< ಕೀರ್ತನೆಗಳು 3 >

1 ದಾವೀದನ ಕೀರ್ತನೆ. ಅವನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ್ದು. ಯೆಹೋವ ದೇವರೇ, ನನ್ನ ವೈರಿಗಳು ಬಹುಜನ! ನನಗೆ ವಿರೋಧವಾಗಿ ಏಳುವವರು ಎಷ್ಟೋ ಜನ!
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ ಕೀರ್ತನೆ. ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ; ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.
2 “ದೇವರು ಅವನನ್ನು ಬಿಡುಗಡೆ ಮಾಡುವುದಿಲ್ಲ,” ಎಂದು ಅನೇಕರು ನನ್ನ ಬಗ್ಗೆ ಹೇಳುತ್ತಾರೆ.
ಅನೇಕರು ನನ್ನ ವಿಷಯದಲ್ಲಿ, “ಅವನಿಗೆ ದೇವರಿಂದ ಸಹಾಯವು ಆಗುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ. (ಸೆಲಾ)
3 ಆದರೆ ಯೆಹೋವ ದೇವರೇ, ನೀವೇ ನನ್ನ ಸುತ್ತಲಿರುವ ಗುರಾಣಿಯೂ, ನನ್ನ ಮಹಿಮೆಯೂ ನನ್ನ ತಲೆ ಮೇಲೆತ್ತುವವರೂ ಆಗಿದ್ದೀರಿ.
ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ; ನೀನು ನನ್ನ ಗೌರವಕ್ಕೆ ಆಧಾರನೂ, ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.
4 ನಾನು ನನ್ನ ಧ್ವನಿಯೆತ್ತಿ ಯೆಹೋವ ದೇವರಿಗೆ ಮೊರೆಯಿಡುವೆನು, ಅವರು ತಮ್ಮ ಪರಿಶುದ್ಧ ಪರ್ವತದಿಂದ ನನಗೆ ಉತ್ತರಕೊಡುವರು.
ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ, ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. (ಸೆಲಾ)
5 ನಾನು ಮಲಗಿ ನಿದ್ರಿಸುವೆನು; ಯೆಹೋವ ದೇವರು ನನ್ನನ್ನು ಕಾಪಾಡಿದ್ದರಿಂದ ನಾನು ಎಚ್ಚರಗೊಂಡೆನು.
ಯೆಹೋವನು ನನ್ನನ್ನು ಕಾಪಾಡುವವನು, ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.
6 ಸಾವಿರಾರು ಜನರು ನನಗೆ ವಿರೋಧವಾಗಿ ನನ್ನ ಸುತ್ತುವರಿದರೂ ನಾನು ಭಯಪಡೆನು.
ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.
7 ಯೆಹೋವ ದೇವರೇ, ಏಳಿರಿ! ನನ್ನ ದೇವರೇ, ನನ್ನನ್ನು ರಕ್ಷಿಸಿರಿ. ನನ್ನ ಶತ್ರುಗಳೆಲ್ಲರ ದವಡೆಗೆ ಹೊಡೆಯಿರಿ; ದುಷ್ಟರ ಹಲ್ಲುಗಳನ್ನು ಮುರಿದುಬಿಡಿರಿ.
ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.
8 ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು. ನಿಮ್ಮ ಜನರ ಮೇಲೆ ನಿಮ್ಮ ಆಶೀರ್ವಾದವಿರಲಿ.
ಜಯವು ಯೆಹೋವನಿಂದಲೇ ಉಂಟಾಗುವುದು. ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ. (ಸೆಲಾ)

< ಕೀರ್ತನೆಗಳು 3 >