< ಪ್ರಕಟಣೆ 6 >

1 ಏಳು ಮುದ್ರೆಗಳಲ್ಲಿ ಒಂದನ್ನು ಯಜ್ಞದ ಕುರಿಮರಿ ಆಗಿರುವವರು ತೆರೆಯುವುದನ್ನು ನಾನು ಕಂಡೆನು. ಆ ಜೀವಿಗಳಲ್ಲೊಂದು ಗುಡುಗಿನಂತಿದ್ದ ಶಬ್ದದಲ್ಲಿ, “ಬಾ!” ಎಂದು ಹೇಳುವುದನ್ನು ಕೇಳಿದೆನು. 2 ನಾನು ನೋಡಲು, ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಸವಾರಿ ಮಾಡುವವನು ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲಾಗಿತ್ತು. ಅವನು ಜಯಿಸುವವನಾಗಿ ಜಯಿಸುವುದಕ್ಕೊಸ್ಕರ ಹೊರಟನು. 3 ಕುರಿಮರಿ ಆಗಿರುವವರು ಎರಡನೆಯ ಮುದ್ರೆಯನ್ನು ತೆರೆದಾಗ, ಎರಡನೆಯ ಜೀವಿಯು, “ಬಾ” ಎಂದು ಹೇಳುವುದನ್ನು ಕೇಳಿದೆನು. 4 ಆಗ ಕೆಂಪು ಬಣ್ಣದ ಬೇರೊಂದು ಕುದುರೆಯು ಹೊರಟು ಬಂದಿತು. ಅದರ ಸವಾರನಿಗೆ ಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವುದಕ್ಕೂ ಅಧಿಕಾರವು ಕೊಡಲಾಗಿತ್ತು. ಅವನಿಗೆ ದೊಡ್ಡ ಕತ್ತಿಯು ಸಹ ಕೊಡಲಾಗಿತ್ತು. 5 ಕುರಿಮರಿ ಆಗಿರುವವರು ಮೂರನೆಯ ಮುದ್ರೆಯನ್ನು ತೆರೆದಾಗ, ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ಕೇಳಿದೆನು. ನಾನು ನೋಡಲು, ಕಪ್ಪಾದ ಒಂದು ಕುದುರೆಯನ್ನು ಕಂಡೆನು. ಅದರ ಸವಾರನು ತನ್ನ ಕೈಯಲ್ಲಿ ಒಂದು ತಕ್ಕಡಿಯನ್ನು ಹಿಡಿದಿದ್ದನು. 6 ಆಗ ನಾನು ನಾಲ್ಕು ಜೀವಿಗಳ ಮಧ್ಯದಿಂದ ಬಂದಂತೆ ಒಂದು ಧ್ವನಿಯನ್ನು ಕೇಳಿದೆನು. ಅದು, “ದಿನದ ಕೂಲಿಗೆ ಒಂದು ಕಿಲೋಗ್ರಾಂ ಗೋಧಿ, ಮೂರು ಕಿಲೋಗ್ರಾಂ ಜವೆಗೋಧಿ, ಆದರೆ ಎಣ್ಣೆಯನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಕೆಡಿಸಬೇಡ,” ಎಂದಿತು. 7 ಕುರಿಮರಿ ಆಗಿರುವವರು ನಾಲ್ಕನೆಯ ಮುದ್ರೆಯನ್ನು ಒಡೆದಾಗ, ನಾಲ್ಕನೆಯ ಜೀವಿಯು, “ಬಾ” ಎಂದು ಕರೆಯುವ ಧ್ವನಿಯನ್ನು ಕೇಳಿದೆನು. 8 ನಾನು ನೋಡಲು, ಒಂದು ನಸು ಹಸಿರು ಬಣ್ಣದ ಕುದುರೆ ಕಾಣಿಸಿತು. ಅದರ ಸವಾರನಿಗೆ ಮೃತ್ಯುವೆಂದು ಹೆಸರಿತ್ತು. ಪಾತಾಳವೆಂಬವನು ಅವನ ಹಿಂದೆ ಹೋಗುತ್ತಿದ್ದನು. ಅವರಿಗೆ ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಕತ್ತಿ, ಕ್ಷಾಮ, ಮರಣ ಮತ್ತು ಭೂಮಿಯ ಕ್ರೂರಮೃಗಗಳಿಂದ ಕೊಲ್ಲುವ ಅಧಿಕಾರಕೊಡಲಾಗಿತ್ತು. (Hadēs g86) 9 ಕುರಿಮರಿ ಆಗಿರುವವರು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ ತಮಗಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತರಾದವರ ಆತ್ಮಗಳು ಬಲಿಪೀಠದ ಕೆಳಗಿರುವುದನ್ನು ಕಂಡೆನು. 10 ಅವರು ಮಹಾಶಬ್ದದಿಂದ, “ಒಡೆಯನೇ, ಪವಿತ್ರನೇ, ಸತ್ಯವಂತನೇ ನಮ್ಮ ರಕ್ತ ಸುರಿಸಿದ ಲೋಕನಿವಾಸಿಗಳಿಗೆ ತೀರ್ಪನ್ನೂ ಪ್ರತಿದಂಡನೆಯನ್ನೂ ಮಾಡಲು ಇನ್ನೆಷ್ಟು ಸಮಯ ಬೇಕು?” ಎಂದು ಕೂಗಿದರು. 11 ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಬಿಳೀ ನಿಲುವಂಗಿಯು ಕೊಡಲಾಗಿತ್ತು. ಇನ್ನು ಸ್ವಲ್ಪಕಾಲ ಅವರಂತೆಯೇ ವಧಿಸಲಾಗಬೇಕಾಗಿರುವ ಅವರ ಜೊತೆ ಸೇವಕರ ಮತ್ತು ಸಹೋದರರ ಸಂಖ್ಯೆ ಪೂರ್ಣಗೊಳ್ಳುವ ತನಕ ಕಾದಿರಬೇಕೆಂದು ಅವರಿಗೆ ಹೇಳಲಾಯಿತು. 12 ಕುರಿಮರಿ ಆಗಿರುವವರು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾ ಭೂಕಂಪವಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು. 13 ಬಿರುಗಾಳಿಯಿಂದ ಆಕಾಶದ ನಕ್ಷತ್ರಗಳು ಅಂಜೂರದ ಕಾಯಿಗಳಂತೆ ಭೂಮಿಗೆ ಬಿದ್ದವು. 14 ಆಕಾಶವು ಸುರುಳಿಯಂತೆ ಸುತ್ತಿಕೊಂಡು ಹೊರಟುಹೋಯಿತು. ಪ್ರತಿ ಬೆಟ್ಟಗಳು ಮತ್ತು ದ್ವೀಪಗಳು ತಮ್ಮ ಸ್ಥಳಗಳಿಂದ ಕದಲಿದವು. 15 ಅನಂತರ ಭೂರಾಜರುಗಳು, ಮಹಾಪುರುಷರು, ಸಹಸ್ರಾಧಿಪತಿಗಳು, ಐಶ್ವರ್ಯವಂತರು, ಬಲಿಷ್ಠರು, ದಾಸರು ಹಾಗೂ ಸ್ವತಂತ್ರರು, ಗವಿ ಮತ್ತು ಬೆಟ್ಟಗಳ ಬಂಡೆಗಳಲ್ಲಿ ತಮ್ಮನ್ನು ಮರೆಮಾಡಿಕೊಂಡು, 16 ಬೆಟ್ಟಗುಡ್ಡಗಳಿಗೆ, “ನಮ್ಮ ಮೇಲೆ ಬಿದ್ದು ಸಿಂಹಾಸನದ ಮೇಲೆ ಕುಳಿತಿರುವವನ ಮುಖದಿಂದ ಮತ್ತು ಕುರಿಮರಿ ಆಗಿರುವವರ ಕೋಪಾಗ್ನಿಯಿಂದ ನಮ್ಮನ್ನು ಮರೆಮಾಡಿರಿ. 17 ಏಕೆಂದರೆ, ಅವರ ಕೋಪಾಗ್ನಿಯ ಮಹಾದಿನವು ಬಂದಿದೆ, ಅದರ ಮುಂದೆ ಯಾರು ನಿಂತಾರು?” ಎಂದು ಹೇಳಿದರು.

< ಪ್ರಕಟಣೆ 6 >