< ಪೇತ್ರನು ಬರೆದ ಮೊದಲನೆಯ ಪತ್ರಿಕೆ 1 >

1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಇವುಗಳಲ್ಲೆಲ್ಲಾ ಚದರಿರುವ, ದೇವರಿಂದ ಆಯ್ಕೆಯಾದ ಪ್ರವಾಸಿಗಳಿಗೆ, 2 ಪವಿತ್ರಾತ್ಮ ದೇವರ ಕಾರ್ಯದಿಂದ ಪರಿಶುದ್ಧರಾಗಿ, ಯೇಸುಕ್ರಿಸ್ತರಿಗೆ ವಿಧೇಯರಾಗಲು ಅವರ ರಕ್ತದಿಂದ ಪ್ರೋಕ್ಷಿತರಾಗುವುದಕ್ಕೂ ನಮ್ಮ ತಂದೆ ದೇವರ ಪೂರ್ವಜ್ಞಾನಾನುಸಾರವಾಗಿ ಆಯ್ಕೆಯಾದವರಿಗೆ ಬರೆಯುವುದು: ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ. 3 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯೂ ದೇವರೂ ಆಗಿರುವವರಿಗೆ ಸ್ತೋತ್ರವಾಗಲಿ. ಅವರು ಕ್ರಿಸ್ತ ಯೇಸುವನ್ನು ತಮ್ಮ ಮಹಾ ಕರುಣಾನುಸಾರವಾಗಿ, ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಜೀವಕರವಾದ ನಿರೀಕ್ಷೆಗೆ ನಮ್ಮನ್ನು ತಿರುಗಿ ಹುಟ್ಟಿಸಿದ್ದಾರೆ. 4 ಈ ನಿರೀಕ್ಷೆಯು ಲಯ, ಕಳಂಕ, ಕ್ಷಯಗಳಿಲ್ಲದ ಬಾಧ್ಯತೆಯಾಗಿದೆ. ಈ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿದೆ. 5 ಅಂತ್ಯಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ದೇವರು ನಿಮ್ಮ ನಂಬಿಕೆಯ ಮುಖಾಂತರ ನಿಮ್ಮನ್ನು ತಮ್ಮ ಶಕ್ತಿಯಿಂದ ಕಾಯುತ್ತಾರೆ. 6 ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ. 7 ಬಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವುದುಂಟಷ್ಟೆ. ಬಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಿಷ್ಕಪಟ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವುದು. 8 ನೀವು ಕ್ರಿಸ್ತ ಯೇಸುವನ್ನು ನೋಡಲಿಲ್ಲವಾದರೂ ಅವರನ್ನು ಪ್ರೀತಿಸುತ್ತೀರಿ. ನೀವು ಈಗ ಅವರನ್ನು ಕಾಣದಿದ್ದರೂ ಅವರಲ್ಲಿ ನಂಬಿಕೆಯಿಟ್ಟು ವ್ಯಕ್ತಪಡಿಸಲಾಗದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ. 9 ಏಕೆಂದರೆ ನಿಮ್ಮ ನಂಬಿಕೆಯ ಅಂತಿಮ ಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿದ್ದೀರಿ. 10 ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು, ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು. 11 ಅವರಲ್ಲಿದ್ದ ಕ್ರಿಸ್ತ ಯೇಸುವಿನ ಆತ್ಮ, ಕ್ರಿಸ್ತ ಯೇಸುವಿಗೆ ಸಂಭವಿಸಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಗಳನ್ನೂ ಪ್ರವಾದಿಸಿದಾಗ, ಅದರ ಸಮಯ ಸಂದರ್ಭಗಳನ್ನು ಕಂಡುಹಿಡಿಯಲು ಪರಿಶೋಧನೆ ಮಾಡಿದರು. 12 ತಮಗೋಸ್ಕರವಲ್ಲ ಆದರೆ ನಿಮಗೋಸ್ಕರ ಸೇವೆಮಾಡಿದರೆಂದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಿದವು ಎಂಬ ವರ್ತಮಾನವು, ಪರಲೋಕದಿಂದ ಕಳುಹಿಸಲಾದ ಪವಿತ್ರಾತ್ಮ ದೇವರಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ಪ್ರಸಿದ್ಧಿಮಾಡಲಾಗಿದೆ. ದೇವದೂತರು ಸಹ ಈ ಸಂಗತಿಗಳನ್ನು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುತ್ತಾರೆ. 13 ಆದ್ದರಿಂದ, ನೀವು ನಿಮ್ಮ ಮನಸ್ಸನ್ನು ಸಿದ್ಧಮಾಡಿಕೊಂಡು, ಸ್ವಸ್ಥಚಿತ್ತರಾಗಿದ್ದು ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಅಂತ್ಯದವರೆಗೆ ಇಡಿರಿ. 14 ವಿಧೇಯರಾದ ಮಕ್ಕಳಿಗೆ ತಕ್ಕಂತೆ, ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮ್ಮ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರಬೇಡಿರಿ. 15 ಆದರೆ ನಿಮ್ಮನ್ನು ಕರೆದಿರುವ ದೇವರು ಪರಿಶುದ್ಧರಾಗಿರುವ ಪ್ರಕಾರವೇ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. 16 ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು,” ಎಂದು ಪವಿತ್ರ ವೇದದಲ್ಲಿ ಬರೆದಿದೆ. 17 ಪ್ರತಿಯೊಬ್ಬನ ಕೆಲಸವನ್ನು ಪಕ್ಷಪಾತವಿಲ್ಲದೆ ತೀರ್ಪುಮಾಡುವ ದೇವರನ್ನು ನೀವು ತಂದೆಯೆಂದು ಬೇಡಿಕೊಳ್ಳುವವರಾಗಿದ್ದು ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ. 18 ನಿಮ್ಮ ಪೂರ್ವಿಕರಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿ, ಬಂಗಾರದಿಂದಲ್ಲ. 19 ಅದು ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯಾಗಿರುವ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತದಿಂದಲೇ. 20 ಅವರು ಜಗದುತ್ಪತ್ತಿಗೆ ಮೊದಲೇ ನೇಮಕಗೊಂಡು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷರಾದರು. 21 ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿ ಅವರಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಕ್ರಿಸ್ತ ಯೇಸುವಿನ ಮೂಲಕ ವಿಶ್ವಾಸವಿಟ್ಟಿದ್ದೀರಿ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿರಲಿ. 22 ನೀವು ಕ್ರಿಸ್ತ ಯೇಸುವಿನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡಿದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ. 23 ಏಕೆಂದರೆ ನೀವು ತಿರುಗಿ ಹುಟ್ಟಿದವರಾಗಿದ್ದೀರಲ್ಲಾ! ಆ ಜನ್ಮವು ನಾಶವಾಗುವ ಬೀಜದಿಂದಲ್ಲ. ಆದರೆ ನಾಶವಾಗದಂಥದ್ದರಿಂದ ಸಜೀವವಾದ ಸದಾಕಾಲವಿರುವ ದೇವರ ವಾಕ್ಯದ ಮೂಲಕ ಆಗಿದೆ. (aiōn g165) 24 “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯರ ಪ್ರಭಾವವೆಲ್ಲಾ ಹೊಲದ ಹೂವಿನಂತಿದೆ. ಹುಲ್ಲು ಒಣಗಿಹೋಗುವುದು. ಅದರ ಹೂವು ಉದುರಿ ಹೋಗುವುದು. 25 ಕರ್ತದೇವರ ವಾಕ್ಯವಾದರೋ ಸದಾಕಾಲ ಇರುವುದು.” ಇದೇ ನಿಮಗೆ ಸಾರಲಾದ ಸುವಾರ್ತಾವಾಕ್ಯವು. (aiōn g165)

< ಪೇತ್ರನು ಬರೆದ ಮೊದಲನೆಯ ಪತ್ರಿಕೆ 1 >