< ಕೀರ್ತನೆಗಳು 26 >

1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನನ್ನು ನಿರ್ದೋಷನನ್ನಾಗಿ ನಿರ್ಣಯಿಸಿರಿ, ನಾನು ದೋಷವಿಲ್ಲದ ಜೀವನ ನಡೆಸಿದ್ದೇನೆ; ನಾನು ಯೆಹೋವ ದೇವರಲ್ಲಿ ಕದಲದೆ ಭರವಸೆ ಇಟ್ಟಿದ್ದೇನೆ. 2 ಯೆಹೋವ ದೇವರೇ, ನನ್ನನ್ನು ಶೋಧಿಸಿ, ಪರೀಕ್ಷಿಸಿರಿ; ನನ್ನ ಅಂತರಿಂದ್ರಿಯಗಳನ್ನೂ ನನ್ನ ಹೃದಯವನ್ನೂ ಶೋಧಿಸಿರಿ. 3 ನಿಮ್ಮ ಒಡಂಬಡಿಕೆಯ ಪ್ರೀತಿಯು ಯಾವಾಗಲೂ ನನ್ನ ಮನಸ್ಸು ತುಂಬ ಇದೆ; ನಿಮ್ಮ ನಂಬಿಗಸ್ತಿಕೆಯಲ್ಲಿ ನಾನು ಬಾಳುತ್ತಿದ್ದೇನೆ. 4 ಮೋಸಗಾರರ ಸಂಗಡ ನಾನು ಕುಳಿತುಕೊಳ್ಳಲಿಲ್ಲ; ವಂಚಕರ ಸಂಗಡ ನಾನು ಹೋಗುವುದಿಲ್ಲ. 5 ದುರ್ಮಾರ್ಗಿಗಳ ಸಭೆಯನ್ನು ದ್ವೇಷಿಸಿದ್ದೇನೆ; ದುಷ್ಟರ ಸಂಗಡ ಕುಳಿತುಕೊಳ್ಳುವುದಿಲ್ಲ. 6 ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು, ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ, 7 ಸ್ತೋತ್ರ ಧ್ವನಿಯೆತ್ತಿ ಸಾರುತ್ತಾ ನಿಮ್ಮ ಅದ್ಭುತಗಳನ್ನೆಲ್ಲಾ ತಿಳಿಸುವೆನು. 8 ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ, ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ. 9 ಪಾಪಿಗಳ ಸಂಗಡ ನನ್ನ ಪ್ರಾಣವನ್ನೂ, ರಕ್ತಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡಿರಿ. 10 ಅವರ ಕೈಗಳಲ್ಲಿ ಕೇಡು ಇದೆ; ಅವರ ಬಲಗೈ ಲಂಚಗಳಿಂದ ತುಂಬಿದೆ. 11 ನಾನಾದರೋ ನನ್ನ ಯಥಾರ್ಥತೆಯಲ್ಲಿ ನಡೆಯುತ್ತೇನೆ; ನನ್ನನ್ನು ವಿಮೋಚಿಸಿರಿ; ನನಗೆ ಕರುಣೆಯುಳ್ಳವರಾಗಿರಿ. 12 ನನ್ನ ಪಾದವು ಸಮ ನೆಲದಲ್ಲಿ ನಿಂತಿದೆ; ನಾನು ಮಹಾಸಭೆಯಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು.

< ಕೀರ್ತನೆಗಳು 26 >