< ಕೀರ್ತನೆಗಳು 1 >

1 ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಿಗಳ ಮಾರ್ಗದಲ್ಲಿ ನಿಲ್ಲದೆ, ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ, 2 ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ, ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವವರು ಧನ್ಯರು. 3 ಅಂಥವರು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟಿರುವ, ಮರದ ಹಾಗಿರುವರು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದೆ, ಅದರ ಎಲೆ ಉದುರುವುದೇ ಇಲ್ಲ. ಅದರಂತೆ ಅವರು ಮಾಡುವ ಕಾರ್ಯವೆಲ್ಲವೂ ಸಫಲವಾಗುವುದು. 4 ಆದರೆ ದುಷ್ಟರು ಹಾಗಲ್ಲ! ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೇ ಇದ್ದಾರೆ. 5 ಆದ್ದರಿಂದ ದುಷ್ಟರು ನ್ಯಾಯತೀರ್ಪಿಗೆ ಒಳಗಾಗುವರು, ಪಾಪಿಗಳಿಗೆ ನೀತಿವಂತರ ಸಭೆಯಲ್ಲಿ ಸ್ಥಳವಿರುವುದಿಲ್ಲ. 6 ಯೆಹೋವ ದೇವರು ನೀತಿವಂತರ ಮಾರ್ಗವನ್ನು ಅರಿತಿದ್ದಾರೆ; ಆದರೆ ದುಷ್ಟರ ಮಾರ್ಗವು ನಾಶಕ್ಕೆ ನಡೆಸುವುದು.

< ಕೀರ್ತನೆಗಳು 1 >