< ಆದಿಕಾಂಡ 27 >

1 ಇಸಾಕನು ಮುದುಕನಾಗಿ ನೋಡುವುದಕ್ಕಾಗದಷ್ಟು ಅವನ ಕಣ್ಣುಗಳು ಮಬ್ಬಾದಾಗ, ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು ಅವನಿಗೆ, “ನನ್ನ ಮಗನೇ,” ಎಂದನು. ಅವನು ಇಸಾಕನಿಗೆ, “ಇದ್ದೇನೆ,” ಎಂದನು. 2 ಆಗ ಇಸಾಕನು, “ಇಗೋ, ಈಗ ನಾನು ಮುದುಕನಾಗಿದ್ದೇನೆ. ನನ್ನ ಸಾವಿನ ದಿನವನ್ನು ಅರಿಯೆನು. 3 ಆದ್ದರಿಂದ ಈಗ ನೀನು ನಿನ್ನ ಆಯುಧಗಳನ್ನೂ, ಬಿಲ್ಲುಬತ್ತಳಿಕೆಯನ್ನೂ, ತೆಗೆದುಕೊಂಡು ಅಡವಿಗೆ ಹೋಗಿ ನನಗೋಸ್ಕರ ಬೇಟೆಯ ಮಾಂಸವನ್ನೂ, 4 ನಾನು ಇಷ್ಟಪಡುವ ರುಚಿಯಾದ ಊಟವನ್ನೂ ಸಿದ್ಧಮಾಡಿ ತೆಗೆದುಕೊಂಡು ಬಾ. ಆಗ ಸಾಯುವುದಕ್ಕಿಂತ ಮುಂಚೆ ನಾನು ನಿನ್ನನ್ನು ಆಶೀರ್ವದಿಸುವಂತೆ ಅದನ್ನು ಊಟಮಾಡುವೆನು,” ಎಂದನು. 5 ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ್ದನ್ನು ರೆಬೆಕ್ಕಳು ಕೇಳಿಸಿಕೊಂಡಳು. ಏಸಾವನು ಬೇಟೆಯಾಡಿ ಅದನ್ನು ತರುವುದಕ್ಕಾಗಿ ಅಡವಿಗೆ ಹೋದನು. 6 ಆಗ ರೆಬೆಕ್ಕಳು ತನ್ನ ಮಗ ಯಾಕೋಬನಿಗೆ, “ನಿನ್ನ ತಂದೆ ನಿನ್ನ ಸಹೋದರ ಏಸಾವನಿಗೆ, 7 ‘ನನಗೋಸ್ಕರ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಂದು, ನಾನು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಮಾಡಿಕೊಂಡು ಬಾ, ಆಗ ನಾನು ಸಾಯುವುದಕ್ಕಿಂತ ಮುಂಚೆ ಊಟಮಾಡಿ, ಯೆಹೋವ ದೇವರ ಸನ್ನಿಧಿಯಲ್ಲಿ ನಿನ್ನನ್ನು ಆಶೀರ್ವದಿಸುವೆನು,’ ಎಂದು ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. 8 ಆದ್ದರಿಂದ ಈಗ ನನ್ನ ಮಗನೇ, ನಾನು ನಿನಗೆ ಆಜ್ಞಾಪಿಸುವ ನನ್ನ ಮಾತಿಗೆ ವಿಧೇಯನಾಗು. 9 ನೀನು ಮಂದೆಯ ಬಳಿಗೆ ಹೋಗಿ, ಅಲ್ಲಿಂದ ಎರಡು ಒಳ್ಳೆಯ ಮೇಕೆಯ ಮರಿಗಳನ್ನು ತೆಗೆದುಕೊಂಡು ಬಾ. ನಿನ್ನ ತಂದೆಗೋಸ್ಕರ ನಾನು ಅವುಗಳನ್ನೂ, ಅವನು ಇಷ್ಟಪಡುವ ರುಚಿಯಾದ ಅಡಿಗೆಯನ್ನೂ ಸಿದ್ಧಮಾಡುತ್ತೇನೆ. 10 ನೀನು ಅದನ್ನು ನಿನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನು ಆಶೀರ್ವದಿಸುವಂತೆ ಊಟಮಾಡಲಿ,” ಎಂದಳು. 11 ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಸಹೋದರ ಏಸಾವನು ರೋಮವುಳ್ಳವನಾಗಿದ್ದಾನೆ, ನಾನು ನುಣುಪಾದ ಚರ್ಮವುಳ್ಳವನಾಗಿದ್ದೇನೆ. 12 ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ, ನನ್ನ ಗತಿಯೇನು? ನಾನು ಅವನಿಗೆ ಮೋಸಮಾಡುವವನಾಗಿ ಕಂಡು ಬಂದು, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು,” ಎಂದನು. 13 ಅವನ ತಾಯಿಯು ಅವನಿಗೆ, “ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ, ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ, ಅವುಗಳನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು. 14 ಆಗ ಯಾಕೋಬನು ಹೋಗಿ ಅವುಗಳನ್ನು ಹಿಡಿದು ತೆಗೆದುಕೊಂಡು ತನ್ನ ತಾಯಿಗೆ ತಂದುಕೊಟ್ಟನು. ಅವನ ತಾಯಿಯು, ಅವನ ತಂದೆಯು ಇಷ್ಟಪಡುವ ರುಚಿಯಾದ ಅಡಿಗೆಯನ್ನು ಸಿದ್ಧಮಾಡಿದಳು. 15 ತರುವಾಯ ರೆಬೆಕ್ಕಳು ಮನೆಯಲ್ಲಿದ್ದ ತನ್ನ ಹಿರಿಯ ಮಗನಾದ ಏಸಾವನ ಒಳ್ಳೆಯ ವಸ್ತ್ರವನ್ನು ತೆಗೆದುಕೊಂಡು, ತನ್ನ ಕಿರಿಯ ಮಗ ಯಾಕೋಬನಿಗೆ ಉಡಿಸಿದಳು. 16 ಇದಲ್ಲದೆ ಮೇಕೆಯ ಮರಿಗಳ ಚರ್ಮಗಳನ್ನು ಅವನ ಕೈಗಳ ಮೇಲೆಯೂ, ನುಣುಪಾದ ಅವನ ಕೊರಳಿನ ಮೇಲೆಯೂ ಕಟ್ಟಿದಳು. 17 ತರುವಾಯ ತಾನು ಸಿದ್ಧಮಾಡಿದ ರುಚಿಯಾದ ಊಟವನ್ನೂ, ರೊಟ್ಟಿಯನ್ನೂ ತನ್ನ ಮಗ ಯಾಕೋಬನ ಕೈಯಲ್ಲಿ ಕೊಟ್ಟಳು. 18 ಆಗ ಅವನು ತನ್ನ ತಂದೆಯ ಬಳಿಗೆ ಹೋಗಿ, “ನನ್ನ ತಂದೆಯೇ,” ಎಂದನು. ಅದಕ್ಕೆ ಅವನು, “ನೀನು ಯಾರು?” ಎಂದನು. 19 ಯಾಕೋಬನು ತನ್ನ ತಂದೆಗೆ, “ನಾನು ನಿನ್ನ ಹಿರಿಯ ಮಗ ಏಸಾವನು. ನೀನು ನನಗೆ ಹೇಳಿದಂತೆ ಮಾಡಿದ್ದೇನೆ, ಎದ್ದು ಕುಳಿತುಕೋ. ನೀನು ನನ್ನನ್ನು ಆಶೀರ್ವದಿಸುವಂತೆ ನನ್ನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು. 20 ಇಸಾಕನು ತನ್ನ ಮಗನಿಗೆ, “ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು?” ಎಂದನು. ಅವನು, “ನಿನ್ನ ದೇವರಾದ ಯೆಹೋವ ದೇವರು ನನ್ನೆದುರಿಗೆ ಅದು ಬರುವಂತೆ ಮಾಡಿದರು,” ಎಂದನು. 21 ಆಗ ಇಸಾಕನು ಯಾಕೋಬನಿಗೆ, “ನನ್ನ ಮಗನೇ, ನೀನೇ ನನ್ನ ಮಗ ಏಸಾವನು ಹೌದೋ, ಅಲ್ಲವೋ ಎಂದು ನಾನು ನಿನ್ನನ್ನು ಮುಟ್ಟಿನೋಡುವಂತೆ ಹತ್ತಿರ ಬಾ,” ಎಂದನು. 22 ಆಗ ಯಾಕೋಬನು ತನ್ನ ತಂದೆ ಇಸಾಕನ ಹತ್ತಿರ ಬಂದನು. ಇಸಾಕನು ಅವನನ್ನು ಮುಟ್ಟಿ, “ಸ್ವರವು ಯಾಕೋಬನ ಸ್ವರವಾಗಿದೆ, ಆದರೆ ಕೈಗಳು ಏಸಾವನ ಕೈಗಳು,” ಎಂದು ಹೇಳಿದನು. 23 ಅವನ ಕೈಗಳು ಅವನ ಅಣ್ಣ ಏಸಾವನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ, ಅವನು ಯಾರೆಂದು ತಿಳಿಯದೆ, ಅವನನ್ನು ಆಶೀರ್ವದಿಸಿದನು. 24 ಮತ್ತೆ ಅವನು, “ನೀನು ನನ್ನ ಮಗ ಏಸಾವನೋ?” ಎಂದಾಗ. ಯಾಕೋಬನು, “ನಾನೇ,” ಎಂದನು. 25 ಆಗ ಇಸಾಕನು, “ನನ್ನ ಮಗನೇ, ನೀನು ತಂದದ್ದನ್ನು ಕೊಡು, ಊಟಮಾಡಿ, ನಿನ್ನನ್ನು ಆಶೀರ್ವದಿಸುವೆನು,” ಎಂದನು. ಆಗ ಯಾಕೋಬನು ಅದನ್ನು ಹತ್ತಿರ ತೆಗೆದುಕೊಂಡು ಬಂದಾಗ ಅವನು ಊಟಮಾಡಿದನು. ಅವನು ದ್ರಾಕ್ಷಾರಸವನ್ನು ತಂದಾಗ, ಅದನ್ನು ಕುಡಿದನು. 26 ಅವನ ತಂದೆ ಇಸಾಕನು ಅವನಿಗೆ, “ನನ್ನ ಮಗನೇ, ಹತ್ತಿರ ಬಂದು ನನಗೆ ಮುದ್ದಿಡು,” ಎಂದನು. 27 ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ, ಅವನನ್ನು ಹೀಗೆ ಆಶೀರ್ವದಿಸಿದನು, “ನನ್ನ ಮಗನ ವಾಸನೆಯು ಯೆಹೋವ ದೇವರು ಆಶೀರ್ವದಿಸಿದ ಹೊಲದ ವಾಸನೆಯಂತೆ ಇದೆ. 28 ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯವನ್ನೂ ಹೊಸ ದ್ರಾಕ್ಷಾರಸವನ್ನೂ ಕೊಡಲಿ. 29 ಜನರು ನಿನಗೆ ಸೇವೆಮಾಡಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. ನಿನ್ನನ್ನು ಶಪಿಸುವವರಿಗೆ ಶಾಪವೂ ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಆಗಲಿ.” 30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ, ಯಾಕೋಬನು ತನ್ನ ತಂದೆ ಇಸಾಕನ ಸಮ್ಮುಖದಿಂದ ಹೊರಟುಹೋದನು. ಆಮೇಲೆ ಅವನ ಸಹೋದರ ಏಸಾವನು ಬೇಟೆಯಿಂದ ಬಂದನು. 31 ಅವನೂ ಸಹ ರುಚಿಯಾದ ಊಟವನ್ನು ಸಿದ್ಧಮಾಡಿ, ತನ್ನ ತಂದೆಯ ಬಳಿಗೆ ತಂದು, “ನನ್ನ ತಂದೆಯೇ, ಎದ್ದು ನನ್ನನ್ನು ಆಶೀರ್ವದಿಸುವಂತೆ ನಿನ್ನ ಮಗನ ಬೇಟೆಯ ಮಾಂಸವನ್ನು ಊಟಮಾಡು,” ಎಂದನು. 32 ಅವನ ತಂದೆ ಇಸಾಕನು ಅವನಿಗೆ, “ನೀನು ಯಾರು?” ಎಂದಾಗ. ಅವನು, “ನಾನು ನಿನ್ನ ಚೊಚ್ಚಲ ಮಗ ಏಸಾವನು,” ಎಂದನು. 33 ಆಗ ಇಸಾಕನು ಬಹಳವಾಗಿ ನಡುಗುತ್ತಾ, “ನೀನು ಬರುವುದಕ್ಕಿಂತ ಮೊದಲು ಬೇಟೆಯಾಡಿ ನನಗೆ ಊಟ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವುದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವದಿಸಿದೆನು. ಅವನು ಆಶೀರ್ವಾದ ಹೊಂದಿರುವನು,” ಎಂದನು. 34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ, ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ, “ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು,” ಎಂದನು. 35 ಇಸಾಕನು, “ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡಿದ್ದಾನೆ,” ಎಂದನು. 36 ಅದಕ್ಕೆ ಏಸಾವನು, “ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ? ಅವನು ನನ್ನನ್ನು ಎರಡು ಸಾರಿ ವಂಚಿಸಿದ್ದಾನೆ. ಅವನು ನನ್ನ ಚೊಚ್ಚಲತನವನ್ನು ತೆಗೆದುಕೊಂಡಿದ್ದಾನೆ. ಇಗೋ, ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸಲಿಲ್ಲವೋ?” ಎಂದನು. 37 ಇಸಾಕನು ಉತ್ತರವಾಗಿ ಏಸಾವನಿಗೆ, “ಅವನನ್ನು ನಿನಗೆ ದೊರೆಯನನ್ನಾಗಿ ನೇಮಿಸಿದ್ದೇನೆ, ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕರನ್ನಾಗಿ ಕೊಟ್ಟು, ಧಾನ್ಯದಿಂದಲೂ ಹೊಸ ದ್ರಾಕ್ಷಾರಸದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ?” ಎಂದನು. 38 ಏಸಾವನು ತನ್ನ ತಂದೆಗೆ, “ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಆಶೀರ್ವದಿಸು,” ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು. 39 ಆಗ ಅವನ ತಂದೆ ಇಸಾಕನು ಉತ್ತರವಾಗಿ ಅವನಿಗೆ ಹೀಗೆ ಹೇಳಿದನು, “ನಿನ್ನ ನಿವಾಸವು ಭೂಮಿಯ ಐಶ್ವರ್ಯದಿಂದಲೂ ಮೇಲಿನ ಆಕಾಶದಿಂದ ಬೀಳುವ ಮಂಜಿನಿಂದಲೂ ಇರುವುದು. 40 ನೀನು ಖಡ್ಗದಿಂದಲೇ ಬದುಕುವೆ, ನಿನ್ನ ಸಹೋದರರನ್ನು ನೀನು ಸೇವೆಮಾಡುವೆ, ಆದರೆ ನಿನ್ನ ತಾಳ್ಮೆ ತಪ್ಪಿದಾಗ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದುಹಾಕುವೆ.” 41 ಏಸಾವನು ತನ್ನ ತಂದೆಯು ಅವನಿಗೆ ಕೊಟ್ಟ ಆಶೀರ್ವಾದಕ್ಕೋಸ್ಕರ ಯಾಕೋಬನನ್ನು ದ್ವೇಷಿಸಿದನು. ಏಸಾವನು, “ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸಮೀಪವಾಗಿವೆ. ತರುವಾಯ ನಾನು ನನ್ನ ಸಹೋದರ ಯಾಕೋಬನನ್ನು ಕೊಲ್ಲುವೆನು,” ಎಂದು ತನ್ನಲ್ಲಿಯೇ ಅಂದುಕೊಂಡನು. 42 ರೆಬೆಕ್ಕಳಿಗೆ ತನ್ನ ಹಿರಿಯ ಮಗ ಏಸಾವನ ಬಗ್ಗೆ ಗ್ರಹಿಸಿದಾಗ, ಆಕೆಯು ತನ್ನ ಕಿರಿಯ ಮಗ ಯಾಕೋಬನನ್ನು ಕರೆದು ಅವನಿಗೆ, “ನಿನ್ನ ಸಹೋದರ ಏಸಾವನು ನಿನ್ನನ್ನು ಕೊಂದು, ತನ್ನನ್ನು ಸಂತೈಸಿಕೊಳ್ಳುವುದಕ್ಕಿದ್ದಾನೆ. 43 ಆದ್ದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು. ಎದ್ದು ಹಾರಾನಿನಲ್ಲಿರುವ ನನ್ನ ಸಹೋದರ ಲಾಬಾನನ ಬಳಿಗೆ ಓಡಿಹೋಗು. 44 ನಿನ್ನ ಸಹೋದರನ ಕೋಪವು ತೀರುವವರೆಗೆ ಕೆಲವು ದಿವಸಗಳು ಅಲ್ಲೇ ಇರು. 45 ನಿನ್ನ ಕಡೆಗಿರುವ ನಿನ್ನ ಸಹೋದರನ ಕೋಪವು ತೀರಿಹೋಗಿ, ನೀನು ಅವನಿಗೆ ಮಾಡಿದ್ದನ್ನು ಅವನು ಮರೆಯುವವರೆಗೆ ನೀನು ಅಲ್ಲೇ ಇರು. ತರುವಾಯ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುವೆನು. ಒಂದೇ ದಿನದಲ್ಲಿ ನಾನು ನಿಮ್ಮಿಬ್ಬರನ್ನೂ ಕಳೆದುಕೊಳ್ಳುವುದು ಏಕೆ?” ಎಂದಳು. 46 ರೆಬೆಕ್ಕಳು ಇಸಾಕನಿಗೆ, “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ. ಇಂಥ ಹಿತ್ತಿಯ ಸ್ತ್ರೀಯರಲ್ಲಿ ಒಬ್ಬಳನ್ನು ತನ್ನ ಹೆಂಡತಿಯಾಗಿ ಯಾಕೋಬನು ಮದುವೆ ಮಾಡಿಕೊಂಡರೆ, ನಾನು ಬದುಕಿರುವುದು ವ್ಯರ್ಥ,” ಎಂದಳು.

< ಆದಿಕಾಂಡ 27 >