< ಲೂಕನು 10 >

1 ಇವುಗಳಾದ ಮೇಲೆ ಕರ್ತದೇವರು ಬೇರೆ ಎಪ್ಪತ್ತೆರಡು ಮಂದಿಯನ್ನು ಸಹ ನೇಮಿಸಿ ತಾವೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತಮಗೆ ಮುಂದಾಗಿ ಕಳುಹಿಸಿದರು. 2 ಯೇಸು ಅವರಿಗೆ, “ಬೆಳೆಯೋ ಬಹಳವಾಗಿದೆ, ಕೆಲಸದವರೋ ಕೆಲವರು. ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ. 3 ಹೋಗಿರಿ! ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. 4 ಹಣದ ಚೀಲವನ್ನಾಗಲಿ, ಪ್ರಯಾಣದ ಚೀಲವನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರನ್ನೂ ಕುಶಲ ವಿಚಾರ ಮಾಡಿಕೊಂಡಿರಬೇಡಿರಿ. 5 “ನೀವು ಯಾವ ಮನೆಯನ್ನಾದರೂ ಪ್ರವೇಶಿಸುವಾಗ ಮೊದಲು, ‘ಈ ಮನೆಗೆ ಸಮಾಧಾನವಾಗಲಿ,’ ಎಂದು ಹೇಳಿರಿ. 6 ಅಲ್ಲಿ ಸಮಾಧಾನದ ಮನುಷ್ಯನು ಇದ್ದರೆ, ನಿಮ್ಮ ಸಮಾಧಾನವು ಅವನ ಮೇಲೆ ಇರುವುದು; ಇಲ್ಲದಿದ್ದರೆ, ಅದು ನಿಮಗೇ ಹಿಂದಿರುಗುವುದು. 7 ಮನೆಯಿಂದ ಮನೆಗೆ ಹೋಗದೆ, ಅದೇ ಮನೆಯಲ್ಲಿದ್ದು, ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ. ಕೆಲಸದವನು ತನ್ನ ಕೂಲಿಗೆ ಯೋಗ್ಯನು. 8 “ಯಾವುದಾದರೂ ಒಂದು ಪಟ್ಟಣದೊಳಗೆ ನೀವು ಪ್ರವೇಶಿಸುವಾಗ, ಅವರು ನಿಮ್ಮನ್ನು ಸೇರಿಸಿಕೊಂಡರೆ ಅವರು ನೀಡಿದ್ದನ್ನು ತಿನ್ನಿರಿ. 9 ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿ, ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ,’ ಎಂದು ಹೇಳಿರಿ. 10 ಆದರೆ ನೀವು ಪ್ರವೇಶಿಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ, ನೀವು ಅದರ ಬೀದಿಗಳಲ್ಲಿ ಹೋಗಿ, 11 ‘ನಮ್ಮ ಪಾದಗಳಿಗೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ. ಆದರೂ ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ,’ ಎಂದು ಹೇಳಿರಿ. 12 ಆದರೆ ನ್ಯಾಯತೀರ್ಪಿನ ದಿನ, ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿ ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ. 13 “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಅದ್ಭುತಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು. 14 ಆದರೆ ನ್ಯಾಯತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು. 15 ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. (Hadēs g86) 16 “ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು. 17 ಆ ಎಪ್ಪತ್ತೆರಡು ಮಂದಿ ಸಂತೋಷದಿಂದ ಹಿಂತಿರುಗಿ, “ಕರ್ತದೇವರೇ, ನಿಮ್ಮ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು,” ಎಂದರು. 18 ಯೇಸು ಅವರಿಗೆ, “ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವುದನ್ನು ನಾನು ಕಂಡೆನು. 19 ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವುದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವುದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡಲಾರದು. 20 ಹೀಗಿದ್ದರೂ, ದೆವ್ವಗಳು ನಿಮಗೆ ಅಧೀನವಾಗಿವೆ ಎಂದು ಸಂತೋಷ ಪಡಬೇಡಿರಿ, ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಲಿಖಿತವಾಗಿವೆ ಎಂದು ಸಂತೋಷಿಸಿರಿ,” ಎಂದರು. 21 ಆ ಸಮಯದಲ್ಲಿ ಯೇಸು, ಪವಿತ್ರಾತ್ಮರ ಮುಖಾಂತರ ಆನಂದಗೊಂಡು, “ತಂದೆಯೇ, ಪರಲೋಕ, ಭೂಲೋಕಗಳ ಒಡೆಯರೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ. ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು. 22 “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾರೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು,” ಎಂದರು. 23 ಯೇಸು ತಮ್ಮ ಶಿಷ್ಯರ ಕಡೆಗೆ ತಿರುಗಿಕೊಂಡು, “ನೀವು ಕಾಣುತ್ತಿರುವುದನ್ನೆಲ್ಲಾ ಕಾಣುವ ಕಣ್ಣುಗಳು ಭಾಗ್ಯವುಳ್ಳವು. 24 ಏಕೆಂದರೆ ಅನೇಕ ಪ್ರವಾದಿಗಳು ಮತ್ತು ಅರಸರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. 25 ಒಂದು ಸಂದರ್ಭದಲ್ಲಿ ಒಬ್ಬ ನಿಯಮ ಬೋಧಕನು ಎದ್ದು ನಿಂತು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. (aiōnios g166) 26 ಯೇಸು ಅವನಿಗೆ, “ಮೋಶೆಯ ನಿಯಮದಲ್ಲಿ ಏನು ಬರೆದಿದೆ? ನೀನು ಅದನ್ನು ಹೇಗೆ ಓದುತ್ತೀ?” ಎಂದು ಕೇಳಿದರು. 27 ಅದಕ್ಕೆ ಅವನು ಉತ್ತರವಾಗಿ, “‘ನೀನು ನಿನ್ನ ದೇವರಾದ ಕರ್ತದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು,’ ಮತ್ತು ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು,’” ಎಂದನು. 28 ಆಗ ಯೇಸು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟೆ, ಅದರಂತೆಯೇ ಮಾಡು, ಆಗ ನೀನು ಬದುಕುವೆ,” ಎಂದರು. 29 ಆದರೆ ಅವನು ತಾನೇ ನೀತಿವಂತನೆಂದು ತೋರಿಸುವುದಕ್ಕೆ, ಅಪೇಕ್ಷೆಯುಳ್ಳವನಾಗಿ ಯೇಸುವಿಗೆ, “ನನ್ನ ನೆರೆಯವನು ಯಾರು?” ಎಂದು ಕೇಳಿದನು. 30 ಆಗ ಯೇಸು: “ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಯೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನ ವಸ್ತ್ರಗಳನ್ನು ಕಿತ್ತುಕೊಂಡು, ಅವನನ್ನು ಗಾಯಮಾಡಿ, ಅರೆಜೀವ ಮಾಡಿಬಿಟ್ಟು ಹೊರಟು ಹೋದರು. 31 ಆಗ ಒಬ್ಬ ಯಾಜಕನು ಅದೇ ಮಾರ್ಗವಾಗಿ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು. 32 ಅದೇ ಪ್ರಕಾರ ಒಬ್ಬ ಲೇವಿಯೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು. 33 ಆದರೆ ಒಬ್ಬ ಸಮಾರ್ಯದವನು, ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ಕಂಡು, ಕನಿಕರಪಟ್ಟು, 34 ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ವಾಹಕಪಶುವಿನ ಮೇಲೆ ಕುಳ್ಳಿರಿಸಿ, ವಸತಿಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು. 35 ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ಬೆಳ್ಳಿ ನಾಣ್ಯವನ್ನು ತೆಗೆದು ಛತ್ರದ ಯಜಮಾನನಿಗೆ ಕೊಟ್ಟು ಅವನಿಗೆ, ‘ಇವನನ್ನು ಆರೈಕೆ ಮಾಡು, ನೀನು ಏನಾದರೂ ಹೆಚ್ಚು ವೆಚ್ಚಮಾಡಿದರೆ, ನಾನು ತಿರುಗಿ ಬರುವಾಗ ಕೊಟ್ಟು ತೀರಿಸುತ್ತೇನೆ,’ ಎಂದನು. 36 “ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಕೇಳಿದರು. 37 ಅದಕ್ಕೆ ನಿಯಮ ಪಂಡಿತನು, “ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ನಿನ್ನ ನೆರೆಯವನು,” ಎಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆಯೇ ಮಾಡು,” ಎಂದು ಹೇಳಿದರು. 38 ಯೇಸು ಮತ್ತು ಅವರ ಶಿಷ್ಯರು ಸಂಚಾರಮಾಡುತ್ತಾ, ಒಂದು ಹಳ್ಳಿಗೆ ಬಂದರು, ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಅವರನ್ನು ತನ್ನ ಮನೆಯೊಳಗೆ ಸ್ವೀಕರಿಸಿಕೊಂಡಳು. 39 ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು, ಆಕೆಯು ಕರ್ತದೇವರ ಪಾದಗಳ ಬಳಿಯಲ್ಲಿ ಕುಳಿತು ಅವರ ವಾಕ್ಯವನ್ನು ಕೇಳುತ್ತಿದ್ದಳು. 40 ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಅವರ ಬಳಿಗೆ ಬಂದು, “ಕರ್ತದೇವರೇ, ಕೆಲಸ ಮಾಡುವುದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವುದು ನಿಮಗೆ ಚಿಂತೆಯಿಲ್ಲವೋ? ನನಗೆ ಸಹಾಯಮಾಡುವುದಕ್ಕಾಗಿ ಅವಳಿಗೆ ಹೇಳಿರಿ!” ಎಂದಳು. 41 ಅದಕ್ಕೆ ಕರ್ತದೇವರು ಪ್ರತ್ಯುತ್ತರವಾಗಿ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ, 42 ಆದರೆ ಬೇಕಾದದ್ದು ಕೆಲವೇ, ಅವಶ್ಯವಾಗಿರುವುದು. ಮರಿಯಳು ಆ ಉತ್ತಮ ಭಾಗವನ್ನೇ ಆರಿಸಿಕೊಂಡಿದ್ದಾಳೆ ಅದು ಆಕೆಯಿಂದ ಯಾರೂ ತೆಗೆಯಲಾಗುವುದಿಲ್ಲ,” ಎಂದು ಹೇಳಿದರು.

< ಲೂಕನು 10 >