< ವಿಮೋಚನಕಾಂಡ 22 >

1 ಒಬ್ಬನು ಎತ್ತನ್ನಾಗಲಿ, ಕುರಿಯನ್ನಾಗಲಿ ಕದ್ದುಕೊಂಡು ಕೊಯ್ದರೆ ಇಲ್ಲವೆ ಮಾರಿದರೆ ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನು ಒಂದು ಕುರಿಗೆ ಬದಲಾಗಿ ನಾಲ್ಕು ಕುರಿಗಳನ್ನು ಕೊಡಬೇಕು.
“ಒಬ್ಬನು ಎತ್ತನ್ನಾಗಲಿ, ಕುರಿಯನ್ನಾಗಲಿ ಕದ್ದು ಕೊಯ್ದರೆ, ಇಲ್ಲವೆ ಅದನ್ನು ಮಾರಿದರೆ, ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನೂ, ಒಂದು ಕುರಿಗೆ ನಾಲ್ಕು ಕುರಿಗಳನ್ನೂ ಕೊಡಬೇಕು.
2 ಒಬ್ಬ ಕಳ್ಳನು ಕಳ್ಳತನ ಮಾಡುತ್ತಿರುವಾಗಲೇ ಕೈಗೆ ಸಿಕ್ಕಿದಾಗ ಅವನನ್ನು ಕೊಂದರೆ ಅದನ್ನು ನರಹತ್ಯೆಯೆಂದು ಎಣಿಸಕೂಡದು.
“ಒಬ್ಬ ಕಳ್ಳನು ಮನೆ ಮುರಿಯುವಾಗಲೇ ಕೈಗೆ ಸಿಕ್ಕಿದಾಗ ಅವನನ್ನು ಹೊಡೆದುಕೊಂದರೆ, ಹೊಡೆದವನ ರಕ್ತ ಸುರಿಸಬಾರದು.
3 ಸೂರ್ಯೋದಯವಾದ ನಂತರ ಒಬ್ಬನು ಕಳ್ಳತನಮಾಡಿ ಸಿಕ್ಕಿಬಿದ್ದಾಗ, ಅವನನ್ನು ಹೊಡೆದು ಕೊಂದರೆ ಅದನ್ನು ನರಹತ್ಯೆಯೆಂದು ಎಣಿಸಬೇಕು. ಅವನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಹಿಂತಿರುಗಿಸಬೇಕು. ಅವನಲ್ಲಿ ಕೊಡಲು ಏನೂ ಇಲ್ಲದ ಪಕ್ಷಕ್ಕೆ ಅವನು ಆ ಕಳ್ಳತನ ಮಾಡಿದ್ದರಿಂದ ಗುಲಾಮನಾಗಿ ಮಾರಲ್ಪಡಬೇಕು.
ಅವನು ಕಳ್ಳತನ ಮಾಡುವಾಗ ಸೂರ್ಯೋದಯವಾದರೆ, ಹೊಡೆದವನ ರಕ್ತ ಸುರಿಸಬೇಕು. “ಕಳ್ಳನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಹಿಂದಿರುಗಿಸಬೇಕು. ಅವನಲ್ಲಿ ಕೊಡಲು ಇಲ್ಲದ ಪಕ್ಷಕ್ಕೆ ಅವನ ಕಳ್ಳತನಕ್ಕಾಗಿ ಅವನನ್ನು ಗುಲಾಮನನ್ನಾಗಿ ಮಾರಬೇಕು.
4 ಕಳ್ಳತನ ಮಾಡಿದ ಎತ್ತಾಗಲಿ, ಕತ್ತೆಯಾಗಲಿ, ಆಡು, ಕುರಿಯಾದರೂ ಜೀವದಿಂದಲೇ ಕದ್ದವನ ಬಳಿಯಲ್ಲಿ ಸಿಕ್ಕಿದರೆ ಅವನು ಎರಡರಷ್ಟು ಈಡು ಕೊಡಬೇಕು.
ಕಳ್ಳತನ ಮಾಡಿದ ಎತ್ತಾಗಲಿ, ಕತ್ತೆಯಾಗಲಿ, ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ಸಿಕ್ಕಿದರೆ ಅವನು ಎರಡರಷ್ಟು ಈಡು ಕೊಡಬೇಕು.
5 ಒಬ್ಬನು ತನ್ನ ಹೊಲದಲ್ಲಾಗಲಿ, ದ್ರಾಕ್ಷಿತೋಟದಲ್ಲಾಗಲಿ ತನ್ನ ದನಗಳನ್ನು ಮೇಯಿಸಿ, ಮತ್ತೊಬ್ಬನ ಹೊಲದಲ್ಲಾಗಲಿ, ದ್ರಾಕ್ಷಿತೋಟದಲ್ಲಾಗಲಿ ಮೇಯುವಂತೆ ಮಾಡಿದರೆ, ತನ್ನ ಹೊಲದ ಅಥವಾ ದ್ರಾಕ್ಷಿತೋಟದ ಉತ್ತಮ ಭಾಗವನ್ನು ಅವನಿಗೆ ಈಡು ಕೊಡಬೇಕು.
“ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ, ದ್ರಾಕ್ಷಿ ತೋಟವನ್ನೂ ಮೇಯಿಸಿದರೆ, ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ, ದ್ರಾಕ್ಷಿ ತೋಟದಲ್ಲಿನ ಉತ್ತಮವಾದದ್ದನ್ನೂ ಈಡು ಕೊಡಬೇಕು.
6 ಒಬ್ಬನು ಹೊತ್ತಿಸಿದ ಬೆಂಕಿ ಆಕಸ್ಮಾತ್ತಾಗಿ ಮುಳ್ಳಿನ ಗಿಡಗಳಿಗೆ ಬೆಂಕಿ ಹತ್ತಿಕೊಂಡು ಮತ್ತೊಬ್ಬನ ದವಸದ ರಾಶಿಗಳಾಗಲಿ, ಬೆಳೆಯಾಗಲಿ, ಹೊಲವಾಗಲಿ ಸುಟ್ಟು ಹೋದರೆ ಬೆಂಕಿ ಹೊತ್ತಿಸಿದವನು ಅದಕ್ಕೆ ಈಡುಕೊಡಬೇಕು.
“ಬೆಂಕಿಹತ್ತಿ ಅದು ಮುಳ್ಳಿನ ಕೊಂಪೆಗೆ ತಗುಲಿ, ಸಿವುಡುಗಳ ಬಣವೆಗಳನ್ನಾಗಲಿ, ನಿಂತ ಬೆಳೆಯನ್ನಾಗಲಿ, ಹೊಲವನ್ನಾಗಲಿ ಸುಟ್ಟುಬಿಟ್ಟರೆ, ಆ ಬೆಂಕಿಯನ್ನು ಹಚ್ಚಿದವನು ಖಂಡಿತವಾಗಿ ಈಡು ಕೊಡಬೇಕು.
7 ಒಬ್ಬನು ಹಣವನ್ನಾಗಲಿ, ಒಡವೆಗಳನ್ನಾಗಲಿ ಕಾಪಾಡುವುದಕ್ಕೆ ಮತ್ತೊಬ್ಬನಿಗೆ ಒಪ್ಪಿಸಿದಾಗ ಅದು ಆ ಮನುಷ್ಯನ ಮನೆಯಲ್ಲಿ ಕಳ್ಳತನವಾಗಿ, ಕಳ್ಳನು ಸಿಕ್ಕಿಕೊಂಡರೆ ಎರಡರಷ್ಟು ದಂಡವನ್ನು ಕೊಡಬೇಕು.
“ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ, ವಸ್ತುಗಳನ್ನಾಗಲಿ ಇಟ್ಟುಕೊಳ್ಳುವುದಕ್ಕೆ ಕೊಟ್ಟಾಗ, ಅದು ಅವನ ಮನೆಯಿಂದ ಕಳ್ಳತನವಾದರೆ, ಕಳ್ಳತನ ಮಾಡಿದವನು ಸಿಕ್ಕಿದರೆ, ಅವನು ಎರಡರಷ್ಟು ಕೊಡಬೇಕು.
8 ಕಳ್ಳನು ಸಿಕ್ಕದೇ ಹೋದರೆ ಆ ಮನೆಯ ಯಜಮಾನನು ತಾನೇ ಆ ಒಡವೆಗಳನ್ನು ಕದ್ದನೋ ಇಲ್ಲವೋ ಎಂಬುದನ್ನು ದೃಢಪಡಿಸುವುದಕ್ಕಾಗಿ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ವಸ್ತುಗಳನ್ನು ಅವನು ಮುಟ್ಟಲಿಲ್ಲವೆಂದು ವಿಚಾರಿಸುವುದಕ್ಕೆ ದೇವರ ಸನ್ನಿಧಿಯಲ್ಲಿ ಅವನನ್ನು ಹಾಜರುಪಡಿಸಬೇಕು.
9 ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದರ ವಿಷಯದಲ್ಲಿಯೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆಗಳ ವಿಷಯವಾದರೂ, ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ, ಇಬ್ಬರು ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾನೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
ಎತ್ತು, ಕತ್ತೆ, ಕುರಿ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದುಹೋದ ಯಾವ ತರದ ವಸ್ತುಗಳ ವಿಷಯದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು, ‘ಇದು ತನ್ನದೆಂದು,’ ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ನ್ಯಾಯಾಧಿಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸುವರೋ, ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
10 ೧೦ ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾಗಲಿ, ಎತ್ತನ್ನಾಗಲಿ, ಕುರಿಯನ್ನಾಗಲಿ ಬೇರೆ ಯಾವ ಪಶುವನ್ನಾಗಲಿ ಕಾಪಾಡುವುದಕ್ಕೆ ಕೊಟ್ಟಿದ್ದು, ಅದು ಸತ್ತರೆ ಇಲ್ಲವೆ ಗಾಯಗೊಂಡರೆ ಇಲ್ಲವೆ ಯಾರೂ ತಿಳಿಯದಂತೆ ಕಳ್ಳತನವಾದರೆ,
“ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶುವನ್ನಾದರೂ ಕಾಯುವುದಕ್ಕೆ ಕೊಟ್ಟಾಗ, ಅದು ಸತ್ತರೆ, ಇಲ್ಲವೆ ಊನವಾದರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ,
11 ೧೧ ಆ ಮನುಷ್ಯನು ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲ ಎಂಬುದನ್ನು ದೃಢಪಡಿಸುವುದಕ್ಕಾಗಿ ಯೆಹೋವನ ಮೇಲೆ ಪ್ರಮಾಣಮಾಡಬೇಕು. ಆಗ ಪಶುವಿನ ಒಡೆಯನು ಆ ಪ್ರಮಾಣವಾಕ್ಯವನ್ನು ನಂಬಬೇಕು. ಪ್ರಮಾಣಮಾಡಿದವನು ಅದಕ್ಕೆ ಈಡುಕೊಡಬೇಕಾದ ಅಗತ್ಯವಿರುವುದಿಲ್ಲ.
ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಯೆಹೋವ ದೇವರ ಮುಂದೆ ಪ್ರಮಾಣಮಾಡಬೇಕು. ಅದನ್ನು ಪಶುವಿನ ಯಜಮಾನನು ಒಪ್ಪಿದರೆ ಅವನು ಈಡುಕೊಡಬಾರದು.
12 ೧೨ ಆದರೆ ಆ ಪಶುವು ಅವನ ಬಳಿಯಿಂದ ಕಳವಾದರೆ ಆ ವ್ಯಕ್ತಿ ಅದರ ಯಜಮಾನನಿಗೆ ಪ್ರತಿಯಾಗಿ ಈಡುಕೊಡಬೇಕು.
ಆದರೆ ಅದು ಅವನ ಬಳಿಯಿಂದ ಕಳ್ಳತನವಾಗಿ ಹೋಗಿದ್ದರೆ, ಯಜಮಾನನಿಗೆ ಈಡು ಕೊಡಬೇಕು.
13 ೧೩ ಕಾಡುಮೃಗವು ಆ ಪಶುವನ್ನು ಕೊಂದಿದ್ದರೆ, ಅದರ ಹೆಣವನ್ನು ಗುರುತಿಗಾಗಿ ತೋರಿಸಲಿ. ಕಾಡುಮೃಗ ಕೊಂದಿದ್ದಕ್ಕೆ ಈಡು ಕೊಡಬೇಕಾದ ಅಗತ್ಯವಿಲ್ಲ.
ಕಾಡುಮೃಗವು ಅದನ್ನು ಕೊಂದಿದ್ದರೆ, ಅದರ ಹೆಣವನ್ನು ಸಾಕ್ಷಿಗಾಗಿ ತರಲಿ. ಕಾಡುಮೃಗ ಕೊಂದಿದ್ದಕ್ಕೆ ಈಡುಕೊಡಬೇಕಾದ ಅವಶ್ಯಕತೆ ಇಲ್ಲ.
14 ೧೪ ಒಬ್ಬನು ಮತ್ತೊಬ್ಬನಿಂದ ಪಶುವನ್ನು ಸ್ವಲ್ಪ ಕಾಲಕ್ಕೆ ಬಾಡಿಗೆಗೆ ತೆಗೆದುಕೊಂಡಿರಲಾಗಿ ಆ ಪಶುವಿನ ಒಡೆಯನು ಅದರ ಹತ್ತಿರವಿಲ್ಲದ ಸಮಯದಲ್ಲಿ ಅದು ಗಾಯಗೊಂಡರೆ ಇಲ್ಲವೆ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.
“ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಲಾಗಿ ತೆಗೆದುಕೊಂಡಿರಲಾಗಿ ಅದರ ಒಡೆಯನು ಅದರ ಹತ್ತಿರ ಇಲ್ಲದಿರುವಾಗ, ಆ ಪಶುವಿಗೆ ಊನವಾದರೆ, ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಈಡು ಕೊಡಬೇಕು.
15 ೧೫ ಯಜಮಾನನು ಅದರ ಹತ್ತಿರದಲ್ಲೇ ಇದಿದ್ದರೆ, ಅವನಿಗೆ ಈಡುಕೊಡಬೇಕಾದ ಅಗತ್ಯವಿಲ್ಲ. ಅದನ್ನು ಬಾಡಿಗೆಗೆ ತೆಗೆದುಕೊಂಡಿದ್ದರೆ ಅದಕ್ಕೆ ಉಂಟಾದ ನಷ್ಟವು ಬಾಡಿಗೆಯ ಲೆಕ್ಕಕ್ಕೆ ಎಣಿಕೆಯಾಗಬೇಕು.
ಆದರೆ ಅದರ ಯಜಮಾನನು ಅದರ ಸಂಗಡ ಇದ್ದರೆ ಈಡು ಕೊಡದೆಯಿರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಎಣಿಕೆಯಾಗಲಿ.
16 ೧೬ ನಿಶ್ಚಿತಾರ್ಥವಾಗದ ಹೆಣ್ಣನ್ನು ಒಬ್ಬನು ಮರುಳುಗೊಳಿಸಿ ಸಂಗಮಿಸಿದರೆ ಅವಳಿಗೋಸ್ಕರ ತಕ್ಕ ತೆರವನ್ನು ಕೊಟ್ಟು ಅವಳನ್ನು ಮದುವೆಮಾಡಿಕೊಳ್ಳಬೇಕು.
“ಒಬ್ಬನು ಕನ್ನಿಕೆಯನ್ನು ಮೋಸಗೊಳಿಸಿ, ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಆಕೆಗೆ ಖಂಡಿತವಾಗಿ ತೆರವನ್ನು ಕೊಡಬೇಕು.
17 ೧೭ ಅವಳ ತಂದೆ ಅವಳನ್ನು ಅವನಿಗೆ ಕೊಡುವುದಕ್ಕೆ ಒಪ್ಪದೇ ಹೋದರೆ ಆ ಮನುಷ್ಯನು ತಕ್ಕ ಹಣವನ್ನು ದಂಡವಾಗಿ ಕೊಡಬೇಕು.
ಆಕೆಯ ತಂದೆಗೆ ಆಕೆಯನ್ನು ಕೊಡುವುದಕ್ಕೆ ಮನಸ್ಸಿಲ್ಲದಿದ್ದರೆ, ಅವನಿಗೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.
18 ೧೮ ಮಾಟಗಾರ್ತಿಯನ್ನು ಜೀವದಿಂದ ಉಳಿಸಬಾರದು.
“ಮಾಟಗಾರ್ತಿಯನ್ನು ಬದುಕಲು ಬಿಡಬಾರದು.
19 ೧೯ ಪಶುಸಂಗ ಮಾಡಿದವನಿಗೆ ಮರಣಶಿಕ್ಷೆಯಾಗಬೇಕು.
“ಪಶುವಿನ ಸಂಗಡ ಸಂಗಮಿಸುವ ಯಾರಾದರೂ ಸರಿ, ಅಂಥವನಿಗೆ ಮರಣದಂಡನೆಯಾಗಬೇಕು.
20 ೨೦ ಯೆಹೋವನೊಬ್ಬನಿಗೇ ಹೊರತಾಗಿ ಬೇರೊಬ್ಬ ದೇವರಿಗೆ ಯಜ್ಞ ಅರ್ಪಿಸುವವನು ಸಂಪೂರ್ಣವಾಗಿ ನಾಶವಾಗಬೇಕು.
“ಯೆಹೋವ ದೇವರು ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಅರ್ಪಿಸುವವನು ಸಂಪೂರ್ಣವಾಗಿ ನಾಶವಾಗಬೇಕು.
21 ೨೧ ಪರದೇಶದವನಿಗೆ ಅನ್ಯಾಯ ಮಾಡಬಾರದು ಉಪದ್ರವ ಕೊಡಬಾರದು ನೀವು ಐಗುಪ್ತ ದೇಶದಲ್ಲಿ ಪರದೇಶಿಗಳಾಗಿದ್ದೀರಲ್ಲವೇ?
“ಪರದೇಶಸ್ಥನನ್ನು ಉಪದ್ರವ ಪಡಿಸಬೇಡಿರಿ ಮತ್ತು ಬಾಧಿಸಲೂ ಬೇಡಿರಿ. ಏಕೆಂದರೆ ನೀವು ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದೀರಿ.
22 ೨೨ ವಿಧವೆಯರನ್ನಾಗಲಿ, ದಿಕ್ಕಿಲ್ಲದ ಮಕ್ಕಳನ್ನಾಗಲಿ, ತೊಂದರೆಪಡಿಸಬಾರದು.
“ಯಾವ ವಿಧವೆಯನ್ನು, ದಿಕ್ಕಿಲ್ಲದ ಮಗುವನ್ನು ಬಾಧಿಸಬೇಡಿರಿ.
23 ೨೩ ನೀವು ಇಂಥವರನ್ನು ತೊಂದರೆಪಡಿಸಿದರೆ ಅವರು ನನಗೆ ಮೊರೆಯಿಡುವರು ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ.
ನೀವು ಯಾವ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ಕೂಗಿದರೆ ನಾನು ನಿಶ್ಚಯವಾಗಿ ಅವರ ಕೂಗನ್ನು ಕೇಳುವೆನು.
24 ೨೪ ನಾನು ಕೋಪಗೊಂಡು ನಿಮ್ಮ ಶತ್ರುಗಳನ್ನು ಕತ್ತಿಯಿಂದ ಸಂಹಾರಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಯರಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
ಆಗ ನನ್ನ ಕೋಪವು ಉರಿಯುವುದು. ಖಡ್ಗದಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
25 ೨೫ ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಹಣ ಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.
“ನಿಮ್ಮ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ, ಅವನಿಂದ ಬಡ್ಡಿ ತೆಗೆದುಕೊಳ್ಳಬಾರದು.
26 ೨೬ ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡಬೇಕು.
ಇಲ್ಲವೆ ಅವನ ಮೇಲೆ ಬಡ್ಡಿ ಹೊರಿಸಬೇಡ. ನಿಮ್ಮ ನೆರೆಯವನ ಮೇಲಂಗಿಯನ್ನು ಅಡವು ಇಟ್ಟುಕೊಂಡಿದ್ದರೆ, ಸೂರ್ಯನು ಮುಳುಗುವುದರೊಳಗಾಗಿ ಅವನಿಗೆ ಹಿಂದಕ್ಕೆ ಕೊಡಬೇಕು.
27 ೨೭ ಏಕೆಂದರೆ ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಬೇರೆ ಯಾವುದನ್ನು ಹೊದ್ದುಕೊಂಡು ಮಲಗಬೇಕು? ಅವನು ನನಗೆ ಮೊರೆಯಿಟ್ಟರೆ ನಾನು ಕಿವಿಗೊಟ್ಟು ಕೇಳುವೆನು. ಏಕೆಂದರೆ ನಾನು ದಯಾಪರನು.
ಏಕೆಂದರೆ ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವುದನ್ನು ಹೊದ್ದುಕೊಂಡು ಮಲಗಿಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ಏಕೆಂದರೆ ನಾನು ಅನುಕಂಪ ಉಳ್ಳವನು.
28 ೨೮ ದೇವರನ್ನು ದೂಷಿಸಬಾರದು. ನಿನ್ನ ಜನರ ಅಧಿಕಾರಿಗಳನ್ನು ನೀನು ಶಪಿಸಬಾರದು.
“ದೇವರನ್ನು ದೂಷಿಸಬೇಡ, ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.
29 ೨೯ ನಿಮ್ಮ ಕಣದಿಂದ ಹಾಗೂ ದ್ರಾಕ್ಷಾಲತೆಯಿಂದ ನನಗೆ ಸಲ್ಲಿಸತಕ್ಕದ್ದನ್ನು ಸಮರ್ಪಿಸುವುದಕ್ಕೆ ತಡಮಾಡಬಾರದು. ನಿಮ್ಮ ಚೊಚ್ಚಲು ಗಂಡು ಮಕ್ಕಳನ್ನು ನನಗೆ ಸಮರ್ಪಿಸಬೇಕು.
“ನಿನ್ನ ಧಾನ್ಯಗಳನ್ನೂ ಪಾನಗಳನ್ನೂ ನನಗೆ ಅರ್ಪಿಸುವುದಕ್ಕೆ ತಡಮಾಡಬೇಡ. “ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಮೀಸಲಾಗಿಡಬೇಕು.
30 ೩೦ ಅದರಂತೆಯೇ ನಿಮ್ಮ ಕುರಿ, ದನಗಳ ಚೊಚ್ಚಲು ಮರಿಗಳನ್ನು ನನಗೆ ಸಮರ್ಪಿಸಬೇಕು. ಏಳು ದಿನಗಳ ಕಾಲ ಆ ಮರಿ ತನ್ನ ತಾಯಿಯೊಂದಿಗಿರಲಿ. ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.
ಅದರಂತೆಯೇ ನಿಮ್ಮ ದನಕುರಿಗಳನ್ನೂ ನನಗೆ ಸಮರ್ಪಿಸಬೇಕು. ಅದು ಏಳು ದಿನಗಳು ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.
31 ೩೧ ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದುದರಿಂದ ಕಾಡುಮೃಗ ಕೊಂದದ್ದನ್ನು ನೀವು ತಿನ್ನಬಾರದು, ಅದನ್ನು ನಾಯಿಗಳಿಗೆ ಬಿಡಬೇಕು.
“ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದ್ದರಿಂದ ಹೊಲದಲ್ಲಿ ಕಾಡುಮೃಗ ಕೊಂದದ್ದನ್ನು ನೀವು ತಿನ್ನಬಾರದು, ಅದನ್ನು ನಾಯಿಗಳಿಗೆ ಹಾಕಬೇಕು.

< ವಿಮೋಚನಕಾಂಡ 22 >