< ಧರ್ಮೋಪದೇಶಕಾಂಡ 28 >

1 ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ, ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.
ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಅನುಸರಿಸಿ ನಡೆದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಲೋಕದ ಎಲ್ಲಾ ಜನಾಂಗಗಳಿಗಿಂತ ಉನ್ನತ ಸ್ಥಿತಿಯಲ್ಲಿರಿಸುವರು.
2 ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು. ಅವು ಯಾವುವೆಂದರೆ:
ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಕೇಳಿ ಪಾಲಿಸಿದರೆ, ಈ ಎಲ್ಲಾ ಆಶೀರ್ವಾದಗಳು ನಿಮ್ಮ ಮೇಲೆ ಬಂದು, ನಿಮ್ಮೊಂದಿಗಿರುವವು:
3 ನಿಮಗೆ ಊರಿನಲ್ಲಿಯೂ ಮತ್ತು ಹೊಲದಲ್ಲಿಯೂ ಶುಭವುಂಟಾಗುವುದು.
ಪಟ್ಟಣದಲ್ಲಿ ನಿಮಗೆ ಆಶೀರ್ವಾದ, ಹೊಲದಲ್ಲಿ ನಿಮಗೆ ಆಶೀರ್ವಾದ,
4 ನಿಮ್ಮ ಸಂತಾನದವರಿಗೂ, ವ್ಯವಸಾಯಗಳಿಗೂ, ದನ, ಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವುದು.
ನಿಮ್ಮ ಸಂತಾನಕ್ಕೂ ನಿಮ್ಮ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
5 ನಿಮ್ಮ ಪುಟ್ಟಿಗಳಿಗೂ ಮತ್ತು ಕೊಣವಿಗೆಗಳಿಗೂ ಶುಭವುಂಟಾಗುವುದು.
ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಆಶೀರ್ವಾದ.
6 ನೀವು ಹೊರಗೆ ಹೋಗುವಾಗಲೂ ಒಳಗೆ ಬರುವಾಗಲೂ ಶುಭವುಂಟಾಗುವುದು.
ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಆಶೀರ್ವಾದ, ಬರುವಾಗಲೂ ನಿಮಗೆ ಆಶೀರ್ವಾದ.
7 ನಿಮ್ಮ ವಿರುದ್ಧವಾಗಿ ಬರುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಯೆಹೋವನು ಮಾಡುವನು; ಅವರು ಒಂದೇ ದಾರಿಯಿಂದ ನಿಮ್ಮ ವಿರುದ್ಧವಾಗಿ ಬಂದರೂ ಏಳು ದಾರಿಗಳಿಂದ ಓಡಿಹೋಗುವರು.
ನಿಮಗೆ ವಿರೋಧವಾಗಿ ಏಳುವ ನಿಮ್ಮ ಶತ್ರುಗಳನ್ನು ಯೆಹೋವ ದೇವರು ನಿಮ್ಮ ಮುಂದೆಯೇ ಸೋಲಿಸಿಬಿಡುವರು. ಅವರು ಒಂದೇ ಮಾರ್ಗದಲ್ಲಿ ನಿಮಗೆ ವಿರೋಧವಾಗಿ ಹೊರಟು ಬಂದರೂ, ಏಳು ಮಾರ್ಗಗಳಿಂದ ಓಡಿಹೋಗುವರು.
8 ನಿಮ್ಮ ಕಣಜಗಳು ಯಾವಾಗಲೂ ತುಂಬಿರುವಂತೆಯೂ ಮತ್ತು ನಿಮ್ಮ ಪ್ರಯತ್ನಗಳೆಲ್ಲಾ ಸಫಲವಾಗುವಂತೆಯೂ ನಿಮ್ಮ ದೇವರಾದ ಯೆಹೋವನು ನಿಮಗೆ ಶುಭವನ್ನು ಅನುಗ್ರಹಿಸುವನು. ಆತನು ನಿಮಗೆ ಕೊಡುವ ದೇಶದಲ್ಲಿ ನಿಮಗೆ ಶುಭವನ್ನೇ ಉಂಟುಮಾಡುವನು.
ನಿಮ್ಮ ಕಣಜಗಳಲ್ಲಿಯೂ, ನೀವು ಕೈಹಾಕುವ ಎಲ್ಲಾದರಲ್ಲಿಯೂ ನಿಮಗೆ ಆಶೀರ್ವಾದ ಬರುವಂತೆ ಯೆಹೋವ ದೇವರು ಅಪ್ಪಣೆ ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು.
9 ನೀವು ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ, ಆತನು ವಾಗ್ದಾನಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು.
ನೀವು ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಪಾಲಿಸಿ, ಅವರ ಮಾರ್ಗಗಳಲ್ಲಿ ನಡೆದರೆ, ಯೆಹೋವ ದೇವರು ನಿಮಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ತಮಗೆ ಮೀಸಲಾದ ಪರಿಶುದ್ಧ ಜನರನ್ನಾಗಿ ಸ್ಥಾಪಿಸುವರು.
10 ೧೦ ಭೂಮಿಯಲ್ಲಿರುವ ಎಲ್ಲಾ ಜನಗಳೂ ನಿಮ್ಮನ್ನು ಯೆಹೋವನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.
ಆಗ ಭೂಲೋಕದ ಜನರೆಲ್ಲರೂ, ನೀವು ಯೆಹೋವ ದೇವರ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.
11 ೧೧ ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣ ಮಾಡಿದ ಮೇರೆಗೆ ನಿಮಗೆ ಕೊಡುವ ದೇಶದಲ್ಲಿ ಆತನು ನಿಮ್ಮ ಸಂತಾನ, ಪಶು ಮತ್ತು ವ್ಯವಸಾಯಗಳಲ್ಲಿ ಸಮೃದ್ಧಿಯನ್ನು ಉಂಟುಮಾಡುವನು.
ನಿಮಗೆ ಕೊಡುತ್ತೇನೆಂದು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಯೆಹೋವ ದೇವರು ಭೂಮಿಯ ಮೇಲೆ ನಿಮ್ಮನ್ನು ಸಂತಾನ, ಪಶು ಮತ್ತು ಕೃಷಿ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವರು.
12 ೧೨ ಯೆಹೋವನು ಆಕಾಶದಲ್ಲಿರುವ ತನ್ನ ಜಲನಿಧಿಯನ್ನು ತೆರೆದು ನಿಮ್ಮ ದೇಶದ ಮೇಲೆ ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ, ನಿಮ್ಮ ಎಲ್ಲಾ ವ್ಯವಸಾಯವು ಫಲಭರಿತವಾಗುವಂತೆ ಸಾಫಲ್ಯತೆ ಉಂಟುಮಾಡುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಸಾಲತೆಗೆದುಕೊಳ್ಳುವುದಿಲ್ಲ.
ಯೆಹೋವ ದೇವರು ಆಕಾಶವೆಂಬ ತಮ್ಮ ಒಳ್ಳೆಯ ಉಗ್ರಾಣವನ್ನು ನಿಮಗೆ ತೆರೆದು, ನಿಮ್ಮ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು, ನಿಮ್ಮ ಕೈಕೆಲಸವನ್ನೆಲ್ಲಾ ಆಶೀರ್ವದಿಸುವರು. ನೀವು ಅನೇಕ ಜನಾಂಗಗಳಿಗೆ ಸಾಲಕೊಡುವಿರೇ ಹೊರತು ಸಾಲ ತೆಗೆದುಕೊಳ್ಳುವುದಿಲ್ಲ.
13 ೧೩ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೇ ಲಕ್ಷ್ಯವಿಟ್ಟು ಕೇಳಿದರೆ, ನೀವು ಎಲ್ಲರಿಗಿಂತಲೂ ಮೇಲಿನವರಾಗಿರುವಿರೇ ಹೊರತು ಇತರರಿಗೆ ಅಧೀನರಾಗುವುದಿಲ್ಲ.
ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ನೀವು ಕೇಳಿ ಕಾಪಾಡಿ ಕೈಗೊಂಡರೆ, ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು. ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.
14 ೧೪ ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ಬಿಟ್ಟು ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ಅವುಗಳನ್ನೇ ಅನುಸರಿಸಿ ನಡೆದರೆ ಆತನು ಇತರರಿಗೆ ನಿಮ್ಮನ್ನು ಅಧೀನಮಾಡದೆ ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವನು.
ಹೀಗಿರುವುದರಿಂದ ನೀವು ಬೇರೆ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಅನುಸರಿಸಿ ನಡೆಯದಂತೆ, ನಾನು ಇಂದು ನಿಮಗೆ ಆಜ್ಞಾಪಿಸುವ ಈ ಮಾತುಗಳನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ತಿರುಗಬಾರದು.
15 ೧೫ ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡದೆ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದರೆ ಈ ಶಾಪಗಳು ನಿಮಗೆ ಪ್ರಾಪ್ತವಾಗುವವು:
ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕೈಗೊಳ್ಳದೇ ಹೋದರೆ, ಈ ಎಲ್ಲಾ ಶಾಪಗಳು ನಿಮ್ಮ ಮೇಲೆ ಬಂದು ನಿಮ್ಮನ್ನು ಹಿಡಿದುಕೊಳ್ಳುವವು:
16 ೧೬ ನಿಮಗೆ ಊರಿನಲ್ಲಿಯೂ ಮತ್ತು ಅಡವಿಯಲ್ಲಿಯೂ ಶಾಪ ಉಂಟಾಗುವುದು.
ನಿಮಗೆ ಪಟ್ಟಣದಲ್ಲಿಯೂ ಶಾಪ, ಹೊಲದಲ್ಲಿಯೂ ನಿಮಗೆ ಶಾಪ.
17 ೧೭ ನಿಮ್ಮ ಪುಟ್ಟಿಗಳಿಗೂ ಮತ್ತು ಕೊಣವಿಗೆಗಳಿಗೂ ಶಾಪ ಉಂಟಾಗುವುದು.
ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಶಾಪ.
18 ೧೮ ನಿಮ್ಮ ಸಂತಾನ, ವ್ಯವಸಾಯ, ದನ ಮತ್ತು ಕುರಿಗಳಿಗೂ ಶಾಪ ಉಂಟಾಗುವುದು.
ನಿಮ್ಮ ಗರ್ಭದ ಫಲಕ್ಕೂ ಪಶುಗಳ ಹಿಂಡಿಗೂ, ಕುರಿಗಳ ಮಂದೆಗಳಿಗೂ ಶಾಪ.
19 ೧೯ ನೀವು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ಶಾಪ ಉಂಟಾಗುವುದು.
ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಶಾಪ, ಬರುವಾಗಲೂ ಶಾಪ.
20 ೨೦ ನೀವು ದುರ್ನಡತೆಯುಳ್ಳವರಾಗಿ ಯೆಹೋವನನ್ನು ಬಿಟ್ಟಿದ್ದರಿಂದ ಆತನು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ವಿಪತ್ತು, ಕಳವಳ, ಶಾಪ ಇವುಗಳನ್ನು ಉಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವನು.
ನೀವು ನಿಮ್ಮ ಯೆಹೋವ ದೇವರನ್ನು ಬಿಟ್ಟ ದುಷ್ಟಕ್ರಿಯೆಯ ನಿಮಿತ್ತ, ಯೆಹೋವ ದೇವರು ನೀವು ಬೇಗ ನಾಶವಾಗುವವರೆಗೂ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮಗೆ ಶಾಪ, ಗಲಿಬಿಲಿ ಹಾಗು ಗದರಿಕೆ ಮುಂತಾದವುಗಳನ್ನು ಉಂಟುಮಾಡುವರು.
21 ೨೧ ವ್ಯಾಧಿಯು ನಿಮಗೆ ಹತ್ತಿಕೊಂಡೇ ಇರುವಂತೆ ಯೆಹೋವನು ಮಾಡಿ, ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮಲ್ಲಿ ಒಬ್ಬರೂ ಉಳಿಯದಂತೆ ಮಾಡುವನು.
ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವವರೆಗೆ ಯೆಹೋವ ದೇವರು ನಿಮಗೆ ವ್ಯಾಧಿಯು ಅಂಟಿಕೊಳ್ಳುವಂತೆ ಮಾಡುವರು.
22 ೨೨ ಆತನು ನಿಮ್ಮನ್ನು ಕ್ಷಯರೋಗ, ಚಳಿಜ್ವರ, ಉರಿತ, ಉಷ್ಣಜ್ವರಗಳಿಂದಲೂ, ದೇಶವನ್ನು ಕ್ಷಾಮದಿಂದಲೂ ಮತ್ತು ಬೆಳೆಯನ್ನು ಕಾಡಿನ ಬಿಸಿಗಾಳಿಗಳಿಂದಲೂ ನರಳುವಂತೆ ಮಾಡುವನು. ನೀವು ಸಾಯುವ ತನಕ ಇವು ನಿಮ್ಮನ್ನು ಬೆನ್ನತ್ತುವವು.
ಯೆಹೋವ ದೇವರು ಕ್ಷಯರೋಗದಿಂದಲೂ, ಚಳಿಜ್ವರದಿಂದಲೂ, ಉರಿವಾತದಿಂದಲೂ, ಉಷ್ಣಜ್ವರದಿಂದಲೂ ಕುಗ್ಗಿಸಿ, ದೇಶವನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಯಿಂದಲೂ ಬಾಧಿಸುವರು. ನೀವು ನಾಶವಾಗುವ ತನಕ ಅವು ನಿಮ್ಮನ್ನು ಹಿಂದಟ್ಟಿಬರುವವು.
23 ೨೩ ಮೇಲೆ ಆಕಾಶವು ಮಳೆಸುರಿಸದೆ ತಾಮ್ರದಂತೆಯೂ ಮತ್ತು ಕೆಳಗೆ ಭೂಮಿಯು ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು.
ನಿಮ್ಮ ತಲೆಯ ಮೇಲಿರುವ ಆಕಾಶವು ಕಂಚಿನಂತೆಯೂ ಕೆಳಗಿರುವ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು.
24 ೨೪ ನಿಮ್ಮ ದೇಶದಲ್ಲಿ ಯೆಹೋವನು ಆಕಾಶದಿಂದ ಮಳೆಗೆ ಬದಲಾಗಿ ಧೂಳನ್ನೂ ಮತ್ತು ಉಸುಬನ್ನೂ ನಿಮ್ಮ ಮೇಲೆ ಸುರಿಸುವನು; ಅದುದರಿಂದ ನೀವು ನಾಶವಾಗಿ ಹೋಗುವಿರಿ.
ಯೆಹೋವ ದೇವರು ನಿಮ್ಮ ದೇಶದಲ್ಲಿ ಮಳೆಗೆ ಬದಲಾಗಿ ಹುಡಿಯೂ ಧೂಳೂ ಆಗುವಂತೆ ಮಾಡುವರು. ನೀವು ನಾಶವಾಗುವವರೆಗೆ ಅದು ಆಕಾಶದಿಂದ ನಿಮ್ಮ ಮೇಲೆ ಸುರಿಯುವುದು.
25 ೨೫ ನೀವು ಶತ್ರುಗಳಿಂದ ಸೋಲನ್ನು ಅನುಭವಿಸುವಂತೆ ಯೆಹೋವನು ಮಾಡುವನು; ನೀವು ಒಂದೇ ದಾರಿಯಿಂದ ಅವರೆದುರಿಗೆ ಹೋಗಿ ಏಳು ದಾರಿಗಳಿಂದ ಓಡಿಹೋಗುವಿರಿ. ಲೋಕದ ಎಲ್ಲಾ ರಾಜ್ಯಗಳವರೂ ಇದನ್ನು ಕಂಡು ಬೆರಗಾಗುವರು.
ಯೆಹೋವ ದೇವರು ನಿಮ್ಮನ್ನು ನಿಮ್ಮ ಶತ್ರುಗಳ ಮುಂದೆ ಸೋಲಿಸಿಬಿಡುವರು. ನೀವು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ದಾಳಿಮಾಡಲು ಹೊರಟು, ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗುವಿರಿ. ಭೂಮಿಯ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವವು.
26 ೨೬ ನಿಮ್ಮ ಹೆಣಗಳು ಪಕ್ಷಿಗಳಿಗೂ ಮತ್ತು ಕಾಡು ಮೃಗಗಳಿಗೂ ಆಹಾರವಾಗುವವು; ಅವುಗಳನ್ನು ಬೆದರಿಸುವವರು ಯಾರೂ ಇರುವುದಿಲ್ಲ.
ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುದು. ಯಾರೂ ಅವುಗಳನ್ನು ಬೆದರಿಸಿ ಓಡಿಸುವುದಿಲ್ಲ.
27 ೨೭ ಐಗುಪ್ತ್ಯರ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಯೆಹೋವನು ನಿಮ್ಮನ್ನು ಬಾಧಿಸುವನು.
ಯೆಹೋವ ದೇವರು ನಿಮ್ಮನ್ನು ಈಜಿಪ್ಟನ್ನು ಬಾಧಿಸುವಂತೆ ಹುಣ್ಣುಗಳಿಂದಲೂ, ಮೂಲವ್ಯಾಧಿಯಿಂದಲೂ, ಕಜ್ಜಿಯಿಂದಲೂ, ಇಸುಬಿನಿಂದಲೂ ನೀವು ವಾಸಿಯಾಗದ ರೋಗಗಳಿಂದ ನಿಮ್ಮನ್ನು ಬಾಧಿಸುವರು.
28 ೨೮ ಚಿತ್ತಭ್ರಮಣೆ, ಕುರುಡುತನ, ಮನೋವಿಸ್ಮಯ ಇವುಗಳಿಂದ ಯೆಹೋವನು ನಿಮ್ಮನ್ನು ಬಾಧಿಸುವನು.
ಯೆಹೋವ ದೇವರು ನಿಮ್ಮನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಕಾಡುವರು.
29 ೨೯ ನೀವು ಕುರುಡರಂತೆ ಮಧ್ಯಾಹ್ನದಲ್ಲಿಯೂ ಕತ್ತಲಾಯಿತೆಂದು ತಡವರಿಸುತ್ತಾ ಇರುವಿರಿ; ನೀವು ಮಾಡುವ ಯಾವ ಕೆಲಸವೂ ಕೈಗೂಡುವುದಿಲ್ಲ. ಅನ್ಯರು ಯಾವಾಗಲೂ ನಿಮ್ಮನ್ನು ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು; ತಪ್ಪಿಸುವವರು ಯಾರೂ ಇರುವುದಿಲ್ಲ.
ಕಣ್ಣು ಕಾಣದವನು ಕತ್ತಲಲ್ಲಿ ತಡವಾಡುವಂತೆ ಮಧ್ಯಾಹ್ನದಲ್ಲಿ ತಡವಾಡುತ್ತಾ ಇರುವಿರಿ, ನಿಮ್ಮ ಮಾರ್ಗಗಳಲ್ಲಿ ಸಫಲವಾಗುವುದಿಲ್ಲ. ನೀವು ಯಾವಾಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ, ಸುಲಿಗೆಯನ್ನೂ ಅನುಭವಿಸುವವರಾಗುವಿರಿ.
30 ೩೦ ನೀವು ಮದುವೆಮಾಡಿಕೊಂಡ ಸ್ತ್ರೀಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿಕೊಂಡ ದ್ರಾಕ್ಷಿತೋಟದ ಬೆಳೆಯು ನಿಮಗೆ ದೊರೆಯುವುದಿಲ್ಲ.
ನೀವು ಮದುವೆಮಾಡಿಕೊಳ್ಳಲು ನಿಶ್ಚಯಿಸಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಗೊಳಿಸುವನು. ಮನೆಯನ್ನು ಕಟ್ಟಿದರೆ, ಅದರಲ್ಲಿ ವಾಸಮಾಡುವುದಿಲ್ಲ. ದ್ರಾಕ್ಷಿತೋಟವನ್ನು ನೆಟ್ಟರೆ, ಅದರ ಫಲ ನಿಮಗೆ ದೊರೆಯುವುದಿಲ್ಲ.
31 ೩೧ ನಿಮ್ಮ ದನಗಳನ್ನು ನಿಮ್ಮ ಕಣ್ಣು ಮುಂದೆ ಕೊಯ್ಯುವರು; ಅವುಗಳ ಮಾಂಸವು ನಿಮಗೆ ಸಿಕ್ಕುವುದಿಲ್ಲ. ನಿಮ್ಮ ಕತ್ತೆಯನ್ನು ನಿಮ್ಮ ಮುಂದೆಯೇ ಬಲಾತ್ಕಾರದಿಂದ ಹಿಡಿದುಕೊಂಡುಹೋಗುವರು. ಕೇಳಿದರೆ ನಿಮಗೆ ಹಿಂದಕ್ಕೆ ಕೊಡುವುದಿಲ್ಲ. ನಿಮ್ಮ ಆಡು ಮತ್ತು ಕುರಿಗಳು ಶತ್ರುಗಳ ಪಾಲಾಗುವವು. ನಿಮಗೆ ರಕ್ಷಕರು ಯಾರೂ ಇರುವುದಿಲ್ಲ.
ನಿಮ್ಮ ದನಗಳನ್ನು ನಿಮ್ಮ ಕಣ್ಣು ಮುಂದೆಯೇ ಕೊಯ್ಯುವರು, ಆದರೆ ನೀವು ಅದರ ಮಾಂಸ ತಿನ್ನುವುದಿಲ್ಲ. ನಿಮ್ಮ ಕತ್ತೆಯನ್ನು ನಿಮ್ಮ ಕಣ್ಣ ಮುಂದೆಯೇ ಬಲಾತ್ಕಾರದಿಂದ ತೆಗೆದುಕೊಂಡು ಹೋಗುವರು. ಅದು ನಿಮಗೆ ಮತ್ತೆ ಸಿಕ್ಕುವುದಿಲ್ಲ. ನಿಮ್ಮ ಕುರಿಗಳು ನಿಮ್ಮ ಶತ್ರುವಿಗೆ ಕೊಡಲಾಗುವುದು. ಅವುಗಳನ್ನು ಬಿಡಿಸುವುದಕ್ಕೆ ಯಾರೂ ಇರುವುದಿಲ್ಲ.
32 ೩೨ ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು ನಿಮ್ಮ ಮುಂದೆಯೇ ಹಿಡಿದು ಅನ್ಯರಿಗೆ ವಶಪಡಿಸುವರು; ನೀವು ಹಗಲೆಲ್ಲಾ ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಕಂಗೆಡುವಿರಿ; ಆದರೆ ನಿಮ್ಮ ಪ್ರಯತ್ನವೇನೂ ಸಾಗುವುದಿಲ್ಲ.
ನಿಮ್ಮ ಪುತ್ರಪುತ್ರಿಯರು ಬೇರೆ ಜನರಿಗೆ ವಶಪಡಿಸಿರಲು, ನೀವು ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಇರುವಿರಿ. ಆದರೆ ಅವರನ್ನು ಕಾಪಾಡಲು ನಿಮ್ಮ ಕೈಯಿಂದ ಸಾಧ್ಯವಾಗದೆ ಇರುವುದು.
33 ೩೩ ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ದೇಶದ ಬೆಳೆಯನ್ನೂ ಮತ್ತು ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ಯಾವಾಗಲೂ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗಿ,
ನಿಮ್ಮ ಭೂಮಿಯ ಫಲವನ್ನೂ, ನಿಮ್ಮ ಎಲ್ಲಾ ಆದಾಯವನ್ನೂ ನಿಮ್ಮನ್ನರಿಯದ ಜನರು ತಿಂದುಬಿಡುವರು. ನೀವು ಯಾವಾಗಲೂ ಬಲಾತ್ಕಾರವನ್ನೂ, ಸಂಕಟವನ್ನೂ ಅನುಭವಿಸುವಿರಿ.
34 ೩೪ ನಿಮ್ಮ ಮುಂದೆ ನಡೆಯುವ ಸಂಗತಿಗಳ ದೆಸೆಯಿಂದ ಹುಚ್ಚರಾಗಿ ಹೋಗುವಿರಿ.
ನಿಮ್ಮ ಕಣ್ಣಮುಂದೆ ನಡೆಯುವ ಘಟನೆಗಳನ್ನು ನೋಡಿ ಹುಚ್ಚರಾಗುವಿರಿ.
35 ೩೫ ಯೆಹೋವನು ನಿಮ್ಮ ಮೊಣಕಾಲುಗಳಲ್ಲಿಯೂ, ತೊಡೆಗಳಲ್ಲಿಯೂ ಮತ್ತು ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ವಾಸಿಯಾಗದ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಬಾಧಿಸುವನು.
ಯೆಹೋವ ದೇವರು ನಿಮ್ಮನ್ನು ಮೊಣಕಾಲುಗಳಲ್ಲಿಯೂ, ತೊಡೆಗಳಲ್ಲಿಯೂ ವಾಸಿಯಾಗದ ಕೆಟ್ಟ ಉರಿ ಹುಣ್ಣಿನಿಂದ ಅಂಗಾಲು ಮೊದಲ್ಗೊಂಡು ನೆತ್ತಿಯವರೆಗೆ ಹೊಡೆಯುವರು.
36 ೩೬ ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಜನಾಂಗದವರ ದೇಶಕ್ಕೆ ಯೆಹೋವನು ನಿಮ್ಮನ್ನೂ ಮತ್ತು ನೀವು ನೇಮಿಸಿಕೊಳ್ಳುವ ಅರಸರನ್ನೂ ಒಯ್ಯುವನು; ಅಲ್ಲಿ ನೀವು ಮರದ ದೇವರುಗಳನ್ನೂ ಮತ್ತು ಕಲ್ಲಿನ ದೇವರುಗಳನ್ನೂ ಸೇವಿಸುವಿರಿ.
ಯೆಹೋವ ದೇವರು ನಿಮ್ಮನ್ನೂ, ನೀವು ನಿಮ್ಮ ಮೇಲೆ ನೇಮಿಸಿಕೊಳ್ಳುವ ಅರಸನನ್ನೂ, ನೀವೂ, ನಿಮ್ಮ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗುವಂತೆ ಮಾಡುವರು. ಅಲ್ಲಿ ಮರವೂ, ಕಲ್ಲೂ ಆಗಿರುವ ಬೇರೆ ದೇವರುಗಳನ್ನೂ ನೀವು ಪೂಜಿಸುವಿರಿ.
37 ೩೭ ಯೆಹೋವನು ನಿಮ್ಮನ್ನು ನಡೆಸುವ ಜನಾಂಗಗಳಲ್ಲಿ ನೀವು ಭೀಕರತೆಗೂ, ಗಾದೆಗೂ ಮತ್ತು ಪರಿಹಾಸ್ಯಕ್ಕೂ ಗುರಿಯಾಗುವಿರಿ.
ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಚೆದರಿಸುವ ಎಲ್ಲಾ ಜನಾಂಗಗಳಲ್ಲಿ ನೀವು ವಿಸ್ಮಯಕ್ಕೂ, ಗಾದೆಗೂ, ಹಾಸ್ಯಕ್ಕೂ ಗುರಿಯಾಗುವಿರಿ.
38 ೩೮ ನೀವು ಹೊಲದಲ್ಲಿ ಎಷ್ಟು ಬೀಜವನ್ನು ಬಿತ್ತಿದ್ದರೂ ಮಿಡತೆಯ ದಂಡು ಬಂದು ಅದನ್ನು ತಿಂದು ಬಿಡುವುದರಿಂದ ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು.
ಬಹಳ ಬೀಜವನ್ನು ಹೊಲದಲ್ಲಿ ಬಿತ್ತಿದರೂ ಸ್ವಲ್ಪವೇ ಬೆಳೆ. ಏಕೆಂದರೆ ಮಿಡತೆ ಅದನ್ನು ತಿಂದುಬಿಡುವುದು;
39 ೩೯ ನೀವು ದ್ರಾಕ್ಷಿ ವ್ಯವಸಾಯವನ್ನು ಎಷ್ಟು ಮಾಡಿದರೂ ಅದರ ಹಣ್ಣುಗಳನ್ನು ಹುಳಗಳೇ ತಿಂದುಹಾಕುವುದರಿಂದ ನೀವು ಅದರ ಸಾರವನ್ನು ರುಚಿನೋಡಲು ಆಗುವುದಿಲ್ಲ.
ದ್ರಾಕ್ಷಿತೋಟವನ್ನು ನೆಟ್ಟು ಕಾಪಾಡುವಿರಿ, ಆದರೆ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಮತ್ತು ಹಣ್ಣು ಕೂಡಿಸುವುದಿಲ್ಲ, ಏಕೆಂದರೆ ಹುಳುಗಳು ಅದನ್ನು ತಿಂದುಬಿಡುವುವು;
40 ೪೦ ನಿಮ್ಮ ಎಲ್ಲಾ ಪ್ರದೇಶಗಳಲ್ಲಿ ಎಣ್ಣೇಮರಗಳು ಎಷ್ಟಿದ್ದರೂ ಅವುಗಳ ಕಾಯಿಗಳು ಉದುರಿಹೋಗುವುದರಿಂದ ನೀವು ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದಿಲ್ಲ.
ಓಲಿವ್ ಮರಗಳು ನಿಮ್ಮ ಎಲ್ಲಾ ಮೇರೆಗಳಲ್ಲಿ ಇರುವುವು. ಆದರೆ ಅವುಗಳ ಕಾಯಿಗಳು ಉದುರುವುದರಿಂದ ನಿಮ್ಮ ಉಪಯೋಗಕ್ಕೆ ಎಣ್ಣೆ ಸಿಗದು.
41 ೪೧ ನಿಮಗೆ ಗಂಡು ಮತ್ತು ಹೆಣ್ಣು ಮಕ್ಕಳು ಎಷ್ಟು ಹುಟ್ಟಿದರೂ ಅವರು ಸೆರೆಯವರಾಗಿ ಒಯ್ಯಲ್ಪಡುವುದರಿಂದ ನಿಮ್ಮ ಬಳಿಯಲ್ಲಿ ಇರುವುದಿಲ್ಲ.
ನೀವು ಪುತ್ರಪುತ್ರಿಯರನ್ನು ಪಡೆಯುವಿರಿ, ಆದರೆ ಅವರ ಕೂಡ ಸಂತೋಷಿಸುವುದಿಲ್ಲ. ಏಕೆಂದರೆ ಅವರು ಸೆರೆಯಾಗಿ ಹೋಗುವರು.
42 ೪೨ ನಿಮ್ಮ ಎಲ್ಲಾ ಮರಗಳೂ ಮತ್ತು ಪೈರುಗಳೂ ಮಿಡತೆಯ ಪಾಲಾಗುವವು.
ನಿಮ್ಮ ಎಲ್ಲಾ ಮರಗಳನ್ನೂ, ನಿಮ್ಮ ಹೊಲದ ಪೈರನ್ನೂ ಮಿಡತೆ ತಿಂದುಬಿಡುವುದು.
43 ೪೩ ನಿಮ್ಮ ಮಧ್ಯದಲ್ಲಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಿಮೆಯಾಗುತ್ತಾ ಹೀನಸ್ಥಿತಿಗೆ ಬರುವಿರಿ.
ನಿಮ್ಮ ಮಧ್ಯದಲ್ಲಿರುವ ಪರದೇಶದವರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗುವರು. ನೀವಾದರೋ ಕಡಿಮೆಯಾಗುತ್ತಾ ಹೀನಸ್ಥಿತಿಗೆ ಬರುವಿರಿ.
44 ೪೪ ಅವರು ನಿಮಗೆ ಸಾಲಕೊಡುವರೇ ಹೊರತು ನೀವು ಅವರಿಗೆ ಸಾಲ ಕೊಡುವುದಿಲ್ಲ. ನೀವು ಅವರಿಗೆ ಅಧೀನರಾಗುವಿರಿ; ಅವರು ನಿಮಗೆ ಶಿರಸ್ಸಾಗುವರು.
ಅವರು ನಿಮಗೆ ಸಾಲ ಕೊಡುವರು ಆದರೆ ನೀವು ಅವರಿಗೆ ಸಾಲಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅವರು ನಿಮಗೆ ಶಿರಸ್ಸಾಗುವರು ಆದರೆ ನೀವು ಅವರಿಗೆ ಅಧೀನರಾಗುವಿರಿ.
45 ೪೫ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡದೆಯೂ, ಆತನು ನೇಮಿಸಿದ ಆಜ್ಞಾವಿಧಿಗಳನ್ನು ಅನುಸರಿಸದೆಯೂ ಹೋದುದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ ನಿಮ್ಮನ್ನು ಹಿಂದಟ್ಟಿ ಹಿಡಿದು ಕಡೆಗೆ ನಾಶಮಾಡುವವು.
ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಕೇಳದೆ ಅವರು ನಿಮಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ನಿಯಮಗಳನ್ನೂ ಕೈಗೊಳ್ಳದೆ ಇದ್ದುದರಿಂದ, ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬಂದು, ನಿಮ್ಮನ್ನು ನಾಶಮಾಡುವವರೆಗೂ ನಿಮ್ಮನ್ನು ಹಿಂದಟ್ಟುವುವು.
46 ೪೬ ಇವು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಯಾವಾಗಲೂ ಪ್ರಾಪ್ತವಾಗುತ್ತಾ ಎಲ್ಲರಿಗೂ ಎಚ್ಚರಿಕೆಯನ್ನೂ ಮತ್ತು ಬೆರಗನ್ನೂ ಉಂಟುಮಾಡುವವು.
ಅವು ನಿಮ್ಮ ಮೇಲೂ ನಿಮ್ಮ ಸಂತತಿಯ ಮೇಲೂ ಯಾವಾಗಲೂ ಗುರುತೂ ಅದ್ಭುತವೂ ಆಗಿರುವುವು.
47 ೪೭ ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿಯೂ ನೀವು ನಿಮ್ಮ ದೇವರಾದ ಯೆಹೋವನನ್ನು ಹರ್ಷಾನಂದಗಳುಳ್ಳವರಾಗಿ ಸೇವಿಸದೆ ಹೋದುದರಿಂದ,
ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸಂತೋಷದಿಂದಲೂ ಹರ್ಷದಿಂದಲೂ ಸೇವೆಮಾಡದೆ ಹೋದಿರಿ.
48 ೪೮ ಯೆಹೋವನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವನು; ಆಗ ನೀವು ಹಸಿವೆ, ಬಾಯಾರಿಕೆಗಳುಳ್ಳವರಾಗಿ, ಬಟ್ಟೆಯೂ ಮತ್ತು ಏನೂ ಇಲ್ಲದವರಾಗಿ ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಯೆಹೋವನು ಕಬ್ಬಿಣದ ನೊಗವನ್ನು ಹೇರಿಸಿ ನಿಮ್ಮನ್ನು ನಾಶಮಾಡುವನು.
ಆದುದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬಡತನದಲ್ಲಿ ಬಟ್ಟೆಬರೆ ಏನೂ ಇಲ್ಲದೆ, ಯೆಹೋವ ದೇವರು ನಿಮ್ಮ ಮೇಲೆ ಕಳುಹಿಸುವ ಆ ಶತ್ರುಗಳಿಗೇ ನೀವು ಸೇವಕರಾಗಬೇಕಾಗುವುದು. ಯೆಹೋವ ದೇವರು ನಿಮ್ಮನ್ನು ನಾಶಮಾಡುವವರೆಗೆ ಕಬ್ಬಿಣದ ನೊಗವನ್ನು ನಿಮ್ಮ ಮೇಲೆ ಹೊರಿಸುವರು.
49 ೪೯ ರಣಹದ್ದು ಹೇಗೆ ದೂರದಿಂದ ಹಾರಿಬರುವುದೋ ಹಾಗೆಯೇ ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವು ನಿಮ್ಮ ಮೇಲೆ ಬರುವಂತೆ ಯೆಹೋವನು ಮಾಡುವನು.
ಯೆಹೋವ ದೇವರು ದೂರದಿಂದ ಅಂದರೆ, ಭೂಮಿಯ ಕೊನೆಯಿಂದ ರಣಹದ್ದು ಹೇಗೆ ಹಾರಿಬರುವುದೋ ಹಾಗೆಯೇ, ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವನ್ನು ನಿಮ್ಮ ಮೇಲೆ ಬರುವಂತೆ ಮಾಡುವರು.
50 ೫೦ ಆ ಜನಾಂಗದವರು ಕ್ರೂರಮುಖವುಳ್ಳವರಾಗಿ ನಿಮ್ಮನ್ನು ವೃದ್ಧರೆಂದು ಮರ್ಯಾದೆ ತೋರಿಸುವುದಿಲ್ಲ ಮತ್ತು ಚಿಕ್ಕವರೆಂದು ಕನಿಕರಿಸುವುದಿಲ್ಲ.
ಆ ಜನಾಂಗದವರು ಕ್ರೂರಮುಖವುಳ್ಳವರು. ನಿಮ್ಮನ್ನು ವೃದ್ಧರೆಂದು ಮರ್ಯಾದೆ ತೋರಿಸುವದಿಲ್ಲ, ಚಿಕ್ಕವರೆಂದು ದಯೆಯೂ ತೋರಿಸುವುದಿಲ್ಲ.
51 ೫೧ ಅವರು ನಿಮ್ಮ ದನಗಳನ್ನೂ ಮತ್ತು ಬೆಳೆಗಳನ್ನೂ ತಿಂದುಬಿಟ್ಟು ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನ ಮತ್ತು ಕುರಿಗಳ ಸಂತಾನವನ್ನಾಗಲಿ ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.
ಅವರು ನಿಮ್ಮ ಪಶುಗಳ ಫಲವನ್ನೂ ನಿಮ್ಮ ಭೂಮಿಯ ಫಲವನ್ನೂ ನೀವು ನಾಶವಾಗುವವರೆಗೆ ತಿಂದುಬಿಡುವರು. ಅವರು ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಓಲಿವ್ ಎಣ್ಣೆಯನ್ನೂ, ಪಶುಗಳ ಅಭಿವೃದ್ಧಿಯನ್ನೂ, ಕುರಿಗಳ ಮಂದೆಗಳನ್ನೂ ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.
52 ೫೨ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ದೇಶದ ಎಲ್ಲಾ ಪಟ್ಟಣಗಳಿಗೂ ಅವರು ಮುತ್ತಿಗೆಹಾಕಿ, ನೀವು ನಂಬಿಕೊಂಡಿದ್ದ ಎತ್ತರವಾದ ಕೊತ್ತಲುಗಳುಳ್ಳ ಗೋಡೆಗಳನ್ನು ಕೆಡವಿಬಿಡುವರು.
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ನಿಮ್ಮ ದೇಶದಲ್ಲೆಲ್ಲಾ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ಮುತ್ತಿಗೆ ಹಾಕುವರು. ನೀವು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿಮ್ಮ ಗೋಡೆಗಳನ್ನು ಕೆಡವಿಬಿಡುವರು.
53 ೫೩ ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವುದರಿಂದ ನೀವು ನಿಮ್ಮ ಸಂತಾನವನ್ನೇ ಅಂದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಗಂಡು ಮತ್ತು ಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.
ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವುದರಿಂದ ನೀವು ನಿಮ್ಮ ಗರ್ಭದ ಫಲವನ್ನು ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.
54 ೫೪ ನಿಮ್ಮಲ್ಲಿ ಮೃದುಸ್ವಭಾವಿಯೂ ಮತ್ತು ಸೂಕ್ಷ್ಮಗುಣವುಳ್ಳವನು ಆಗಿರುವ ಸಹೋದರನು ಆಹಾರಕ್ಕಾಗಿ ತನ್ನ ಸಹೋದರ, ಪ್ರೀತಿಯ ಹೆಂಡತಿ ಮತ್ತು ತನ್ನ ಮಕ್ಕಳನ್ನು ದ್ವೇಷಿಸುವನು.
ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಸಹ ತನ್ನ ಸ್ವಂತ ಸಹೋದರ ಅಥವಾ ಅವನು ಪ್ರೀತಿಸುವ ಹೆಂಡತಿ ಅಥವಾ ಉಳಿದಿರುವ ಮಕ್ಕಳ ಮೇಲೆ ಅನುಕಂಪ ತೋರಿಸುವುದಿಲ್ಲ.
55 ೫೫ ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆಹಾಕಿ, ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಾಲದಲ್ಲಿ ತನಗೆ ತಿನ್ನಲಿಕ್ಕೆ ಏನೂ ಉಳಿಯದೆ ಹೋಗುವುದರಿಂದ ಅವನು ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು ಅಣ್ಣತಮ್ಮಂದಿರಿಗೂ, ಪ್ರಾಣಪ್ರಿಯಳಾದ ಹೆಂಡತಿಗೂ ಮತ್ತು ಉಳಿದ ಮಕ್ಕಳಿಗೂ ಕೋಪಗೊಂಡವನಂತೆ ನಟಿಸುತ್ತಾ ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.
ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆ ಹಾಕಿ, ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಾಲದಲ್ಲಿ ಅವನು ತನಗೆ ತಿನ್ನಲಿಕ್ಕೆ ಏನೂ ಸಿಗುವುದಿಲ್ಲ ಅಂದುಕೊಂಡು, ತನ್ನ ಮಕ್ಕಳ ಮಾಂಸವನ್ನು ಇತರರಿಗೆ ಕೊಡದೆ ತಿನ್ನುವನು.
56 ೫೬ ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ, ನಿಮ್ಮನ್ನು ಬಹಳವಾಗಿ ಹಿಂಸಿಸುವ ಕಾಲದಲ್ಲಿ ಕೋಮಲತೆಯ ಮತ್ತು ಅತಿಸೂಕ್ಷ್ಮತೆಯ ದೆಸೆಯಿಂದ ಅಂಗಾಲನ್ನೂ ನೆಲಕ್ಕೆ ಇಡದವಳಾದ ಸ್ತ್ರೀಯು ತಿನ್ನಲಿಕ್ಕೆ ಏನೂ ಇಲ್ಲದವಳಾಗಿ, ನರಳುವಾಗ
ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವಳೂ, ಬಹಳ ಸೂಕ್ಷ್ಮ ಗುಣವುಳ್ಳವಳೂ, ನೆಲಕ್ಕೆ ಅಂಗಾಲನ್ನು ಸಹ ಇಡದ ಮಹಿಳೆಯು, ತನ್ನ ಮಗ್ಗುಲಲ್ಲಿರುವ ಗಂಡನ ಕಡೆಗೂ ಹೆತ್ತ ಪುತ್ರಪುತ್ರಿಯರ ಕಡೆಗೂ ಕಠಿಣವಾಗಿರುವಳು.
57 ೫೭ ತಾನು ಆಗಲೇ ಹೆತ್ತ ಮಗುವಿನ ಮಾಂಸವನ್ನೂ ರಹಸ್ಯವಾಗಿ ತಿನ್ನಬೇಕೆಂದು ಯೋಚಿಸಿ, ಪ್ರಾಣಪ್ರಿಯನಾದ ಗಂಡನಿಗೂ, ಮಕ್ಕಳಿಗೂ ತಿಳಿಯದಂತೆ ಆ ಕಾರ್ಯವನ್ನು ಮಾಡುವಳು.
ಅವಳು ಕೊರತೆಯಲ್ಲಿಯೂ, ಮುತ್ತಿಗೆಯಲ್ಲಿಯೂ, ಶತ್ರು ನಿಮಗೆ ನಿಮ್ಮ ಪಟ್ಟಣಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ, ತನ್ನ ಮಕ್ಕಳನ್ನು ಗುಪ್ತವಾಗಿ ತಿಂದುಬಿಡುವಳು.
58 ೫೮ ಈ ಗ್ರಂಥದಲ್ಲಿ ಬರೆದಿರುವ ಧರ್ಮಶಾಸ್ತ್ರವಾಕ್ಯಗಳನ್ನೆಲ್ಲಾ ನೀವು ಅನುಸರಿಸದೆ ನಿಮ್ಮ ದೇವರಾದ ಯೆಹೋವನೆಂಬ ಮಹಾಮಹಿಮೆಯುಳ್ಳ ಅದ್ಭುತ ನಾಮದಲ್ಲಿ ನೀವು ಭಯಭಕ್ತಿಯುಳ್ಳವರಾಗಿ ನಡೆಯದೆ ಹೋದರೆ,
ನಿಮ್ಮ ದೇವರಾದ ಯೆಹೋವ ದೇವರೆಂಬ ಈ ಘನವುಳ್ಳ ಹೆಸರಿಗೆ ನೀವು ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನಿಯಮದ ಮಾತುಗಳನ್ನು ಅಲಕ್ಷಿಸಿ, ತಪ್ಪು ದಾರಿ ಹಿಡಿದರೆ,
59 ೫೯ ಆತನು ನಿಮಗೂ, ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವನು. ಬಹುಕಾಲದವರೆಗೂ ವಾಸಿಯಾಗದ ಘೋರ ವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವನು.
ಯೆಹೋವ ದೇವರು ನಿಮಗೂ ನಿಮ್ಮ ಸಂತತಿಗೂ ಭಯಂಕರವಾದ ಉಪದ್ರವಗಳನ್ನು ಬರಮಾಡುವರು; ಅವು ಕಠಿಣವಾದ ಮತ್ತು ದೀರ್ಘಕಾಲದ ಬಾಧೆಗಳೂ ಘೋರವಾದ ಮತ್ತು ಗಂಭೀರವಾದ ರೋಗಗಳಾಗಿರುವವು.
60 ೬೦ ನೀವು ಹೆದರಿಕೊಳ್ಳುತ್ತಿದ್ದ ಐಗುಪ್ತದೇಶದ ರೋಗಗಳನ್ನೆಲ್ಲಾ ತಿರುಗಿ ನಿಮ್ಮ ಮೇಲೆ ಬರಮಾಡುವನು; ಅವು ನಿಮ್ಮನ್ನು ಅಂಟಿಕೊಂಡೇ ಇರುವವು.
ಇದಲ್ಲದೆ ನೀವು ಹೆದರಿಕೊಳ್ಳುತ್ತಿದ್ದ ಈಜಿಪ್ಟಿನ ರೋಗಗಳನ್ನೆಲ್ಲಾ ದೇವರು ತಿರುಗಿ ನಿಮ್ಮ ಮೇಲೆ ಬರಮಾಡುವರು; ಅವು ನಿಮ್ಮನ್ನು ಅಂಟಿಕೊಳ್ಳುವವು.
61 ೬೧ ಇಷ್ಟು ಮಾತ್ರವಲ್ಲದೆ ಈ ಧರ್ಮಶಾಸ್ತ್ರಗ್ರಂಥದಲ್ಲಿ ಬರೆಯದೆ ಇರುವ ವಿಧವಿಧವಾದ ರೋಗಗಳನ್ನೂ ಮತ್ತು ವ್ಯಾಧಿಗಳನ್ನೂ ನಿಮ್ಮ ಮೇಲೆ ಬರಮಾಡಿ ನಿಮ್ಮನ್ನು ನಾಶಮಾಡುವನು.
ಈ ನಿಯಮದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ನೀವು ಪೂರ್ಣ ನಾಶವಾಗುವವರೆಗೆ ಯೆಹೋವ ದೇವರು ನಿಮ್ಮ ಮೇಲೆ ತರುವರು.
62 ೬೨ ನಕ್ಷತ್ರಗಳಷ್ಟು ಅಸಂಖ್ಯರಾಗಿರುವ ನೀವು ನಿಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಡದೆ ಹೋಗುವುದರಿಂದ ಸ್ವಲ್ಪ ಜನರಾಗಿಯೇ ಉಳಿಯುವಿರಿ.
ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೇ ಹೋದದ್ದರಿಂದ, ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯಾತರಾಗಿರುವ ನೀವು ಸ್ವಲ್ಪ ಮಂದಿಯಾಗಿ ಉಳಿಯುವಿರಿ.
63 ೬೩ ಹೇಗೆ ಯೆಹೋವನು ಈಗ ನಿಮ್ಮನ್ನು ಅಭಿವೃದ್ಧಿಪಡಿಸುವುದರಲ್ಲಿಯೂ, ಹೆಚ್ಚಿಸುವುದರಲ್ಲಿಯೂ ಸಂತೋಷಪಡುತ್ತಾನೋ ಹಾಗೆಯೇ ಆಗ ನಿಮ್ಮನ್ನು ಕೆಡಿಸಿ ನಾಶಮಾಡುವುದರಲ್ಲಿ ಸಂತೋಷಪಟ್ಟು, ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದೊಳಗಿಂದ ನಿಮ್ಮನ್ನು ಕಿತ್ತುಹಾಕುವನು.
ಯೆಹೋವ ದೇವರು ಹೇಗೆ ನಿಮಗೆ ಸಮೃದ್ಧಿಯನ್ನು ಕೊಡುವುದಕ್ಕೂ ನಿಮ್ಮನ್ನು ಹೆಚ್ಚಿಸುವುದಕ್ಕೂ ನಿಮಗೋಸ್ಕರ ಸಂತೋಷಿಸಿದರೋ, ಹಾಗೆಯೇ ಯೆಹೋವ ದೇವರು ನಿಮ್ಮನ್ನು ಕೆಡಿಸಿ, ನಾಶಮಾಡುವುದಕ್ಕೂ ನಿಮಗೆ ವಿರೋಧವಾಗಿ ಸಂತೋಷಿಸುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಿಂದಲೂ ನಿಮ್ಮನ್ನು ಕಿತ್ತುಹಾಕುವರು.
64 ೬೪ ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲಾ ಜನಾಂಗಗಳಲ್ಲಿಯೂ ಯೆಹೋವನು ನಿಮ್ಮನ್ನು ಚದರಿಸುವನು. ಅಲ್ಲಿ ನಿಮಗಾಗಲಿ ಅಥವಾ ನಿಮ್ಮ ಪೂರ್ವಿಕರಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.
ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯವರೆಗೂ ಎಲ್ಲಾ ಜನಾಂಗಗಳಲ್ಲಿ ಚದರಿಸುವರು. ಅಲ್ಲಿ ನೀವೂ ನಿಮ್ಮ ಪಿತೃಗಳು ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಆರಾಧಿಸುವಿರಿ.
65 ೬೫ ಆ ದೇಶಗಳಲ್ಲಿ ನಿಮಗೆ ಯಾವ ವಿಶ್ರಾಂತಿಯೂ ದೊರೆಯುವುದಿಲ್ಲ; ಸ್ವಲ್ಪ ಹೊತ್ತು ಅಂಗಾಲಿಡುವುದಕ್ಕೂ ನಿಮಗೆ ಸ್ಥಳಸಿಕ್ಕುವುದಿಲ್ಲ. ನೀವು ನಡುಗುವ ಹೃದಯವುಳ್ಳವರಾಗಿಯೂ, ದಿಕ್ಕುತೋರದೆ ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಂತೆ ಯೆಹೋವನು ಮಾಡುವನು.
ಆ ಜನಾಂಗಗಳಲ್ಲಿ ನಿಮಗೆ ವಿಶ್ರಾಂತಿ ದೊರೆಯುವುದಿಲ್ಲ. ಸ್ವಲ್ಪ ಹೊತ್ತು ಅಂಗಾಲಿಡುವುದಕ್ಕೂ ನಿಮಗೆ ಸ್ಥಳಸಿಕ್ಕುವುದಿಲ್ಲ. ಅಲ್ಲಿ ಯೆಹೋವ ದೇವರು ನಿಮಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಂದುವ ಪ್ರಾಣವನ್ನೂ ಕೊಡುವರು.
66 ೬೬ ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ಹಗಲಿರುಳು ಪ್ರಾಣಭಯದಲ್ಲಿರುವಿರಿ; ಪ್ರಾಣದ ಮೇಲಣ ನಂಬಿಕೆಯನ್ನು ಬಿಟ್ಟೇಬಿಡುವಿರಿ.
ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ರಾತ್ರಿ ಹಗಲು ಜೀವದ ಮೇಲೆ ನಂಬಿಕೆ ಇಲ್ಲದೆ ಹೆದರಿಕೊಳ್ಳುವಿರಿ.
67 ೬೭ ಮನಸ್ಸಿನಲ್ಲಿ ಯಾವಾಗಲೂ ಪ್ರಾಣಭಯವಿರುವುದರಿಂದಲೂ ಕಣ್ಣಿನಿಂದ ಭಯಂಕರವಾದ ಸಂಗತಿಗಳನ್ನು ನೋಡುವುದರಿಂದಲೂ ನೀವು ಹೊತ್ತಾರೆಯಲ್ಲಿ, “ಅಯ್ಯೋ, ಅಯ್ಯೋ ಸಾಯಂಕಾಲ ಯಾವಾಗ ಬರುವುದೋ” ಎಂದೂ, ಸಾಯಂಕಾಲದಲ್ಲಿ, “ಅಯ್ಯೋ, ಅಯ್ಯೋ! ಬೆಳಿಗ್ಗೆ ಯಾವಾಗ ಬರುವುದೋ” ಎಂದು ಕೊರಗುವಿರಿ.
ನಿಮ್ಮ ಹೃದಯದಲ್ಲಿನ ಪ್ರಾಣಭೀತಿ, ಹೆದರಿಕೆಯ ನಿಮಿತ್ತವೂ ನಿಮ್ಮ ಕಣ್ಣುಗಳು ನೋಡುವ ಭಯಂಕರ ನೋಟದಿಂದ ನೀವು ಮುಂಜಾನೆಯಲ್ಲಿ, “ಸಂಜೆ ಆಗಬೇಕು,” ಎನ್ನುವಿರಿ. ಸಂಜೆಯಲ್ಲಿ, “ಮುಂಜಾನೆ ಆಗಬೇಕು,” ಎನ್ನುವಿರಿ.
68 ೬೮ ನೀವು ಐಗುಪ್ತದೇಶವನ್ನು ತಿರುಗಿ ಎಂದಿಗೂ ನೋಡುವುದಿಲ್ಲವೆಂದು ಯೆಹೋವನು ಹೇಳಿದ್ದರೂ ಆತನು ನಿಮ್ಮನ್ನು ಹಡಗುಗಳನ್ನೇರಿಸಿ ಅಲ್ಲಿಗೆ ತಿರುಗಿ ಹೋಗ ಮಾಡುವನು. ಅಲ್ಲಿ ನೀವು ಶತ್ರುಗಳಿಗೆ ನಿಮ್ಮನ್ನು ದಾಸದಾಸಿಯರನ್ನಾಗಿ ಮಾರಿಕೊಳ್ಳಬೇಕೆಂದು ಅಪೇಕ್ಷಿಸಿದರೂ ಯಾರೂ ನಿಮ್ಮನ್ನು ಕೊಂಡುಕೊಳ್ಳುವುದಿಲ್ಲ.
ಇದಲ್ಲದೆ, ಯೆಹೋವ ದೇವರು, ನೀವು ಇನ್ನು ಮೇಲೆ ನೋಡುವುದಿಲ್ಲ ಎಂದು ಹೇಳಿದ ದಾರಿಯಲ್ಲಿಯೇ ಹಡಗುಗಳಲ್ಲಿ ಜನರು ನಿಮ್ಮನ್ನು ಈಜಿಪ್ಟಿಗೆ ತಿರುಗಿ ಬರಮಾಡುವರು. ನಿಮ್ಮನ್ನು ಅಲ್ಲಿ ದಾಸರಾಗಿಯೂ ದಾಸಿಯರಾಗಿಯೂ ನಿಮ್ಮ ಶತ್ರುಗಳಿಗೆ ಮಾರಿಕೊಳ್ಳಬೇಕೆಂದಿದ್ದರೂ, ಕೊಂಡುಕೊಳ್ಳುವವರು ಇರುವುದಿಲ್ಲ.

< ಧರ್ಮೋಪದೇಶಕಾಂಡ 28 >