< ಕೀರ್ತನೆಗಳು 38 >

1 ದಾವೀದನ ಕೀರ್ತನೆ. ದುರವಸ್ಥೆಯಲ್ಲಿರುವ ಭಕ್ತನ ದೇವರ ಸಹಾಯದ ಬೇಡಿಕೆ. ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ; ಮನನೊಂದು ನನ್ನನ್ನು ಶಿಕ್ಷಿಸಬೇಡಿರಿ. 2 ಏಕೆಂದರೆ, ನಿಮ್ಮ ಬಾಣಗಳು ನನ್ನಲ್ಲಿ ನಾಟಿವೆ. ನಿಮ್ಮ ಶಿಕ್ಷಾ ಹಸ್ತವು ನನ್ನ ಮೇಲೆ ಭಾರವಾಗಿದೆ. 3 ನಿಮ್ಮ ಬೇಸರದ ನಿಮಿತ್ತ ನನ್ನ ಶರೀರದಲ್ಲಿ ಸ್ವಸ್ಥತೆ ಏನೂ ಇಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ಕ್ಷೇಮವೇ ಇಲ್ಲ. 4 ಏಕೆಂದರೆ, ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿ ಹೋಗಿವೆ; ದೋಷ ಭಾವನೆಯ ಹೊರೆಯು ನನಗೆ ಬಹುಭಾರವಾಗಿವೆ. 5 ನನ್ನ ಮೂರ್ಖತನದ ನಿಮಿತ್ತ ನನಗಾದ ಗಾಯಗಳು ದುರ್ವಾಸನೆಯಿಂದ ಕೀವು ತುಂಬಿವೆ. 6 ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ. ದಿನವೆಲ್ಲಾ ದುಃಖದಿಂದ ನಾನು ಅಲೆಯುತ್ತಿದ್ದೇನೆ. 7 ನನ್ನ ಸೊಂಟ ಬಹು ಬೇನೆಯಿಂದ ತುಂಬಿದೆ. ನನ್ನ ದೇಹದಲ್ಲಿ ಕ್ಷೇಮವೇ ಇಲ್ಲ. 8 ಬಲಹೀನನಾಗಿದ್ದೇನೆ, ಬಹಳ ಜಜ್ಜಿ ಹೋಗಿದ್ದೇನೆ; ನನ್ನ ಹೃದಯದ ವೇದನೆಯಿಂದ ನರಳುತ್ತಾ ಇದ್ದೇನೆ. 9 ಯೆಹೋವ ದೇವರೇ, ನಿಮಗೆ ನನ್ನ ಅಪೇಕ್ಷೆಗಳೆಲ್ಲಾ ಗೊತ್ತೇ ಇದೆ; ನನ್ನ ನಿಟ್ಟುಸಿರು ನಿಮಗೆ ಮರೆಯಾದದ್ದಲ್ಲ. 10 ನನ್ನ ಹೃದಯ ಬಡಿದುಕೊಳ್ಳುತ್ತದೆ. ನನ್ನ ಶಕ್ತಿಯು ನನ್ನನ್ನು ಬಿಟ್ಟುಹೋಗಿದೆ; ನನ್ನ ಕಣ್ಣುಗಳ ಬೆಳಕು ಸಹ ಹೋಗಿಬಿಟ್ಟಿದೆ. 11 ನನ್ನ ಪ್ರಿಯರೂ, ನನ್ನ ಸ್ನೇಹಿತರೂ ನನ್ನ ಬಾಧೆಗೆ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ. 12 ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಆಲೋಚಿಸುತ್ತಾರೆ. 13 ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳುವುದಿಲ್ಲ; ತನ್ನ ಬಾಯಿ ತೆರೆಯದ ಮೂಕನ ಹಾಗಿದ್ದೇನೆ. 14 ನಾನು ಕಿವಿ ಕೇಳಿಸದವನಂತೆ ಇದ್ದೇನೆ. ನಾನು ಪ್ರತ್ಯುತ್ತರ ಕೊಡಲಾರದಂತೆಯೂ ಇದ್ದೇನೆ. 15 ಯೆಹೋವ ದೇವರೇ, ನಿಮ್ಮನ್ನೇ ಎದುರು ನೋಡುತ್ತೇನೆ; ನನ್ನ ದೇವರಾದ ಯೆಹೋವ ದೇವರೇ, ನೀವು ಉತ್ತರ ಕೊಡುವಿರಿ. 16 ಏಕೆಂದರೆ ನಾನು, “ಅವರು ನನಗೋಸ್ಕರ ಸಂತೋಷಪಡದೆ ಇರಲಿ ನನ್ನ ಪಾದ ಜಾರುವಾಗ ಅವರು ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳದಿರಲಿ,” ಎಂದುಕೊಂಡೆನು. 17 ನಾನು ಎಡವಿ ಬೀಳಲಿದ್ದೇನೆ; ನನ್ನ ನೋವು ಯಾವಾಗಲೂ ನನ್ನ ಮುಂದೆ ಇದೆ. 18 ನನ್ನ ಅಕ್ರಮವನ್ನು ಅರಿಕೆ ಮಾಡುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು. 19 ನನ್ನ ಶತ್ರುಗಳು ಬಲಗೊಂಡಿದ್ದಾರೆ. ನನ್ನನ್ನು ವಿನಾಕಾರಣವಾಗಿ ದ್ವೇಷಿಸುವವರು ಹೆಚ್ಚಿದ್ದಾರೆ. 20 ನನ್ನ ಶತ್ರುಗಳು ಒಳ್ಳೆಯದಕ್ಕೆ ಬದಲಾಗಿ ಕೇಡನ್ನು ಸಲ್ಲಿಸುತ್ತಿದ್ದಾರೆ. ನಾನು ಒಳ್ಳೆಯದನ್ನು ಹಿಂದಟ್ಟುವ ಕಾರಣ ನನ್ನನ್ನು ಎದುರಿಸುತ್ತಾರೆ. 21 ಯೆಹೋವ ದೇವರೇ, ನನ್ನನ್ನು ಬಿಡಬೇಡಿರಿ; ನನ್ನ ದೇವರೇ, ನನಗೆ ದೂರವಾಗಿರಬೇಡಿರಿ. 22 ನನ್ನ ರಕ್ಷಕ ಆಗಿರುವ ಯೆಹೋವ ದೇವರೇ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.

< ಕೀರ್ತನೆಗಳು 38 >