< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 1 >

1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು, ನಮಗೆ ರಕ್ಷಕ ಆಗಿರುವ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞಾನುಸಾರ, 2 ನಂಬಿಕೆಯಲ್ಲಿ ನನ್ನ ನಿಜ ಪುತ್ರನಾಗಿರುವ ತಿಮೊಥೆಯನಿಗೆ ಬರೆಯುವುದು: ನಮ್ಮ ತಂದೆ ದೇವರಿಂದಲೂ, ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ದೊರೆಯಲಿ. 3 ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸದಲ್ಲಿ ಇದ್ದುಕೊಂಡು ಸುಳ್ಳು ಬೋಧನೆಯನ್ನು ಉಪದೇಶಿಸಬಾರದೆಂತಲೂ 4 ಕಟ್ಟುಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಕೆಲವರಿಗೆ ಆಜ್ಞಾಪಿಸಬೇಕೆಂದು ನಾನು ನಿನಗೆ ಖಂಡಿತವಾಗಿ ಹೇಳಿದಂತೆ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆಯಿಂದುಂಟಾಗುವ ದೇವರ ಕಾರ್ಯಭಾರವನ್ನು ವೃದ್ಧಿ ಮಾಡುವುದೇ ಇಲ್ಲ. 5 ಈ ಆಜ್ಞೆಯ ಗುರಿಯು ಪ್ರೀತಿಯೇ ಆಗಿರುತ್ತದೆ. ಶುದ್ಧ ಹೃದಯ, ಒಳ್ಳೆಯ ಮನಸ್ಸಾಕ್ಷಿ ಹಾಗೂ ನಿಷ್ಕಪಟವಾದ ನಂಬಿಕೆಯಿಂದ ಈ ಪ್ರೀತಿಯು ಹುಟ್ಟುತ್ತದೆ. 6 ಕೆಲವರು ಇವುಗಳನ್ನು ಬಿಟ್ಟುಬಿಟ್ಟು ವ್ಯರ್ಥವಾದ ಮಾತುಗಳಿಗೆ ತಿರುಗಿಕೊಂಡಿದ್ದಾರೆ. 7 ಅವರು ನಿಯಮದ ಬೋಧಕರಾಗಿರಲು ಬಯಸಿದರೂ ತಾವು ಹೇಳುವುದನ್ನಾಗಲಿ, ತಾವು ಸ್ಥಾಪಿಸುವುದನ್ನಾಗಲಿ ಏನೆಂದು ದೃಢನಿಶ್ಚಯವಿಲ್ಲದವರಾಗಿದ್ದಾರೆ. 8 ಒಬ್ಬನು ನಿಯಮವನ್ನು ಸರಿಯಾಗಿ ಉಪಯೋಗಿಸುವುದಾದರೆ ಅದು ಒಳ್ಳೆಯದೆಂದು ನಾವು ಬಲ್ಲೆವು. 9 ನಿಯಮವು ನೀತಿವಂತರಿಗೋಸ್ಕರ ಅಲ್ಲ. ಬದಲಿಗೆ ಅದು ಅವಿಧೇಯರಿಗೆ, ಅಕ್ರಮಗಾರರಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಅಪವಿತ್ರರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ, ಕೊಲೆಗಾರರಿಗೆ, 10 ಜಾರರಿಗೆ, ಸಲಿಂಗಕಾಮಿಗಳಿಗೆ, ನರಚೋರರಿಗೆ, ಸುಳ್ಳುಗಾರರಿಗೆ, ಸುಳ್ಳಾಣೆಯಿಡುವವರಿಗೆ, ಸ್ವಸ್ಥಬೋಧನೆಯನ್ನು ವಿರೋಧಿಸುವ ಬೇರೆ ಏನಾದರೂ ಇದ್ದರೆ ಮೋಶೆಯ ನಿಯಮವು ಇಂಥವವರಿಗಾಗಿ ಕೊಡಲಾಗಿದೆ ಎಂದು ನಮಗೆ ತಿಳಿದಿದೆ. 11 ಈ ಬೋಧನೆಯು ಭಾಗ್ಯವಂತರಾದ ದೇವರ ಮಹಿಮೆಯ ಸುವಾರ್ತೆಗೆ ಅನುರೂಪವಾಗಿದೆ. ಈ ಸುವಾರ್ತೆಯು ನನ್ನ ವಶಕ್ಕೆ ಕೊಡಲಾಗಿದೆ. 12 ನನ್ನನ್ನು ಬಲಪಡಿಸುವ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವು ನನ್ನನ್ನು ನಂಬಿಗಸ್ತನೆಂದು ಎಣಿಸಿ ಸೇವೆಗೆ ನೇಮಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 13 ಮೊದಲು ದೇವದೂಷಕನೂ ಹಿಂಸಕನೂ ಅಪಮಾನ ಮಾಡುವವನೂ ಆಗಿದ್ದ ನಾನು ಅಜ್ಞಾನಿಯಾಗಿ ಅಪನಂಬಿಕೆಯಲ್ಲಿ ಹಾಗೆ ವರ್ತಿಸಿದ್ದರೂ ದೇವರು ನನಗೆ ಕರುಣೆತೋರಿದರು. 14 ಆದರೆ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಕೃಪೆಯು ನನಗೆ ಧಾರಾಳವಾಗಿ ಸುರಿಯಲಾಯಿತು. ಮಾತ್ರವಲ್ಲದೆ ವಿಶ್ವಾಸ ಪ್ರೀತಿಯೊಂದಿಗೆ ಅತ್ಯಧಿಕವಾಯಿತು. 15 ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದರು, ಎಂಬ ವಾಕ್ಯವು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಆದರೂ ಇನ್ನು ಮುಂದೆ ನಿತ್ಯಜೀವಕ್ಕೆ ತಮ್ಮ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಾಗಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನಲ್ಲಿ ತಮ್ಮ ಪೂರ್ಣ ಸಹನೆಯನ್ನು ತೋರ್ಪಡಿಸಿರುವುದಕ್ಕಾಗಿ ನನಗೆ ಕರುಣೆ ದೊರೆಯಿತು. (aiōnios g166) 17 ನಿತ್ಯವಾದ ಅರಸರೂ ಅಮರರೂ ಅದೃಶ್ಯರೂ ಆಗಿರುವ ಜ್ಞಾನಿಯಾದ ಒಬ್ಬರೇ ದೇವರಿಗೆ ಯುಗಯುಗಾಂತರಗಳಲ್ಲಿಯೂ ಘನವೂ ಮಹಿಮೆಯೂ ಉಂಟಾಗಲಿ. ಆಮೆನ್. (aiōn g165) 18 ಮಗನಾದ ತಿಮೊಥೆಯನೇ, ನಿನ್ನ ವಿಷಯವಾಗಿ ಮೊದಲು ಉಂಟಾದ ಪ್ರವಾದನೆಗಳ ಪ್ರಕಾರವೇ ನೀನು ಅವುಗಳಿಂದ ಒಳ್ಳೆಯ ಯುದ್ಧವನ್ನು ನಡಿಸಬೇಕೆಂದು ಈ ಆಜ್ಞೆಯನ್ನು ನಿನಗೆ ಒಪ್ಪಿಸುತ್ತೇನೆ. 19 ನಂಬಿಗಸ್ತನೂ ಒಳ್ಳೆಯ ಮನಸ್ಸಾಕ್ಷಿಯುಳ್ಳವನೂ ಆಗಿರು. ಕೆಲವರು ಈ ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ಹಡಗನ್ನು ಒಡೆದವರ ಹಾಗೆ ಇದ್ದಾರೆ. 20 ಹುಮೆನಾಯನೂ ಅಲೆಕ್ಸಾಂಡರನೂ ಅಂಥವರಾಗಿದ್ದಾರೆ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನಿಗೆ ಒಪ್ಪಿಸಿಬಿಟ್ಟಿದ್ದೇನೆ.

< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 1 >