲ್ಲಿ ಗೋಳಾಟದ ಧ್ವನಿಯು ಕೇಳಿಸುತ್ತಿದೆ. ನನ್ನ ಕೊಳಲಿನಲ್ಲಿ ಅಳುವವರ ಸ್ವರವೇ ಕೇಳಿಬರುತ್ತಿದೆ.

< ಯೋಬನು 30 >