< ರೋಮಾಪುರದವರಿಗೆ 5 >

1 ಹೀಗಿರುವುದರಿಂದ, ವಿಶ್ವಾಸದ ಮೂಲಕ ನೀತಿವಂತರೆಂಬ ನಿರ್ಣಯ ಹೊಂದಿದ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿರುತ್ತದೆ. 2 ಯೇಸುವಿನ ಮೂಲಕವೇ ನಾವು ಈಗ ಈ ಕೃಪೆಯಲ್ಲಿ ವಿಶ್ವಾಸದಿಂದ ಪ್ರವೇಶಮಾಡಿದ್ದೇವೆ. ಈ ಕೃಪೆಯಲ್ಲಿಯೇ ಈಗ ನಿಂತಿದ್ದೇವೆ. ನಾವು ದೇವರ ಮಹಿಮೆಯಲ್ಲಿ ಪಾಲುಗೊಳ್ಳುತ್ತೆವೆಂಬ ನಿರೀಕ್ಷೆಯಲ್ಲಿ ಆನಂದಪಡುತ್ತೇವೆ. 3 ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ 4 ತಾಳ್ಮೆಯು ಸದ್ಗುಣವನ್ನೂ ಸದ್ಗುಣವು ನಿರೀಕ್ಷೆಯನ್ನೂ ಉಂಟು ಮಾಡುತ್ತದೆಂದು ಬಲ್ಲೆವು. 5 ಈ ನಿರೀಕ್ಷೆಯು ನಮ್ಮನ್ನು ನಿರಾಶೆ ಪಡಿಸುವುದಿಲ್ಲ. ಏಕೆಂದರೆ ದೇವರು ನಮಗೆ ಅನುಗ್ರಹಿಸಿರುವ ಪವಿತ್ರಾತ್ಮ ಮೂಲಕ ನಮ್ಮ ಹೃದಯಗಳಲ್ಲಿ ತಮ್ಮ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾರೆ. 6 ನಾವು ಇನ್ನೂ ಬಲಹೀನರಾಗಿದ್ದಾಗಲೇ, ಸೂಕ್ತ ಸಮಯದಲ್ಲಿ ಕ್ರಿಸ್ತ ಯೇಸು ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟರು. 7 ನೀತಿವಂತನಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ಒಬ್ಬ ಸತ್ಪುರುಷನಿಗಾಗಿ ಯಾರಾದರೂ ಪ್ರಾಣಕೊಡುವುದಕ್ಕೆ ಧೈರ್ಯ ಮಾಡಬಹುದು. 8 ಆದರೆ ಕ್ರಿಸ್ತ ಯೇಸು ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. 9 ಈಗ ನಾವು ಕ್ರಿಸ್ತ ಯೇಸುವಿನ ರಕ್ತದಿಂದ ನೀತಿವಂತರೆಂದು ನಿರ್ಣಯ ಹೊಂದಿರುವುದರಿಂದ, ಕ್ರಿಸ್ತ ಯೇಸುವಿನ ಮೂಲಕವಾಗಿಯೇ ದೇವರ ಕೋಪದಿಂದ ರಕ್ಷಿಸಲಾಗುವುದು ಇನ್ನೂ ಖಂಡಿತವಲ್ಲವೆ? 10 ನಾವು ದೇವರ ಶತ್ರುಗಳಾಗಿದ್ದಾಗಲೇ ಅವರು ನಮ್ಮನ್ನು ತಮ್ಮ ಪುತ್ರನ ಮರಣದ ಮೂಲಕ ಸಂಧಾನ ಮಾಡಿಕೊಂಡಿರುವುದಾದರೆ, ಕ್ರಿಸ್ತ ಯೇಸುವಿನ ಜೀವದ ಮೂಲಕ ಎಷ್ಟೋ ಹೆಚ್ಚಾಗಿ ನಾವು ರಕ್ಷಿಸುವುದು ಇನ್ನೂ ಖಚಿತವಲ್ಲವೆ? 11 ಇಷ್ಟು ಮಾತ್ರವೇ ಅಲ್ಲ, ಈಗ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಾವು ದೇವರೊಂದಿಗೆ ಮಿತ್ರರಾಗಿ, ಯೇಸುವಿನ ಮೂಲಕವೇ ದೇವರಲ್ಲಿ ಉಲ್ಲಾಸ ಪಡುತ್ತೇವೆ. 12 ಆದ್ದರಿಂದ, ಒಬ್ಬ ಮನುಷ್ಯನ ಮೂಲಕ ಪಾಪವೂ ಪಾಪದ ಮೂಲಕ ಮರಣವೂ ಲೋಕದೊಳಗೆ ಪ್ರವೇಶಿಸಿದ ಹಾಗೆಯೇ ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು. 13 ನಿಯಮವು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿ ಇತ್ತು. ಆದರೆ ನಿಯಮವು ಇಲ್ಲದಿದ್ದಾಗ ಪಾಪವು ಲೆಕ್ಕಕ್ಕೆ ಬರುವುದಿಲ್ಲ. 14 ಆದರೂ ಮರಣವು ಆದಾಮನಿಂದ ಮೋಶೆಯವರೆಗೂ ದೊರೆತನ ಮಾಡುತ್ತಿತ್ತು. ಆದಾಮನು ಮಾಡಿದ ಅಪರಾಧಕ್ಕೆ ಸಮಾನವಾಗಿ ಪಾಪಮಾಡಿದವರ ಮೇಲೆಯೂ ಅದು ದೊರೆತನ ಮಾಡುತ್ತಿತ್ತು. ಆದಾಮನು ಮುಂದೆ ಬರಲಿಕ್ಕಿದ್ದ ಒಬ್ಬಾತನಿಗೆ ಸಂಕೇತವಾಗಿದ್ದಾನೆ. 15 ಆದರೆ ಆ ಅಪರಾಧಕ್ಕೂ ದೇವರ ವರಕ್ಕೂ ಬಹಳ ವ್ಯತ್ಯಾಸವಿದೆ. ಹೇಗೆಂದರೆ, ಆದಾಮನ ಅಪರಾಧದಿಂದ ಎಲ್ಲ ಮನುಷ್ಯರೂ ಸತ್ತರು. ಕ್ರಿಸ್ತ ಯೇಸುವೆಂಬ ಈ ಒಬ್ಬ ಮನುಷ್ಯನ ಕೃಪೆಯಿಂದ ಸಿಕ್ಕುವ ದೇವರ ಕೃಪೆಯ ವರವು ಅನೇಕರಿಗೆ ಇನ್ನೂ ಹೆಚ್ಚಾಗಿ ಸಿಕ್ಕುವುದು ನಿಶ್ಚಯವಲ್ಲವೇ? 16 ಇದಲ್ಲದೆ ಪಾಪಮಾಡಿದ ಒಬ್ಬನಿಂದಲೇ ದುಷ್ಪಲ ಬಂದಂತೆ ಈ ವರವು ಬರಲಿಲ್ಲ. ಹೇಗೆಂದರೆ, ಒಬ್ಬನೇ ಮನುಷ್ಯನ ಪಾಪದ ದೆಸೆಯಿಂದ ಸಾಯಬೇಕೆಂಬ ದಂಡನಾತೀರ್ಪು ಉಂಟಾಯಿತು. ಆದರೆ ದೇವರ ಕೃಪೆಯು ಅನೇಕರ ಅಪರಾಧಗಳಿಂದ ಅವರನ್ನು ನೀತಿವಂತರೆಂದು ನಿರ್ಣಯಿಸುವುದಾಗಿದೆ. 17 ಒಬ್ಬ ಮನುಷ್ಯನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ಮುಖಾಂತರ ಮರಣವು ಆಳುವುದಾದರೆ, ದೇವರ ಧಾರಾಳವಾದ ಕೃಪೆಯನ್ನೂ ನೀತಿಯ ವರವನ್ನೂ ಹೊಂದಿದವರಾಗಿ ಕ್ರಿಸ್ತ ಯೇಸುವೆಂಬ ಒಬ್ಬಾತನ ಮೂಲಕ ಜೀವದಲ್ಲಿ ಆಳುವುದು ಇನ್ನೂ ಹೆಚ್ಚಾದದ್ದಲ್ಲವೆ! 18 ಹೀಗೆ, ಒಂದು ಅಪರಾಧದ ನಿಮಿತ್ತ ಎಲ್ಲಾ ಜನರ ಮೇಲೆ ದಂಡನಾತೀರ್ಪು ಬಂದಂತೆಯೇ ಒಂದು ನೀತಿಯ ಕೃತ್ಯದಿಂದ ಎಲ್ಲಾ ಜನರಿಗೂ ಜೀವವನ್ನುಂಟು ಮಾಡುವ ನೀತಿಕರಣವು ಉಂಟಾಯಿತು. 19 ಒಬ್ಬ ಮನುಷ್ಯನ ಅವಿಧೇಯತೆಯಿಂದಾಗಿ ಅನೇಕರು, ಪಾಪಿಗಳು ಆದಂತೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದಾಗಿ ಅನೇಕರು ನೀತಿವಂತರಾಗುವರು. 20 ಅಪರಾಧವು ಹೆಚ್ಚುವಂತೆ ನಿಯಮವು ಪ್ರವೇಶಿಸಿತು. ಆದರೆ ಪಾಪವು ಹೆಚ್ಚಾದಾಗ, ಕೃಪೆಯು ಇನ್ನೂ ಹೆಚ್ಚಾಯಿತು. 21 ಹೀಗೆ ಪಾಪವು ಮರಣದ ಮೂಲಕ ಆಳಿದಂತೆಯೇ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಿತ್ಯಜೀವವನ್ನುಂಟು ಮಾಡಲು ಕೃಪೆಯು ನೀತಿಯ ಮೂಲಕ ಆಳುವುದು. (aiōnios g166)

< ರೋಮಾಪುರದವರಿಗೆ 5 >