< ಆದಿಕಾಂಡ 13 >

1 ಹೀಗೆ ಅಬ್ರಾಮನು ತನ್ನದನ್ನೆಲ್ಲಾ ತೆಗೆದುಕೊಂಡು ಹೆಂಡತಿಯನ್ನೂ, ಲೋಟನನ್ನೂ ಸಂಗಡ ಕರೆದುಕೊಂಡು ಐಗುಪ್ತದೇಶವನ್ನು ಬಿಟ್ಟು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯಕ್ಕೆ ಬಂದನು.
ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತೆಗೆದುಕೊಂಡು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ನೆಗೆವಕ್ಕೆ ಪ್ರಯಾಣಮಾಡಿದನು.
2 ಅಬ್ರಾಮನು ಬಹು ಐಶ್ವರ್ಯವಂತನಾಗಿದ್ದನು; ಅವನಿಗೆ ಪಶುಗಳೂ ಬೆಳ್ಳಿಬಂಗಾರವೂ ಇದ್ದವು.
ಅಬ್ರಾಮನು ಪಶುಗಳು, ಬೆಳ್ಳಿ ಮತ್ತು ಬಂಗಾರವನ್ನು ಹೊಂದಿ ಬಹು ಧನವಂತನಾಗಿದ್ದನು.
3 ಅವನು ದಕ್ಷಿಣ ದೇಶವನ್ನು ಬಿಟ್ಟು ಮುಂದೆ ಪ್ರಯಾಣ ಮಾಡುತ್ತಾ ಬೇತೇಲಿನವರೆಗೆ ಅಂದರೆ ಬೇತೇಲಿಗೂ ಆಯಿ ಎಂಬ ಊರಿಗೂ
ಅವನು ತನ್ನ ಪ್ರಯಾಣಗಳಲ್ಲಿ ನೆಗೆವದಿಂದ ಬೇತೇಲಿಗೆ, ಎಂದರೆ ಮೊದಲು ಬೇತೇಲಿಗೂ ಆಯಿ ಎಂಬ ಊರಿಗೂ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೆ ಬಂದನು.
4 ನಡುವೆ ಪೂರ್ವದಲ್ಲಿ ಗುಡಾರ ಹಾಕಿಸಿ ಯಜ್ಞವೇದಿಯನ್ನು ಕಟ್ಟಿದ್ದ ಸ್ಥಳಕ್ಕೆ ಅಬ್ರಾಮನು ಹಿಂತಿರುಗಿ ಬಂದು ಅಲ್ಲಿ ಯೆಹೋವನ ಹೆಸರಿನಲ್ಲಿ ಆರಾಧಿಸಿದನು.
ಅಲ್ಲಿ ಅಬ್ರಾಮನು ಯೆಹೋವ ದೇವರ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
5 ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೂ ಕುರಿ, ಎತ್ತು, ಕುಟುಂಬಗಳು ಇದ್ದವು.
ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು.
6 ಆ ಸ್ಥಳವು ಅವರಿಬ್ಬರ ಜೀವನಕ್ಕೆ ಸಾಲದೆ ಹೋಯಿತು.
ಆಗ ಅವರು ಒಂದಾಗಿ ವಾಸಿಸಲಿಕ್ಕೆ ಆ ಸ್ಥಳ ಸಾಲದೆ ಹೋಯಿತು. ಅವರಿಬ್ಬರ ಸಂಪತ್ತು ಬಹಳವಾಗಿದ್ದರಿಂದ ಒಂದೇ ಸ್ಥಳದಲ್ಲಿ ಅವರು ವಾಸವಾಗಿರಲು ಆಗಲಿಲ್ಲ.
7 ಅವರಿಬ್ಬರ ಆಸ್ತಿ ಬಹಳವಾಗಿದ್ದುದರಿಂದ ಅವರು ಒಟ್ಟಿಗೆ ವಾಸವಾಗಿರುವುದು ಅಸಾಧ್ಯವಾಯಿತು. ಇದರಿಂದ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಗುತ್ತಿತ್ತು. ಇದಲ್ಲದೆ ಕಾನಾನ್ಯರೂ ಪೆರಿಜೀಯರೂ ಆ ಕಾಲದಲ್ಲಿ ದೇಶದೊಳಗೆ ವಾಸವಾಗಿದ್ದರು.
ಆಗ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.
8 ಹೀಗಿರಲು ಅಬ್ರಾಮನು ಲೋಟನಿಗೆ, “ನನಗೂ ನಿನಗೂ, ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಾಗಬಾರದು; ನಾವು ಸಹೋದರರಲ್ಲವೇ.
ಅಬ್ರಾಮನು ಲೋಟನಿಗೆ, “ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು.
9 ದೇಶವೆಲ್ಲಾ ನಿನ್ನ ಎದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕವಾಗಿ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು” ಎಂದು ಹೇಳಿದನು.
ದೇಶವೆಲ್ಲಾ ನಿನ್ನ ಮುಂದೆ ಇರುತ್ತದೆಯಲ್ಲವೆ? ನಾವು ಪ್ರತ್ಯೇಕವಾಗೋಣ. ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುವೆನು,” ಎಂದನು.
10 ೧೦ ಲೋಟನು ಕಣ್ಣೆತ್ತಿ ನೋಡಲಾಗಿ, ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರಿನವರೆಗೆ ನೀರಾವರಿಯ ಪ್ರದೇಶವೆಂದು ತಿಳಿದುಕೊಂಡನು. ಯೆಹೋವನು ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡುವುದಕ್ಕಿಂತ ಮೊದಲು ಆ ಸೀಮೆಯು ಯೆಹೋವನ ವನದಂತೆಯೂ, ಐಗುಪ್ತ ದೇಶದಂತೆಯೂ ನೀರಾವರಿಯ ಪ್ರದೇಶವಾಗಿತ್ತು.
ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು.
11 ೧೧ ಆದುದರಿಂದ ಲೋಟನು ಯೊರ್ದನ್ ಹೊಳೆಯ ಸುತ್ತಣ ಪ್ರದೇಶವನ್ನು ಆರಿಸಿಕೊಂಡು ಮೂಡಣ ಕಡೆಗೆ ಹೊರಟನು.
ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು.
12 ೧೨ ಹೀಗೆ ಅವರಿಬ್ಬರೂ ಪ್ರತ್ಯೇಕವಾದರು. ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನು ಯೊರ್ದನ್ ಹೊಳೆಯ ಸುತ್ತಣ ಊರುಗಳಲ್ಲಿ ವಾಸ ಮಾಡುತ್ತಾ ಸೊದೋಮಿನ ಸಮೀಪದಲ್ಲಿ ಗುಡಾರ ಹಾಕಿದನು.
ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನಾದರೋ ಸಮತಟ್ಟಾದ ಊರುಗಳಲ್ಲಿ ವಾಸಿಸುತ್ತಾ ಸೊದೋಮಿನ ಬಳಿ ತನ್ನ ಗುಡಾರವನ್ನು ಹಾಕಿದನು.
13 ೧೩ ಆದರೆ ಸೊದೋಮ್ ಪಟ್ಟಣದ ಜನರು ಯೆಹೋವನ ದೃಷ್ಟಿಯಲ್ಲಿ ಬಹು ದುಷ್ಟರೂ ಪಾಪಿಷ್ಠರು ಆಗಿದ್ದರು.
ಸೊದೋಮಿನ ಜನರು ದುಷ್ಟರಾಗಿದ್ದರು ಮತ್ತು ಯೆಹೋವ ದೇವರ ವಿರುದ್ಧ ಬಹಳ ಪಾಪಮಾಡುತ್ತಿದ್ದರು.
14 ೧೪ ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಯೆಹೋವನು ಅಬ್ರಾಮನಿಗೆ, “ನೀನಿರುವ ಸ್ಥಳದಿಂದ ದಕ್ಷಿಣಕ್ಕೂ, ಉತ್ತರಕ್ಕೂ, ಪೂರ್ವಕ್ಕೂ, ಪಶ್ಚಿಮಕ್ಕೂ, ಕಣ್ಣೆತ್ತಿ ನೋಡು.
ಲೋಟನು ಅಬ್ರಾಮನಿಂದ ಹೋದ ಮೇಲೆ ಯೆಹೋವ ದೇವರು ಅವನಿಗೆ, “ಈಗ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ಕಣ್ಣೆತ್ತಿ ನೋಡು.
15 ೧೫ ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
ಏಕೆಂದರೆ ನೀನು ಕಾಣುವ ದೇಶವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
16 ೧೬ ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂಮಿಯಲ್ಲಿರುವ ಧೂಳನ್ನು ಲೆಕ್ಕಮಾಡುವುದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಬಹುದು.
ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ, ನಿನ್ನ ಸಂತಾನದವರನ್ನು ಸಹ ಲೆಕ್ಕಿಸಲು ಸಾಧ್ಯವಾಗುವುದು.
17 ೧೭ ನೀನೆದ್ದು, ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು” ಎಂದು ಹೇಳಿದನು.
ಎದ್ದು ದೇಶದ ಉದ್ದಗಲಕ್ಕೂ ನಡೆದಾಡು. ನಾನು ನಿನಗೆ ಅದನ್ನು ಕೊಡುವೆನು,” ಎಂದರು.
18 ೧೮ ತರುವಾಯ ಅಬ್ರಾಮನು ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನಲ್ಲಿರುವ ಮಮ್ರೆ ಮೋರೆ ಎಂಬ ತೋಪಿಗೆ ಬಂದು ಅಲ್ಲೇ ವಾಸಮಾಡಿಕೊಂಡು, ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಿಸಿದನು.
ಅನಂತರ ಅಬ್ರಾಮನು ತನ್ನ ಗುಡಾರವನ್ನು ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆಯ ತೋಪಿಗೆ ಬಂದು, ಅಲ್ಲಿ ವಾಸವಾಗಿದ್ದನು. ಅಲ್ಲಿ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು.

< ಆದಿಕಾಂಡ 13 >