< ಕೀರ್ತನೆಗಳು 96 >

1 ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. 2 ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ. 3 ಜನಾಂಗಗಳಲ್ಲಿ ಆತನ ಘನತೆಯನ್ನೂ, ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. 4 ಯೆಹೋವನು ದೊಡ್ಡವನೂ, ಬಹು ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವರುಗಳಲ್ಲಿ ಆತನೇ ಮಹಾದೇವರು. 5 ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು. 6 ಆತನ ಸಾನ್ನಿಧ್ಯದಲ್ಲಿ ಘನತೆ ಮತ್ತು ಮಹಿಮೆಗಳೂ, ಆತನ ಪವಿತ್ರಾಲಯದಲ್ಲಿ ಬಲ ಮತ್ತು ಸೌಂದರ್ಯಗಳೂ ಇರುತ್ತವೆ. 7 ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ, ಯೆಹೋವನವೇ, ಎಂದು ಹೇಳಿ ಆತನನ್ನು ಘನಪಡಿಸಿರಿ. 8 ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ; ಕಾಣಿಕೆಯೊಡನೆ ಆತನ ಅಂಗಳಗಳಿಗೆ ಬನ್ನಿರಿ. 9 ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ; ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಭಯಭಕ್ತಿಯಿಂದಿರಿ. 10 ೧೦ ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ; ಸರ್ವರಿಗೂ ನ್ಯಾಯಾನುಸಾರವಾಗಿ ತೀರ್ಪುಕೊಡುವನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ. 11 ೧೧ ಯೆಹೋವನ ಮುಂದೆ ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ. 12 ೧೨ ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ವನದ ಎಲ್ಲಾ ಮರಗಳು ಉತ್ಸಾಹಧ್ವನಿ ಮಾಡಲಿ. 13 ೧೩ ಆತನು ಬರುತ್ತಾನೆ; ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ. ಆತನು ಲೋಕಕ್ಕೆ ನೀತಿಗನುಸಾರವಾಗಿಯೂ, ಜನಾಂಗಗಳಿಗೆ ಸತ್ಯತೆಯಿಂದಲೂ ನ್ಯಾಯತೀರಿಸುವನು.

< ಕೀರ್ತನೆಗಳು 96 >