< ಪ್ರಕಟಣೆ 4 >

1 ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, “ಇಲ್ಲಿಗೆ ಏರಿ ಬಾ, ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು. 2 ಕೂಡಲೆ ನಾನು ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. 3 ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು. 4 ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5 ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. 7 ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. 8 ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ, “ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು, ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು. 9 ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, (aiōn g165) 10 ೧೦ ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು. (aiōn g165)

< ಪ್ರಕಟಣೆ 4 >