< ಯಾಕೋಬನು ಬರೆದ ಪತ್ರಿಕೆ 5 >

1 ಧನಿಕರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ. 2 ನಿಮ್ಮ ಐಶ್ವರ್ಯವು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿಹಿಡಿದಿದೆ. 3 ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದಿವೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದುಬಿಡುವುದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ. 4 ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ. 5 ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸಿಗೆ ಬಂದಂತೆ ಜೀವಿಸಿದ್ದೀರಿ. ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ. 6 ನಿಮ್ಮನ್ನು ವಿರೋಧ ಮಾಡದ ನಿರ್ದೋಷಿಗೆ ದಂಡನೆಯನ್ನು ವಿಧಿಸಿ, ಕೊಂದುಹಾಕಿದ್ದೀರಿ. 7 ಪ್ರಿಯರೇ, ಕರ್ತ ಯೇಸು ಬರುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ. ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. 8 ನೀವೂ ದೀರ್ಘಶಾಂತಿಯಿಂದಿರಿ. ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ. ಏಕೆಂದರೆ ಕರ್ತ ಯೇಸುವಿನ ಪುನರಾಗಮನ ಹತ್ತಿರವಾಯಿತು. 9 ಪ್ರಿಯರೇ, ನೀವು ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿರಿ. ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾರೆ. 10 ನನ್ನ ಪ್ರಿಯರೇ, ಕರ್ತದೇವರ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯವಾಗಿ ಆದರ್ಶವಾಗಿ ಇಟ್ಟುಕೊಳ್ಳಿರಿ. 11 ಇಗೋ, ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ, ಕರ್ತದೇವರು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ತಿಳಿದು, ಕರ್ತದೇವರು ಬಹಳ ಒಳ್ಳೆಯವರೂ ದಯಾಳುವೂ ಆಗಿದ್ದಾರೆಂದು ತಿಳಿದಿದ್ದೀರಷ್ಟೆ. 12 ಮುಖ್ಯವಾಗಿ ನನ್ನ ಪ್ರಿಯರೇ, ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ನಾವುದರ ಮೇಲಾಗಲಿ ಆಣೆ ಇಡಬೇಡಿರಿ. ಹೌದೆಂದು ಹೇಳಬೇಕಾದರೆ “ಹೌದು” ಎನ್ನಿರಿ. ಇಲ್ಲವಾದರೆ “ಇಲ್ಲ” ಎನ್ನಿರಿ. ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. 13 ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದಾನೋ? ಅವನು ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷ ಪಡುವವನಿದ್ದಾನೋ? ಅವನು ಕೀರ್ತನೆಗಳನ್ನು ಹಾಡಲಿ. 14 ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯನನ್ನು ಕರೆಕಳುಹಿಸಲಿ. ಅವರು ಕರ್ತ ಯೇಸುವಿನ ಹೆಸರಿನಿಂದ ಎಣ್ಣೆ ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುತ್ತದೆ. ಕರ್ತ ಯೇಸು ಅವನನ್ನು ಎಬ್ಬಿಸುವರು. ಪಾಪಗಳನ್ನು ಮಾಡಿದವನಾಗಿದ್ದರೆ ಅವನು ಕ್ಷಮೆಯನ್ನು ಪಡೆಯುತ್ತಾನೆ. 16 ನೀವು ಸ್ವಸ್ಥವಾಗಬೇಕಾದರೆ, ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು, ಅರಿಕೆಮಾಡಿ, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಪ್ರಾರ್ಥನೆಯು ಶಕ್ತಿಯುತವೂ ಪರಿಣಾಮಕಾರಿಯೂ ಆಗಿರುತ್ತದೆ. 17 ಎಲೀಯನು ನಮ್ಮಂಥ ಮಾನವ ಸ್ವಭಾವವುಳ್ಳವನಾಗಿದ್ದನು. ಅವನು ಮಳೆ ಬರಬಾರದೆಂದು ಆಸಕ್ತಿಯಿಂದ ಪ್ರಾರ್ಥಿಸಲು, ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ. 18 ತಿರುಗಿ ಅವನು ಪ್ರಾರ್ಥನೆಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಿಸಿತು. 19 ಪ್ರಿಯರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆ, 20 ಅವನು ಆ ಪಾಪ ಮಾಡಿದವನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ, ಅವನ ಆತ್ಮವನ್ನು ಮರಣದಿಂದಲೂ ತಪ್ಪಿಸಿ, ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲಿ.

< ಯಾಕೋಬನು ಬರೆದ ಪತ್ರಿಕೆ 5 >