< ಧರ್ಮೋಪದೇಶಕಾಂಡ 32 >

1 ಆಕಾಶಮಂಡಲವೇ, ನನ್ನ ಮಾತುಗಳಿಗೆ ಕಿವಿಗೊಡು. ಭೂಮಂಡಲವೇ, ನಾನು ಹೇಳುವುದನ್ನು ಕೇಳು.
ಆಕಾಶವೇ, ಕಿವಿಗೊಡು. ನಾನು ಮಾತನಾಡುತ್ತೇನೆ. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.
2 ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ ತಣ್ಣಗಿರುವುದು; ನನ್ನ ಬೋಧನೆಯು ಮಂಜಿನಂತೆಯೂ ಮತ್ತು ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ ಹಿತವಾಗಿರುವುದು.
ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.
3 ನಾನು ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು; ನಮ್ಮ ದೇವರನ್ನು ಮಹಾಮಹಿಮೆಯುಳ್ಳವನೆಂದು ಕೊಂಡಾಡುವೆನು.
ಏಕೆಂದರೆ ಯೆಹೋವ ದೇವರ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
4 ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡೆಸುವುದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಮತ್ತು ಯಥಾರ್ಥನೂ ಆಗಿದ್ದಾನೆ.
ದೇವರು ಸಂರಕ್ಷಿಸುವ ಬಂಡೆ. ದೇವರ ಕಾರ್ಯವು ಸಂಪೂರ್ಣವಾದದ್ದು. ಅವರ ಮಾರ್ಗಗಳೆಲ್ಲಾ ನ್ಯಾಯವಾಗಿವೆ. ಅವರು ಯಾವ ತಪ್ಪನ್ನೂ ಮಾಡದ ನಂಬಿಗಸ್ತ ದೇವರು, ನೀತಿವಂತರೂ ಯಥಾರ್ಥರೂ ಆದ ದೇವರು.
5 ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು; ಅವರು ವಕ್ರಬುದ್ಧಿಯುಳ್ಳ ಮೂರ್ಖಜಾತಿಯವರು.
ಇಸ್ರಾಯೇಲರು ತಮ್ಮನ್ನು ಕೆಡಿಸಿಕೊಂಡರು. ದೇವರ ಮಕ್ಕಳಿಗೆ ತಕ್ಕಂತೆ ನಡೆಯದವರು. ಅವರು ಮೂರ್ಖರಾದ ವಕ್ರ ಸಂತತಿ.
6 ದುರಾಚಾರಿಗಳಿರಾ, ಅವಿವೇಕಿಗಳಿರಾ, ಯೆಹೋವನ ವಿಷಯದಲ್ಲಿ ಈ ರೀತಿಯಾಗಿ ವರ್ತಿಸಬಹುದೇ? ಆತನು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೇ; ನಿಮ್ಮನ್ನು ಜನಾಂಗವನ್ನಾಗಿ ಮಾಡಿ ಸ್ಥಾಪಿಸಿದನಲ್ಲವೇ.
ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?
7 ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ನಿಮ್ಮ ಪೂರ್ವಜರ ಚರಿತ್ರೆಯನ್ನು ಆಲೋಚಿಸಿರಿ. ನಿಮ್ಮ ನಿಮ್ಮ ತಂದೆಗಳನ್ನು ವಿಚಾರಿಸಿದರೆ ಅವರು ತಿಳಿಸುವರು; ಹಿರಿಯರನ್ನು ಕೇಳಿದರೆ ಅವರು ವಿವರಿಸುವರು.
ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳಿರಿ. ತಲತಲಾಂತರಗಳ ವರುಷಗಳನ್ನು ಗ್ರಹಿಸಿಕೊಳ್ಳಿರಿ. ನಿಮ್ಮ ತಂದೆಯನ್ನು ಕೇಳಿದರೆ, ಅವರು ನಿಮಗೆ ತಿಳಿಸುವರು. ನಿಮ್ಮ ಹಿರಿಯರನ್ನು ಕೇಳಿದರೆ, ಅವರು ನಿಮಗೆ ಹೇಳುವರು.
8 ಹೇಗೆಂದರೆ, “ಪರಾತ್ಪರನಾದ ದೇವರು ಜನಾಂಗಗಳನ್ನು ಬೇರೆ ಬೇರೆ ಮಾಡಿ ಅವರವರಿಗೆ ಸ್ವದೇಶಗಳನ್ನು ನೇಮಿಸಿಕೊಟ್ಟಾಗ ಇಸ್ರಾಯೇಲರ ಸಂಖ್ಯೆಗೆ ತಕ್ಕಂತೆ ಆಯಾ ಜನಾಂಗಕ್ಕೆ ಒಂದೊಂದು ಪ್ರದೇಶವನ್ನು ಗೊತ್ತು ಮಾಡಿದನು.
ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.
9 ಇಸ್ರಾಯೇಲರು ಮಾತ್ರ ಯೆಹೋವನ ಸ್ವಂತ ಜನರಾದರು. ಯಾಕೋಬನ ವಂಶಸ್ಥರು ಆತನಿಗೆ ಸ್ವಕೀಯ ಪ್ರಜೆಯಾದರು.
ಏಕೆಂದರೆ ಯೆಹೋವ ದೇವರ ಪಾಲು ಅವರ ಜನರೇ ಆಗಿರುತ್ತಾರೆ. ಯಾಕೋಬ್ಯರೇ ದೇವರ ಸೊತ್ತಿನ ಪಾಲು.
10 ೧೦ ಆತನು ಶೂನ್ಯವೂ ಮತ್ತು ಭಯಂಕರವೂ ಆಗಿರುವ ಮರಳುಗಾಡಿನಲ್ಲಿ ಅವರನ್ನು ಕಂಡು ಗುರಾಣಿಯಂತೆ ಆವರಿಸಿಕೊಂಡನು. ಪ್ರೀತಿಯಿಂದ ಪರಾಂಬರಿಸಿ ಕಣ್ಣುಗುಡ್ಡೆಯಂತೆ ಕಾಪಾಡಿದನು.
ದೇವರು ಬರಿದಾದ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಕಂಡು ನಡೆಸಿದರು. ದೇವರು ಇಸ್ರಾಯೇಲರನ್ನು ರಕ್ಷಿಸಿ, ಉಪದೇಶಿಸಿ, ತಮ್ಮ ಕಣ್ಣುಗುಡ್ಡೆಯಂತೆ ಕಾಪಾಡಿದರು.
11 ೧೧ ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ, ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲರನ್ನು ಹೊತ್ತುಕೊಂಡು ಅವರನ್ನು ಸಂರಕ್ಷಿಸಿದನು.
ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ, ಅವುಗಳ ಮೇಲೆ ರೆಕ್ಕೆಯನ್ನಾಡಿಸಿ, ತನ್ನ ರೆಕ್ಕೆಗಳನ್ನು ಚಾಚಿ, ಅವುಗಳನ್ನು ತೆಗೆದುಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ,
12 ೧೨ ಯಾವ ಅನ್ಯದೇವರೂ ಇಲ್ಲ ಯೆಹೋವನೊಬ್ಬನೇ ಅವರನ್ನು ನಡಿಸಿಕೊಂಡು ಬಂದನು.
ಯೆಹೋವ ದೇವರು ಮಾತ್ರವೇ ಇಸ್ರಾಯೇಲರನ್ನು ನಡೆಸಿಕೊಂಡು ಬಂದರು. ಅನ್ಯದೇವರು ಯಾರೂ ಇಸ್ರಾಯೇಲರ ಸಂಗಡ ಇರಲಿಲ್ಲ.
13 ೧೩ ಆತನು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ ಅವರಿಗೆ ವ್ಯವಸಾಯ ವೃದ್ಧಿಯನ್ನು ಉಂಟುಮಾಡಿ, ಬಂಡೆಯಿಂದ ಜೇನೂ ಮತ್ತು ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದನು.
ದೇವರು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ, ಅವರಿಗೆ ವ್ಯವಸಾಯ ವೃದ್ಧಿಯನ್ನುಂಟುಮಾಡಿ, ಬಂಡೆಯಿಂದ ಜೇನೂ, ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದರು.
14 ೧೪ ಆಹಾರಕ್ಕಾಗಿ ಆಕಳಿನ ಮೊಸರು, ಆಡು ಕುರಿಗಳ ಹಾಲು, ಕೊಬ್ಬಿದ ಕುರಿ ಟಗರುಗಳ ಮಾಂಸವು, ಬಾಷಾನ್ ಸೀಮೆಯ ಉತ್ತಮಪಶುಗಳು, ಹೋತಗಳು, ಶ್ರೇಷ್ಠವಾದ ಗೋದಿ ಇವುಗಳನ್ನೂ ಮತ್ತು ಪಾನಕ್ಕಾಗಿ ದ್ರಾಕ್ಷಿಯರಸವನ್ನೂ ಕೊಟ್ಟದ್ದೂ; ಇದನ್ನೆಲ್ಲಾ ನೆನಪಿಗೆ ತಂದುಕೊಳ್ಳಿರಿ.”
ಹಸುಗಳ ಕೆನೆಯನ್ನೂ, ಕುರಿಗಳ ಹಾಲನ್ನೂ, ಕುರಿಮರಿಗಳ ಕೊಬ್ಬಿನ ಸಂಗಡ ಬಾಷಾನಿನ ಟಗರುಗಳನ್ನೂ ಹೋತಗಳನ್ನೂ ಉತ್ತಮವಾದ ಗೋಧಿಯನ್ನು ಕೊಟ್ಟರು. ನೀನು ರಕ್ತಗೆಂಪಾದ ದ್ರಾಕ್ಷಾರಸವನ್ನು ಕುಡಿದೆ.
15 ೧೫ ಆದರೆ ಯೆಶುರೂನು ಚೆನ್ನಾಗಿ ತಿಂದು, ಕೊಬ್ಬಿ, ತನ್ನನ್ನು ಸೃಷ್ಟಿಸಿದ ದೇವರನ್ನು ಬಿಟ್ಟು ತನ್ನ ಆಶ್ರಯದುರ್ಗವನ್ನು ತಿರಸ್ಕರಿಸಿದನು.
ಯೆಶುರೂನು ಎಂಬ ಇಸ್ರಾಯೇಲರು ಕೊಬ್ಬಿ ಹೋದರು. ಅವರು ಹೊಟ್ಟೆ ತುಂಬ ಚೆನ್ನಾಗಿ ತಿಂದು ದಪ್ಪವಾದರು. ಅವರು ತಮ್ಮನ್ನು ಸೃಷ್ಟಿಮಾಡಿದ ದೇವರನ್ನು ಬಿಟ್ಟು, ತಮ್ಮ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದರು.
16 ೧೬ ಅವರು ಅನ್ಯದೇವರುಗಳನ್ನು ಪೂಜಿಸಿ ಆತನನ್ನು ರೇಗಿಸಿದರು; ನಿಷಿದ್ಧಾಚಾರಗಳನ್ನು ನಡಿಸಿ ಆತನಿಗೆ ಸಿಟ್ಟೇರಿಸಿದರು.
ಅನ್ಯದೇವತೆಗಳಿಂದ ದೇವರಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ದೇವರಿಗೆ ಕೋಪವನ್ನು ಎಬ್ಬಿಸಿದರು.
17 ೧೭ ದೇವರೇ ಅಲ್ಲದ ಕ್ಷುದ್ರದೇವತೆಗಳಿಗೂ, ಪೂರ್ವಿಕರು ಭಜಿಸದೆ ಇದ್ದ ಮತ್ತು ತಮಗೆ ಮೊದಲಿನಿಂದಲೂ ಗೊತ್ತಿಲ್ಲದೆ ಇರುವ ನೂತನದೇವತೆಗಳಿಗೂ ಬಲಿಯನ್ನರ್ಪಿಸಿದರು.
ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಮುಂಚಿತವಾಗಿ ಅರಿಯದ ದೇವರುಗಳಿಗೆ, ಸಮೀಪದಲ್ಲಿ ಹೊಸದಾಗಿ ತೋರಿ ಬಂದ ದೇವರುಗಳಿಗೆ, ಅಂದರೆ, ಅವರ ಪಿತೃಗಳು ಭಜಿಸದವುಗಳಿಗೆ ಬಲಿ ಅರ್ಪಿಸಿದರು.
18 ೧೮ ಇಸ್ರಾಯೇಲರೇ, ನಿಮ್ಮನ್ನು ಹುಟ್ಟಿಸಿದ ತಂದೆಯಂತಿರುವ ಶರಣನನ್ನು ನೀವು ಸ್ಮರಿಸಲಿಲ್ಲ; ಹೆತ್ತ ತಾಯಿಯಂತಿರುವ ದೇವರನ್ನು ಮರೆತುಬಿಟ್ಟಿರಿ.
ನಿಮ್ಮನ್ನು ಹುಟ್ಟಿಸಿದ ರಕ್ಷಣಾಬಂಡೆಯನ್ನು ನೆನಸದೆ, ನಿಮ್ಮನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿರಿ.
19 ೧೯ ಯೆಹೋವನು ಇದನ್ನು ಕಂಡು ಅವರ ವಿಷಯದಲ್ಲಿ ಬೇಸರಗೊಂಡನು; ತನ್ನ ಕುಮಾರ ಕುಮಾರ್ತೆಯರ ವಿಷಯದಲ್ಲಿ ವ್ಯಥೆಪಟ್ಟನು.
ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.
20 ೨೦ ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು, “ನಾನು ಅವರಿಗೆ ವಿಮುಖನಾಗಿ ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು. ಅವರು ಸತ್ಯವನ್ನು ತಿಳಿದೂ ಅದನ್ನು ಅನುಸರಿಸದೆ, ದ್ರೋಹಿಗಳಾದ ಮಕ್ಕಳಾಗಿದ್ದಾರೆ.
ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.
21 ೨೧ ಅವರು ದೇವರಲ್ಲದವುಗಳ ಮೂಲಕ ನನ್ನನ್ನು ರೇಗಿಸಿದ್ದರಿಂದ ನಾನು ಜನಾಂಗವಲ್ಲದವರ ಮೂಲಕ ಅವರಲ್ಲಿ ಕೋಪಹುಟ್ಟಿಸುವೆನು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳ ಮೂಲಕ ನನ್ನನ್ನು ಸಿಟ್ಟಿಗೆಬ್ಬಿಸಿದ್ದರಿಂದ ನಾನು ಸದಾಚಾರವಿಲ್ಲದ ಜನರ ಮೂಲಕ ಅವರನ್ನು ಸಿಟ್ಟಿಗೆಬ್ಬಿಸುವೆನು.
ದೇವರಲ್ಲದವುಗಳಿಂದ ಅವರು ನನಗೆ ರೋಷ ಹುಟ್ಟಿಸಿದರು. ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪವನ್ನು ಎಬ್ಬಿಸಿದರು. ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
22 ೨೨ ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ; ಅದು ಪಾತಾಳದ ವರೆಗೂ ವ್ಯಾಪಿಸಿ ಬೆಳೆಯ ಸಹಿತವಾಗಿ ಭೂಮಿಯನ್ನೂ ಬುಡಸಹಿತವಾಗಿ ಬೆಟ್ಟಗಳನ್ನೂ ದಹಿಸಿಬಿಡುವುದು. (Sheol h7585)
ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು. (Sheol h7585)
23 ೨೩ ಅವರಿಗೆ ಒಂದರ ಮೇಲೊಂದಾಗಿ ವಿಪತ್ತುಗಳನ್ನು ಬರಮಾಡುವೆನು; ನನ್ನ ಎಲ್ಲಾ ಬಾಣಗಳನ್ನೂ ಅವರಿಗೆ ವಿರುದ್ಧವಾಗಿ ಪ್ರಯೋಗಿಸುವೆನು.
“ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿಡುವೆನು. ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
24 ೨೪ ಅವರು ಬರದಿಂದ ಕ್ಷೀಣವಾಗುವರು, ತಾಪದಿಂದಲೂ ಅಂಟುರೋಗದಿಂದಲೂ ಸಾಯುವರು; ಅದಲ್ಲದೆ ನಾನು ದುಷ್ಟ ಮೃಗಗಳನ್ನೂ ಮತ್ತು ವಿಷಸರ್ಪಗಳನ್ನೂ ಅವರ ಮೇಲೆ ಬರಮಾಡುವೆನು.
ಅವರು ಹಸಿವೆಯಿಂದ ಬಳಲಿ ಹೋಗುವರು, ಜ್ವಾಲೆಯಿಂದಲೂ ಕಠಿಣ ವ್ಯಾಧಿಯಿಂದಲೂ ಬೀಳುವರು. ಕಾಡುಮೃಗಗಳನ್ನೂ ಧೂಳಿನಲ್ಲಿರುವ ವಿಷಸರ್ಪಗಳನ್ನೂ ಅವರಿಗೆ ವಿರೋಧವಾಗಿ ಕಳುಹಿಸುವೆನು.
25 ೨೫ ಮನೆಯ ಹೊರಗೆ ಕತ್ತಿಯೂ, ಒಳಗೆ ಭಯವೂ ಇರುವುದು. ಯೌವನಸ್ಥರು, ಕನ್ಯೆಯರು, ಮೊಲೆಕೂಸುಗಳು, ನರೇತಲೆಯವರು ಇವರೆಲ್ಲರೂ ಕತ್ತಿಯಿಂದ ಕೊಲ್ಲಲ್ಪಡುವರು.
ಮನೆಯ ಹೊರಗೆ ಖಡ್ಗವೂ ಒಳಗೆ ಭಯವೂ ಇವರಲ್ಲಿರುವುವು. ಪ್ರಾಯಸ್ಥರೂ ಕನ್ನಿಕೆಯರೂ ನರೆಕೂದಲಿನವರೂ ಹಾಲು ಕುಡಿಯುವ ಕೂಸುಗಳೂ ಖಡ್ಗಗಳಿಗೆ ಸಂಹಾರವಾಗುವರು.
26 ೨೬ ಅವರನ್ನು ಸಂಪೂರ್ಣವಾಗಿ ನಾಶಮಾಡುತ್ತಿದ್ದೆನು, ಅವರು ಮನುಷ್ಯರ ಜ್ಞಾಪಕದಲ್ಲೂ ಇಲ್ಲದಂತೆ ಮಾಡುತ್ತಿದ್ದೆನು.
ನಾನು ಅವರನ್ನು ಚದರಿಸಿಬಿಡುವೆನು. ಅವರ ನೆನಪೇ ಮನುಷ್ಯರಲ್ಲಿ ಇರದ ಹಾಗೆ ಮಾಡುತ್ತಿದ್ದೆನು.
27 ೨೭ ಆದರೆ ಅವರ ವಿರೋಧಿಗಳ ಹಮ್ಮಿನಿಂದ ತಪ್ಪಾದ ಭಾವನೆ ಮಾಡಿಕೊಂಡು, ‘ಇದು ನಮ್ಮ ಭುಜಬಲದಿಂದಲೇ ಹೊರತು ಯೆಹೋವನಿಂದ ಆಗಲಿಲ್ಲ ಅಂದುಕೊಳ್ಳುವರು’ ಎಂದು ನಾನು ಹಿಂದೆಗೆದೆನು” ಎಂಬುದೇ.
ಆದರೆ ಅವರ ವಿರೋಧಿಗಳು ತಪ್ಪಾದ ಭಾವನೆ ಮಾಡಿಕೊಂಡು, ‘ಯೆಹೋವ ದೇವರು ಇವುಗಳನ್ನೆಲ್ಲಾ ಮಾಡಲಿಲ್ಲ, ನಾವೇ ನಮ್ಮ ಕೈಯಿಂದ ಜಯಿಸಿದೆವೆಂದುಕೊಳ್ಳುವರು,’ ಆದ್ದರಿಂದ ನಾನು ಹಿಂತಗೆದುಕೊಂಡೆನು.”
28 ೨೮ ಅವರು ವಿವೇಚನೆಯಿಲ್ಲದ ಜನರು; ಅವರಿಗೆ ಸ್ವಲ್ಪವಾದರೂ ವಿವೇಕವಿಲ್ಲ.
ಏಕೆಂದರೆ ಇಸ್ರಾಯೇಲರು ಆಲೋಚನೆ ಇಲ್ಲದ ಜನಾಂಗವೇ. ಅವರಲ್ಲಿ ವಿವೇಕವಿಲ್ಲ.
29 ೨೯ ಅವರಿಗೆ ಜ್ಞಾನವಿದ್ದರೆ ಈ ಸಂಗತಿಗಳನ್ನೆಲ್ಲಾ ಗ್ರಹಿಸುತ್ತಿದ್ದರು; ತಮಗೆ ಅಂತ್ಯದಲ್ಲಿ ದುರವಸ್ಥೆ ಪ್ರಾಪ್ತವಾಗುವುದೆಂದು ತಿಳಿದುಕೊಳ್ಳುತ್ತಿದ್ದರು!
ಅವರಿಗೆ ಜ್ಞಾನವಿದ್ದಿದ್ದರೆ ಈ ವಿಷಯಗಳನ್ನೆಲ್ಲಾ ಗ್ರಹಿಸುತ್ತಿದ್ದರು, ತಮ್ಮ ಕಡೆಕಾಲದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.
30 ೩೦ ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು? ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು?
ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
31 ೩೧ ನಮ್ಮ ಆಶ್ರಯದುರ್ಗ ಅವರ ಆಶ್ರಯದುರ್ಗದಂತಲ್ಲಾ, ನಮ್ಮ ಅಶ್ರಯದಾತನಿಗೆ ಯಾರು ಸಮಾನರಲ್ಲವೆಂದು ನಮ್ಮ ಶತ್ರುಗಳೇ ಒಪ್ಪಿಕೊಳ್ಳುತ್ತಾರೆ.
ಏಕೆಂದರೆ ನಮ್ಮ ರಕ್ಷಣಾಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
32 ೩೨ ಅವರು ಸೊದೋಮ್ಯರೆಂಬ ದ್ರಾಕ್ಷಾಲತೆಯ ಒಂದು ಬಳ್ಳಿಯಂತಿದ್ದಾರೆ; ಮತ್ತು ಅದು ಗೊಮೋರ ಪಟ್ಟಣದ ತೋಟಗಳಲ್ಲಿ ಬೆಳೆಯುವ ಜಾತಿ. ಅದರ ದ್ರಾಕ್ಷಿಹಣ್ಣು ವಿಷದ ದ್ರಾಕ್ಷಿಹಣ್ಣು; ಅದರ ಗೊಂಚಲು ಕಹಿ.
ಏಕೆಂದರೆ ಸೊದೋಮಿನ ದ್ರಾಕ್ಷಿಗಿಡದಿಂದಲೂ, ಗೊಮೋರದ ತೋಟದೊಳಗಿಂದಲೂ ಅವರ ದ್ರಾಕ್ಷಿಗಿಡ ಉಂಟಾಯಿತು. ಅವರ ಹಣ್ಣುಗಳು, ವಿಷದ ಹಣ್ಣುಗಳು, ಆ ಹಣ್ಣುಗಳ ಗೊಂಚಲು ಕಹಿಯಾಗಿವೆ.
33 ೩೩ ಅದರ ದ್ರಾಕ್ಷಾರಸವು ಸರ್ಪದಂತೆಯೂ ಮತ್ತು ಕ್ರೂರ ವಿಷಸರ್ಪದಂತೆ ಮರಣಕರವಾದದ್ದು.
ಅವರ ದ್ರಾಕ್ಷಾರಸವು ಸರ್ಪಗಳ ವಿಷವೂ, ಹಾವುಗಳ ಕ್ರೂರ ವಿಷವೂ ಆಗಿದೆ.
34 ೩೪ ಇದನ್ನೆಲ್ಲಾ ನಾನು ಮುದ್ರೆಹಾಕಿ ನನ್ನ ಉಗ್ರಾಣದಲ್ಲಿಟ್ಟುಕೊಂಡಿದ್ದೇನೆ ಅಲ್ಲವೇ?
“ನಾನು ಇದನ್ನು ನನ್ನ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದಲ್ಲವೋ? ಇದನ್ನು ನಾನು ಮುದ್ರಿಸಿದ್ದಲ್ಲವೋ?
35 ೩೫ ಪ್ರತಿಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ಅವರು ಜಾರಿ ಬೀಳುವ ಸಮಯ ಬರುವುದು. ಅವರಿಗೆ ಆಪತ್ಕಾಲವು ಸಮೀಪಿಸಿತು; ಅವರಿಗೋಸ್ಕರ ಸಿದ್ಧವಾಗಿರುವ ದುರ್ಗತಿ ಬೇಗ ಬರುವುದು.
ಮುಯ್ಯಿಗೆ ಮುಯ್ಯಿ ತೀರಿಸುವುದೂ, ಪ್ರತಿಫಲ ಕೊಡುವುದೂ ನನ್ನದೇ. ತಕ್ಕ ಕಾಲದಲ್ಲಿ ಅವರ ಕಾಲು ಜಾರುವುದು. ಅವರ ವಿನಾಶದ ದಿವಸ ಸಮೀಪವಾಗಿದೆ. ಅವರಿಗೆ ಸಿದ್ಧವಾದ ದುರ್ಗತಿಯ ಕಾಲ ಬೇಗ ಬರುತ್ತವೆ.”
36 ೩೬ ಆಗ ಯೆಹೋವನು ತನ್ನ ಜನರಿಗಾಗಿ ನ್ಯಾಯತೀರಿಸುವನು. ಪರತಂತ್ರರಾಗಲಿ ಅಥವಾ ಸ್ವತಂತ್ರರಾಗಲಿ ಅವರೆಲ್ಲರೂ ನಿರಾಶ್ರಿತರಾಗಿ ನಿಶ್ಶೇಷರಾದುದ್ದನ್ನು ಆತನು ತಿಳಿದು ತನ್ನ ಸೇವಕರ ವಿಷಯದಲ್ಲಿ ಕನಿಕರಪಡುವನು.
ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.
37 ೩೭ ಯೆಹೋವನು ಅವರ ವಿಷಯದಲ್ಲಿ ಹೇಳುವುದು ಏನೆಂದರೆ, “ಅವರು ಪೂಜಿಸುತ್ತಿದ್ದ ದೇವರುಗಳು ಎಲ್ಲಿ ಹೋದರು? ಅವರು ಆಶ್ರಯಿಸಿಕೊಂಡಿದ್ದ ಆಶ್ರಯದುರ್ಗನು ಎಲ್ಲಿದ್ದಾನೆ?
ಆಗ ಯೆಹೋವ ದೇವರು ಹೀಗನ್ನುವರು: “ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ,
38 ೩೮ ಅವರ ನೈವೇದ್ಯಗಳ ಕೊಬ್ಬನ್ನು ತಿಂದು ಮತ್ತು ಅವರು ಸಮರ್ಪಿಸಿದ ಪಾನದ್ರವ್ಯಗಳನ್ನು ಕುಡಿದ ದೇವತೆಗಳು ಎಲ್ಲಿ? ಅವರೇ ನಿಮ್ಮ ಸಹಾಯಕ್ಕೆ ಬರಲಿ; ಅವರೇ ನಿಮ್ಮನ್ನು ಕಾಯಲಿ.
ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ದೇವರುಗಳು ಎಲ್ಲಿ? ಈಗ ಆ ದೇವರುಗಳು ಎದ್ದು ನಿಮಗೆ ಸಹಾಯ ಮಾಡಲಿ, ನಿಮಗೋಸ್ಕರ ಕಾವಲಾಗಲಿ.
39 ೩೯ ನಾನೇ, ನಾನೊಬ್ಬನೇ ದೇವರಾಗಿರಲಾಗಿ ನನ್ನ ಹೊರತು ಯಾವ ದೇವರೂ ಇಲ್ಲವೆಂದು ಈಗಲಾದರೂ ತಿಳಿದುಕೊಳ್ಳಿರಿ. ಬದುಕಿಸುವವನೂ ಹಾಗೂ ಕೊಲ್ಲುವವನೂ ನಾನೇ; ಗಾಯಪಡಿಸುವವನೂ ಮತ್ತು ವಾಸಿಮಾಡುವವನೂ ನಾನೇ; ನನ್ನ ಕೈಯಿಂದ ತಪ್ಪಿಸಲು ಶಕ್ತನು ಯಾವನೂ ಇಲ್ಲ.
“ನಾನು ಇರುವಾತನೇ ಆಗಿದ್ದೇನೆ! ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ. ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ, ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
40 ೪೦ ನಾನು ಆಕಾಶದ ಕಡೆಗೆ ಕೈಯೆತ್ತಿ ನಾನು ಸದಾಕಾಲ ಜೀವಿಸುವವನೆಂಬುದು ಎಷ್ಟು ನಿಶ್ಚಯ ಎಂದು ಖಂಡಿತವಾಗಿ ಪ್ರಮಾಣಮಾಡುವೆನು,
ಆಕಾಶದ ಕಡೆ ನನ್ನ ಕೈಯೆತ್ತಿ, ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.
41 ೪೧ ‘ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ, ನಾನು ಕೈ ಚಾಚಿ ನ್ಯಾಯವನ್ನು ಸ್ಥಾಪಿಸುವುದಕ್ಕೆ ಮುನ್ನುಗ್ಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು;
ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.
42 ೪೨ ನನ್ನ ಬಾಣಗಳು ರಕ್ತವನ್ನು ಕುಡಿದು ಮತ್ತವಾಗುವವು; ನನ್ನ ಕತ್ತಿಯು ಕೊಲ್ಲಲ್ಪಟ್ಟವರ ಮತ್ತು ಸೆರೆಹಿಡಿದವರ ರಕ್ತಮಾಂಸಗಳನ್ನು ಭಕ್ಷಿಸಿ ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚೆಂಡಾಡುವುದು’ ಎಂಬುದೇ.
ಸತ್ತವರ ಮತ್ತು ಸೆರೆಯಾದವರ ರಕ್ತದಿಂದಲೂ, ಶತ್ರುವಿಗೆ ಮಾಡಿದ ಪ್ರತೀಕಾರದಿಂದಲೂ ನನ್ನ ಬಾಣಗಳು ಅಮಲೇರುವುದು. ನನ್ನ ಖಡ್ಗವು ಮಾಂಸವನ್ನು ಭಕ್ಷಿಸುವುದು. ಹೀಗೆ ಶತ್ರುಗಳ ನಾಯಕರ ತಲೆ ಬೀಳುವುದು.”
43 ೪೩ ಜನಾಂಗಳಿರಾ, ದೇವರ ಜನರನ್ನು ಹೊಗಳಿರಿ. ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ ಯೆಹೋವನು ಪ್ರತಿದಂಡನೆ ಮಾಡುತ್ತಾನೆ; ಅವರಿಗೆ ಮುಯ್ಯಿತೀರಿಸುತ್ತಾನೆ; ತನ್ನ ಜನರಿಗೋಸ್ಕರವೂ ಮತ್ತು ದೇಶಕ್ಕೋಸ್ಕರವೂ ದೋಷ ಪರಿಹಾರಮಾಡುತ್ತಾನೆ.
ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ. ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು. ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.
44 ೪೪ ಮೋಶೆ ಮತ್ತು ನೂನನ ಮಗನಾದ ಯೆಹೋಶುವನೂ ಈ ಪದ್ಯದ ಮಾತುಗಳನ್ನೆಲ್ಲಾ ಜನರಿಗೆ ಕೇಳಿಸುವಂತೆ ಹೇಳಿದರು.”
ಆಗ ಮೋಶೆಯು ನೂನನ ಮಗನಾದ ಹೋಶೇಯನ ಸಂಗಡ ಬಂದು, ಈ ಹಾಡಿನ ಮಾತುಗಳನ್ನೆಲ್ಲಾ ಜನರು ಕೇಳುವ ಹಾಗೆ ಹೇಳಿದನು.
45 ೪೫ ಮೋಶೆ ಈ ಮಾತುಗಳನ್ನೆಲ್ಲಾ ಇಸ್ರಾಯೇಲರಿಗೆ ಹೇಳಿ ಮುಗಿಸಿದ ನಂತರ,
ಮೋಶೆಯು ಈ ಮಾತುಗಳನ್ನೆಲ್ಲಾ ಸಮಸ್ತ ಇಸ್ರಾಯೇಲಿಗೆ ಹೇಳಿ ತೀರಿಸಿದ ತರುವಾಯ ಅವನು ಅವರಿಗೆ,
46 ೪೬ ಅವರಿಗೆ, “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸಿರಿಸಬೇಕೆಂದು ಆಜ್ಞಾಪಿಸಿರಿ.
“ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ನಿಯಮದ ಮಾತುಗಳನ್ನು ಅನುಸರಿಸಬೇಕೆಂದು ನೀವು ನಿಮ್ಮ ಮಕ್ಕಳಿಗೆ ಆಜ್ಞಾಪಿಸಿರಿ.
47 ೪೭ ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ; ನೀವು ಯೊರ್ದನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಇದನ್ನು ಅನುಸರಿಸುವುದರಿಂದಲೇ ಬಹುಕಾಲ ಇರುವಿರಿ” ಎಂದು ಹೇಳಿದನು.
ಏಕೆಂದರೆ ಇದು ನಿಮಗೆ ಕೇವಲ ವ್ಯರ್ಥವಾದದ್ದಲ್ಲ. ಇದು ನಿಮಗೆ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ,” ಎಂದು ಹೇಳಿದನು.
48 ೪೮ ಆದೇ ದಿನ ಯೆಹೋವನು ಮೋಶೆಗೆ,
ಆ ದಿವಸವೇ ಯೆಹೋವ ದೇವರು ಮೋಶೆಗೆ,
49 ೪೯ “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ ಮೋವಾಬ್ಯರ ದೇಶದಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ, ನಾನು ಇಸ್ರಾಯೇಲರಿಗೆ ಸ್ವದೇಶವಾಗುವುದಕ್ಕೆ ಕೊಡುವ ಕಾನಾನ್ ದೇಶವನ್ನು ನೋಡು.
“ನೀನು ಈ ಅಬಾರೀಮ್ ಬೆಟ್ಟದ ಮೇಲೆ ಅಂದರೆ, ಮೋವಾಬ್ ದೇಶದಲ್ಲಿ ಯೆರಿಕೋವಿಗೆ ಎದುರಾಗಿ ಇರುವ ನೆಬೋ ಪರ್ವತದ ಮೇಲೆ ಏರಿ ಹೋಗು. ನಾನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವ ಕಾನಾನ್ ದೇಶವನ್ನು ನೋಡು.
50 ೫೦ ಅನಂತರ ನಿನ್ನ ಅಣ್ಣನಾದ ಆರೋನನು ಹೇಗೆ ಹೋರೇಬ್ ಎಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪೂರ್ವಿಕರಲ್ಲಿ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪೂರ್ವಿಕರಲ್ಲಿ ಸೇರಬೇಕು.
ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು, ತನ್ನ ಜನರ ಬಳಿಗೆ ಸೇರಿದ ಹಾಗೆ, ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು, ನಿನ್ನ ಜನರ ಬಳಿಗೆ ಸೇರಬೇಕು.
51 ೫೧ ನೀವಿಬ್ಬರೂ ಚಿನ್ ಅರಣ್ಯದ ಕಾದೇಶಿನ ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಬಳಿಯಲ್ಲಿದ್ದಾಗ, ಇಸ್ರಾಯೇಲರ ಮಧ್ಯದಲ್ಲಿ ನೀನು ನನಗೆ ವಿರುದ್ಧವಾಗಿ ದ್ರೋಹಮಾಡಿ ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದುದರಿಂದ ಹೀಗೆ ಆಗಬೇಕು.
ನೀವಿಬ್ಬರೂ ಚಿನ್ ಮರುಭೂಮಿಯಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲರ ಮುಂದೆ ನಂಬದೆ, ನನ್ನ ಪವಿತ್ರತೆಯನ್ನು ಇಸ್ರಾಯೇಲರ ನಡುವೆ ಕಾಪಾಡದೆ ನಂಬದೆ ಹೋದಿರಿ.
52 ೫೨ ನಾನು ಇಸ್ರಾಯೇಲರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡಬಹುದೇ ಹೊರತು ಅದರಲ್ಲಿ ಪ್ರವೇಶಿಸಕೂಡದು” ಎಂದು ಆಜ್ಞಾಪಿಸಿದನು.
ಆದುದರಿಂದ, ನೀನು ಆ ದೇಶವನ್ನು ದೂರದಿಂದ ನೋಡುವೆ, ಆದರೆ ನಾನು ಇಸ್ರಾಯೇಲರಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.

< ಧರ್ಮೋಪದೇಶಕಾಂಡ 32 >