< ಮಾರ್ಕನು 9 >

1 ಅನಂತರ ಯೇಸು ಅವರಿಗೆ, “ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವು ಶಕ್ತಿಯೊಂದಿಗೆ ಬರುವುದನ್ನು ಕಾಣುವವರೆಗೆ ಮರಣದ ಅನುಭವ ಹೊಂದುವುದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು. 2 ಯೇಸು ಆರು ದಿನಗಳಾದ ಮೇಲೆ ಪೇತ್ರ, ಯಾಕೋಬ, ಯೋಹಾನನನ್ನೂ ತಮ್ಮೊಂದಿಗೆ ಕರೆದುಕೊಂಡು ಏಕಾಂತವಾಗಿ ಒಂದು ಎತ್ತರವಾದ ಬೆಟ್ಟಕ್ಕೆ ಹೋದರು. ಅಲ್ಲಿ ಯೇಸು ಅವರ ಮುಂದೆ ರೂಪಾಂತರಗೊಂಡರು. 3 ಯೇಸುವಿನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷ್ಟು ಉಜ್ವಲವಾಗಿ ಹೊಳೆಯುತ್ತಿತ್ತು. 4 ಆಗ ಅಲ್ಲಿ ಎಲೀಯನು ಮತ್ತು ಮೋಶೆಯು ಯೇಸುವಿನೊಂದಿಗೆ ಮಾತನಾಡುತ್ತಿರುವುದನ್ನು ಅವರು ಕಂಡರು. 5 ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ಮೂರು ಗುಡಾರಗಳನ್ನು ನಾವು ಕಟ್ಟುವೆವು,” ಎಂದು ಹೇಳಿದನು. 6 ತಾನು ಏನು ಮಾತನಾಡಬೇಕೋ ಅವನಿಗೆ ತಿಳಿದಿರಲಿಲ್ಲ. ಏಕೆಂದರೆ ಅವರು ಬಹಳವಾಗಿ ಹೆದರಿದ್ದರು. 7 ಆಗ ಅಲ್ಲಿ ಮೋಡವು ಅವರ ಮೇಲೆ ಕವಿದುಕೊಂಡಿತು. ಮೋಡದೊಳಗಿಂದ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂಬ ಧ್ವನಿಯು ಬಂದಿತು. 8 ಕೂಡಲೇ ಅವರು ಸುತ್ತಲೂ ನೋಡಲಾಗಿ ತಮ್ಮೊಂದಿಗೆ ಯೇಸುವನ್ನೇ ಹೊರತು ಇನ್ನಾರನ್ನೂ ಕಾಣಲಿಲ್ಲ. 9 ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಮನುಷ್ಯಪುತ್ರರಾದ ತಾವು ಸತ್ತವರೊಳಗಿಂದ ಎದ್ದು ಬರುವವರೆಗೆ ಅವರು ಕಂಡದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಆಜ್ಞಾಪಿಸಿದರು. 10 “ಸತ್ತವರೊಳಗಿಂದ ಎದ್ದು ಬರುವುದೆಂದರೆ ಏನು?” ಅವರು ಒಬ್ಬರಿಗೊಬ್ಬರು ಆ ಮಾತನ್ನು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು. 11 ಇದಲ್ಲದೆ ಅವರು ಯೇಸುವಿಗೆ, “ಎಲೀಯನು ಮೊದಲು ಬರುವುದು ಅಗತ್ಯವೆಂದು ನಿಯಮ ಬೋಧಕರು ಏಕೆ ಹೇಳುತ್ತಾರೆ?” ಎಂದು ಕೇಳಿದರು. 12 ಯೇಸು ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವನ್ನೂ ಸರಿಪಡಿಸುತ್ತಾನೆಂಬ ಮಾತು ನಿಜವೇ. ಆದರೆ ಮನುಷ್ಯಪುತ್ರನಾದ ನಾನು ಬಹಳ ಯಾತನೆಗಳನ್ನು ಅನುಭವಿಸಿ ತಿರಸ್ಕರಿಸಲಾಗಬೇಕೆಂದು ನನ್ನ ವಿಷಯವಾಗಿ ಬರೆದಿರುವುದು ಹೇಗೆ? 13 ಆದರೆ, ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿ ಬರೆದಿರುವಂತೆ ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ಅವನಿಗೆ ಮಾಡಿದರು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. 14 ಯೇಸು ತಮ್ಮ ಶಿಷ್ಯರ ಬಳಿಗೆ ಬಂದಾಗ, ಅವರ ಸುತ್ತಲು ದೊಡ್ಡ ಸಮೂಹವನ್ನೂ ನಿಯಮ ಬೋಧಕರು ಅವರೊಂದಿಗೆ ತರ್ಕಿಸುತ್ತಿರುವುದನ್ನೂ ಕಂಡರು. 15 ಜನರೆಲ್ಲರೂ ಯೇಸುವನ್ನು ಕಂಡಕೂಡಲೇ, ಬಹು ಆಶ್ಚರ್ಯಪಟ್ಟು ಓಡುತ್ತಾ ಬಂದು ಯೇಸುವನ್ನು ವಂದಿಸಿದರು. 16 ಆಗ ಯೇಸು ಅವರಿಗೆ, “ಅವರೊಂದಿಗೆ ನೀವು ಏನು ತರ್ಕಮಾಡುತ್ತಿದ್ದಿರಿ?” ಎಂದು ಕೇಳಿದರು. 17 ಸಮೂಹದಲ್ಲಿದ್ದ ಒಬ್ಬನು, “ಬೋಧಕರೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತೆಗೆದುಕೊಂಡು ಬಂದೆನು. 18 ಅಶುದ್ಧಾತ್ಮವು ಅವನನ್ನು ಹಿಡಿದುಕೊಂಡಾಗಲೆಲ್ಲಾ ಅವನನ್ನು ಒದ್ದಾಡಿಸುತ್ತದೆ. ಅವನು ನೊರೆ ಕಾರುತ್ತಾ ತನ್ನ ಹಲ್ಲು ಕಡಿದು ಸೆಟೆದುಕೊಂಡು ಬೀಳುತ್ತಾನೆ. ಅದನ್ನು ಬಿಡಿಸಬೇಕೆಂದು ನಾನು ನಿನ್ನ ಶಿಷ್ಯರಿಗೆ ಹೇಳಿದೆನು. ಆದರೆ ಅದು ಅವರಿಂದ ಆಗಲಿಲ್ಲ,” ಎಂದು ಹೇಳಿದನು. 19 ಆಗ ಯೇಸು ಅವರಿಗೆ, “ವಿಶ್ವಾಸವಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು. 20 ಅವರು ಅವನನ್ನು ಯೇಸುವಿನ ಬಳಿಗೆ ತಂದರು. ಯೇಸುವನ್ನು ನೋಡಿದ ತಕ್ಷಣವೇ ಆ ದೆವ್ವವು ಆ ಬಾಲಕನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಕಾರುತ್ತಾ ಹೊರಳಾಡಿದನು. 21 ಯೇಸು ಅವನ ತಂದೆಗೆ, “ಇದು ಇವನನ್ನು ಹಿಡಿದು ಎಷ್ಟು ಕಾಲವಾಯಿತು?” ಎಂದು ಕೇಳಲು, ಅವನು, “ಬಾಲ್ಯದಿಂದಲೇ ಹೀಗಿದೆ. 22 ಅಶುದ್ಧಾತ್ಮವು ಅವನನ್ನು ಕೊಲ್ಲಬೇಕೆಂದು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು. ಆದರೆ ನೀನು ಏನಾದರೂ ಮಾಡಲು ಸಾಧ್ಯವಿದ್ದರೆ, ಕನಿಕರಿಸಿ ನಮಗೆ ಸಹಾಯಮಾಡು,” ಎಂದನು. 23 ಆಗ ಯೇಸು ಅವನಿಗೆ, “ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು. 24 ತಕ್ಷಣವೇ ಬಾಲಕನ ತಂದೆಯು, “ನಾನು ನಂಬುತ್ತೇನೆ. ನನಗೆ ಅಪನಂಬಿಕೆಯಿದೆ ನನಗೆ ಸಹಾಯಮಾಡು,” ಎಂದು ಮೊರೆಯಿಟ್ಟನು. 25 ಜನರು ಕೂಡಿಕೊಂಡು ಓಡಿಬರುವುದನ್ನು ಯೇಸು ಕಂಡು, ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ, “ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ, ಇನ್ನೆಂದಿಗೂ ಅವನೊಳಗೆ ಸೇರಬಾರದೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ,” ಎಂದರು. 26 ಆಗ ಅಶುದ್ಧಾತ್ಮವು ಕೂಗಿ ಬಾಲಕನನ್ನು ಕ್ರೂರವಾಗಿ ಒದ್ದಾಡಿಸಿ ಅವನೊಳಗಿಂದ ಹೊರಗೆ ಬಂದಿತು. ಅವನು ಸತ್ತವನ ಹಾಗೆ ಬಿದ್ದಿದ್ದರಿಂದ ಅನೇಕರು, “ಅವನು ಸತ್ತಿದ್ದಾನೆ,” ಎಂದರು. 27 ಆದರೆ ಯೇಸು ಕೈಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದು ನಿಂತನು. 28 ಯೇಸು ಮನೆಯೊಳಕ್ಕೆ ಬಂದಾಗ, ಅವರ ಶಿಷ್ಯರು ಅವರಿಗೆ ಪ್ರತ್ಯೇಕವಾಗಿ, “ಆ ಅಶುದ್ಧಾತ್ಮವನ್ನು ಹೊರಗೆ ಹಾಕುವುದಕ್ಕೆ ನಮ್ಮಿಂದ ಏಕೆ ಆಗಲಿಲ್ಲ?” ಎಂದು ಕೇಳಿದರು. 29 ಯೇಸು ಅವರಿಗೆ, “ಈ ತರವಾದದ್ದು ದೇವರ ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವುದರಿಂದಲೂ ಹೋಗಲಾರದು,” ಎಂದರು. 30 ಅವರು ಅಲ್ಲಿಂದ ಹೊರಟು ಗಲಿಲಾಯದ ಮಾರ್ಗವಾಗಿ ಹಾದುಹೋದರು. ತಾವು ಎಲ್ಲಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬಾರದೆಂದು ಯೇಸು ಅಪೇಕ್ಷಿಸಿದರು. 31 ಏಕೆಂದರೆ ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನನ್ನು ಜನರ ಕೈಗಳಿಗೆ ಒಪ್ಪಿಸಿಕೊಡಲಾಗುವುದು. ಅವರು ನನ್ನನ್ನು ಕೊಲ್ಲುವರು. ನನ್ನನ್ನು ಕೊಂದ ತರುವಾಯ ಮೂರನೆಯ ದಿನದಲ್ಲಿ ನಾನು ಜೀವಂತವಾಗಿ ಏಳುವೆನು,” ಎಂದು ಬೋಧಿಸುತ್ತಿದ್ದರು. 32 ಆದರೆ ಅವರಲ್ಲಿ ಆ ಮಾತನ್ನು ಯಾರೂ ಗ್ರಹಿಸಲಿಲ್ಲ. ಯೇಸುವನ್ನು ಕೇಳುವುದಕ್ಕೂ ಭಯಪಟ್ಟರು. 33 ಅವರು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ, ಯೇಸು ಅವರಿಗೆ, “ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ?” ಎಂದು ಕೇಳಿದರು. 34 ಆದರೆ ಅವರು ಸುಮ್ಮನಿದ್ದರು. ಏಕೆಂದರೆ ಅವರು ತಮ್ಮೊಳಗೆ ಯಾವನು ಅತಿ ದೊಡ್ಡವನು ಎಂದು ದಾರಿಯಲ್ಲಿ ವಾಗ್ವಾದ ಮಾಡಿದ್ದರು. 35 ಆಗ ಯೇಸು ಕುಳಿತುಕೊಂಡು ಹನ್ನೆರಡು ಮಂದಿಯನ್ನು ಕರೆದು ಅವರಿಗೆ, “ಯಾವನಾದರೂ ಮೊದಲಿನವನಾಗಬೇಕೆಂದು ಇಷ್ಟಪಟ್ಟರೆ ಅವನು ಎಲ್ಲರಿಗಿಂತ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು,” ಎಂದರು. 36 ಯೇಸು ಒಂದು ಮಗುವನ್ನು ತೆಗೆದುಕೊಂಡು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, ತಮ್ಮ ಕೈಗಳಲ್ಲಿ ಅದನ್ನು ಎತ್ತಿಕೊಂಡು ಅವರಿಗೆ, 37 “ಯಾವನಾದರೂ ಇಂಥ ಮಕ್ಕಳಲ್ಲಿ ಒಂದನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿದರೆ, ಅವನು ನನ್ನನ್ನು ಸ್ವೀಕರಿಸುತ್ತಾನೆ. ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಅಲ್ಲ ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ,” ಎಂದರು. 38 ಆಗ ಯೋಹಾನನು, “ಬೋಧಕರೇ, ನಮ್ಮನ್ನು ಹಿಂಬಾಲಿಸದ ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವ ಓಡಿಸುವುದನ್ನು ನಾವು ಕಂಡೆವು. ಅವನು ನಮ್ಮವನು ಅಲ್ಲದ್ದರಿಂದ ನಾವು ಅವನನ್ನು ತಡೆದೆವು,” ಎಂದು ಹೇಳಿದನು. 39 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ; ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿದವನು, ನನ್ನ ವಿಷಯದಲ್ಲಿ ಕೆಟ್ಟದ್ದನ್ನು ಮಾತನಾಡಲಾರನು. 40 ನಮಗೆ ವಿರೋಧಿಯಾಗಿರದವನು ನಮ್ಮ ಪಕ್ಷದವನಾಗಿದ್ದಾನೆ. 41 ಇದಲ್ಲದೆ ನೀವು ಕ್ರಿಸ್ತನಲ್ಲಿ ಸೇರಿದವರಾದ್ದರಿಂದ ಯಾರಾದರೂ ನನ್ನ ಹೆಸರಿನಲ್ಲೆ ನಿಮಗೆ ಒಂದು ಲೋಟ ನೀರನ್ನು ಕೊಟ್ಟರೂ ಅವರು ತಮ್ಮ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. 42 “ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬರಿಗೆ ಯಾರಾದರೂ ಪಾಪಕ್ಕೆ ಕಾರಣರಾದರೆ, ಅಂಥವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವರಿಗೆ ಲೇಸು. 43 ನಿಮ್ಮ ಕೈ ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಎಂದಿಗೂ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅಂಗಹೀನರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು. (Geenna g1067) 44 ನರಕದಲ್ಲಿ, “‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.’ 45 ನಿಮ್ಮ ಕಾಲು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ನೀವು ಎರಡು ಕಾಲುಳ್ಳವರಾಗಿ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು. (Geenna g1067) 46 ನರಕದಲ್ಲಿ, “‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.’ 47 ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ದೇವರ ರಾಜ್ಯದಲ್ಲಿ ಸೇರುವುದು ನಿಮಗೆ ಲೇಸು. (Geenna g1067) 48 ನರಕದಲ್ಲಿ, “‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ, ಮತ್ತು ಬೆಂಕಿಯು ಆರುವುದಿಲ್ಲ.’ 49 ಉಪ್ಪನ್ನು ಪರೀಕ್ಷಿಸುವಂತೆ ಪ್ರತಿಯೊಬ್ಬರು ಬೆಂಕಿಯ ಮೂಲಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ. 50 “ಉಪ್ಪು ಒಳ್ಳೆಯದು. ಆದರೆ ಉಪ್ಪೇ ಸಪ್ಪಗಾದರೆ, ಇನ್ನಾವುದರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರುವಂತೆ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ,” ಎಂದರು.

< ಮಾರ್ಕನು 9 >