< ಯೋಬನು 23 >

1 ಆಗ ಯೋಬನು ಇಂತೆಂದನು,
ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
2 “ನಾನು ನನ್ನ ನರಳಾಟವನ್ನು ಎಷ್ಟು ಬಿಗಿಹಿಡಿದರೂ; ಆ ನನ್ನ ಮುಲುಗುವಿಕೆಯು ದೇವದ್ರೋಹವೆಂದು ಈಗಲೂ ಎಣಿಸುತ್ತೀರಾ?
“ಇಂದಿಗೂ ನನ್ನ ದೂರು ಕಹಿಯಾಗಿದೆ; ನಾನು ನಿಟ್ಟುಸಿರಿಟ್ಟರೂ ದೇವರ ಹಸ್ತವು ಭಾರವಾಗಿದೆ.
3 ಆಹಾ, ಆತನ ದರ್ಶನವು ಎಲ್ಲಿ ಆದೀತು, ನನಗೆ ಗೊತ್ತಾಗಿದ್ದರೆ ಎಷ್ಟೋ ಸಂತೋಷ! ಆತನ ಸನ್ನಿಧಿಯನ್ನು ಸೇರೆನು.
ದೇವರನ್ನು ಎಲ್ಲಿ ಕಂಡುಕೊಳ್ಳಬೇಕೆಂದು ನನಗೆ ತಿಳಿದಿದ್ದರೆ, ಎಷ್ಟೋ ಒಳ್ಳೆಯದು! ಸಾಧ್ಯವಾದರೆ ನಾನು ದೇವರು ವಾಸಿಸುವ ಸ್ಥಳದ ತನಕ ಹೋಗುತ್ತಿದ್ದೆ.
4 ನನ್ನ ಬಾಯಿಯನ್ನು ತರ್ಕಗಳಿಂದ ತುಂಬಿಸಿಕೊಂಡು ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸುವೆನು.
ನನ್ನ ನ್ಯಾಯವನ್ನು ದೇವರ ಮುಂದೆ ವಿವರಿಸುತ್ತಿದ್ದೆ; ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುತ್ತಿದ್ದೆ.
5 ಆತನ ಪ್ರತ್ಯುತ್ತರದ ಮಾತುಗಳನ್ನು ತಿಳಿದುಕೊಂಡು ಆತನು ನನಗೆ ಹೇಳುವುದನ್ನು ವಿವೇಚಿಸುವೆನು.
ದೇವರು ನನಗೆ ಉತ್ತರವಾಗಿ ಕೊಡುವ ಮಾತುಗಳನ್ನು ಕಂಡುಹಿಡಿದು, ದೇವರು ನನಗೆ ಹೇಳುವುದನ್ನು ಪರಿಗಣಿಸುತ್ತಿದ್ದೆ.
6 ಆತನು ತನ್ನ ಮಹಾಶಕ್ತಿಯಿಂದ ನನ್ನ ಸಂಗಡ ವ್ಯಾಜ್ಯವಾಡುವನೋ? ಇಲ್ಲವೇ ಇಲ್ಲ; ನನ್ನ ವಿಜ್ಞಾಪನೆಯನ್ನು ಗಮನಿಸುವನು.
ದೇವರು ನನ್ನನ್ನು ಕಠಿಣವಾಗಿ ವಿರೋಧಿಸುತ್ತಾರೋ? ಇಲ್ಲ, ಖಂಡಿತವಾಗಿ ಅವರು ನನ್ನ ವಿರುದ್ಧ ಆರೋಪಗಳನ್ನು ಹೊರಿಸುವುದಿಲ್ಲ.
7 ಅಲ್ಲಿ ಯಥಾರ್ಥಚಿತ್ತನು ಆತನೊಂದಿಗೆ ವಾದಿಸುವನು. ನನ್ನ ನ್ಯಾಯಾಧಿಪತಿಯಿಂದ ನನಗೆ ನಿತ್ಯವಾದ ಬಿಡುಗಡೆಯಾಗುವುದು.
ದೇವರ ಸನ್ನಿಧಿಯಲ್ಲಿ ಯಥಾರ್ಥವಂತನು ತಾನು ನಿರಪರಾಧಿ ಎಂದು ದೃಢಪಡಿಸಲು ಸಾಧ್ಯ; ಅಲ್ಲಿ ನನಗೆ ನನ್ನ ನ್ಯಾಯಾಧಿಪತಿಯಿಂದ ಶಾಶ್ವತವಾಗಿ ಬಿಡುಗಡೆಯಾಗುವುದು.
8 ಅಯ್ಯೋ, ನಾನು ಮುಂದೆ ಹೋದರೂ ಆತನು ಸಿಕ್ಕುವುದಿಲ್ಲ, ಹಿಂದೆ ಹೋದರೂ ಆತನನ್ನು ತಿಳಿಯಲಾರೆನು.
“ಒಂದು ವೇಳೆ ನಾನು ಪೂರ್ವದೆಡೆಗೆ ಹೋದರೂ ದೇವರು ನನಗೆ ಕಾಣಿಸುವುದಿಲ್ಲ; ಪಶ್ಚಿಮದೆಡೆಗೆ ಹೋದರೂ ದೇವರು ಕಾಣಿಸುವುದಿಲ್ಲ.
9 ಎಡಗಡೆಯಲ್ಲಿ ಹುಡುಕಿದರೂ ನೋಡಲಾರೆನು, ಬಲಗಡೆಗೆ ತಿರುಗಿಕೊಂಡರೂ ಆತನು ಕಾಣಿಸುವುದಿಲ್ಲ.
ಉತ್ತರದಲ್ಲಿ ಹುಡುಕಿದರೂ ದೇವರನ್ನು ನೋಡಲಾರೆನು; ದಕ್ಷಿಣದೆಡೆಗೆ ತಿರುಗಿಕೊಂಡರೂ ದೇವರು ಕಾಣಿಸುವುದಿಲ್ಲ.
10 ೧೦ ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು.
ಆದರೆ ದೇವರು ನಾನು ಹೋಗುವ ಮಾರ್ಗವನ್ನು ತಿಳಿದಿದ್ದಾರೆ; ದೇವರು ನನ್ನನ್ನು ಪರೀಕ್ಷಿಸಿದಾಗ, ನಾನು ಚೊಕ್ಕ ಬಂಗಾರವಾಗಿ ಹೊರಗೆ ಬರುವೆನು.
11 ೧೧ ಆತನ ಹೆಜ್ಜೆಯ ಜಾಡಿನಲ್ಲೇ ಕಾಲಿಟ್ಟಿದ್ದೇನೆ, ಓರೆಯಾಗದೆ ಆತನ ದಾರಿಯನ್ನೇ ಹಿಡಿದಿದ್ದೇನೆ.
ನನ್ನ ಪಾದಗಳು ದೇವರ ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ಅನುಸರಿಸಿವೆ; ದೇವರ ಮಾರ್ಗವನ್ನು ಬಿಟ್ಟು ನಾನು ತೊಲಗದಂತೆ ನೋಡಿಕೊಂಡೆನು.
12 ೧೨ ಆತನ ತುಟಿಗಳಿಂದ ಹೊರಟ ನಿಯಮಗಳಿಗೆ ನಾನು ಹಿಂದೆಗೆಯಲಿಲ್ಲ, ಆತನ ಬಾಯಿಂದ ಬಂದ ಮಾತುಗಳನ್ನು ಎದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.
ದೇವರ ತುಟಿಗಳ ಆಜ್ಞೆಯಿಂದ ನಾನು ಹಿಂಜರಿಯಲಿಲ್ಲ; ನನ್ನ ದೈನಂದಿನ ಆಹಾರಕ್ಕಿಂತ ದೇವರ ಬಾಯಿಯ ಮಾತುಗಳನ್ನು ನನ್ನೆದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.
13 ೧೩ ಆತನಂತು ಒಂದೇ ಮನಸ್ಸುಳ್ಳವನಾಗಿದ್ದಾನೆ, ತಿರುಗಿಸಬಲ್ಲವರು ಯಾರು? ತಾನು ಬಯಸಿದ್ದನ್ನೇ ಮಾಡುತ್ತಾನೆ.
“ಆದರೆ ದೇವರು ಬದಲಾಗದವರು; ದೇವರನ್ನು ಬದಲಾಯಿಸುವವರು ಯಾರು? ದೇವರು ತಾವು ಬಯಸಿದ್ದನ್ನು ಮಾಡುತ್ತಾರೆ.
14 ೧೪ ನನ್ನ ವಿಷಯದಲ್ಲಿ ನೇಮಕವಾದದ್ದನ್ನು ಪೂರೈಸುವವನಷ್ಟೆ, ಆತನಲ್ಲಿ ಇಂಥಾ ಸಂಕಲ್ಪಗಳು ಅನೇಕವಾಗಿವೆ.
ನನಗೆ ನೇಮಿಸಿದ್ದನ್ನು ದೇವರು ಈಡೇರಿಸುತ್ತಾರೆ. ಇಂಥ ಅನೇಕ ಯೋಜನೆಗಳು ದೇವರಲ್ಲಿವೆ.
15 ೧೫ ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಗಾಬರಿಯಾಗಿದ್ದೇನೆ; ಇದನ್ನೆಲ್ಲಾ ಯೋಚಿಸಿಕೊಳ್ಳುವಾಗ ಆತನಿಗೆ ಹೆದರುತ್ತೇನೆ.
ಆದ್ದರಿಂದ ನಾನು ದೇವರ ಮುಂದೆ ಗಾಬರಿಗೊಳ್ಳುತ್ತೇನೆ; ಇದನ್ನೆಲ್ಲಾ ಗ್ರಹಿಸಿಕೊಳ್ಳುವಾಗ ನಾನು ದೇವರಿಗೆ ಭಯಪಡುತ್ತೇನೆ.
16 ೧೬ ನನ್ನ ಹೃದಯವನ್ನು ಕುಂದಿಸಿದವನು ದೇವರೇ, ನನ್ನನ್ನು ಗಾಬರಿಪಡಿಸಿದವನು ಸರ್ವಶಕ್ತನಾದ ದೇವರೇ.
ದೇವರು ನನ್ನ ಹೃದಯವನ್ನು ಹೆದರಿಸಿದ್ದಾರೆ; ಸರ್ವಶಕ್ತರು ನನ್ನನ್ನು ಗಾಬರಿಪಡಿಸಿದ್ದಾರೆ.
17 ೧೭ ನಾನು ಹಾಳಾದದ್ದಕ್ಕೆ ಈ ಅಂಧಕಾರವು ಕಾರಣವಲ್ಲ, ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲು ಕಾರಣವಲ್ಲ.”
ಆದರೂ ನಾನು ಅಂಧಕಾರದಿಂದ ಮೌನವಾಗಲಿಲ್ಲ; ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲಿನ ನಿಮಿತ್ತ ನಾನು ಮಾತಾಡದೆ ಇರುವುದಿಲ್ಲ.

< ಯೋಬನು 23 >