< ಕೀರ್ತನೆಗಳು 93 >

1 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಆತನು ಮಹಿಮಾ ವಸ್ತ್ರವನ್ನು ಧರಿಸಿದ್ದಾನೆ, ಶೌರ್ಯವನ್ನು ನಡುಕಟ್ಟನ್ನಾಗಿ ಬಿಗಿದಿದ್ದಾನೆ; ಹೌದು, ಭೂಲೋಕವು ಸ್ಥಿರವಾಗಿರುವುದು ಅದು ಕದಲುವುದಿಲ್ಲ. 2 ಅನಾದಿಯಿಂದ ನಿನ್ನ ಸಿಂಹಾಸನವು ಸ್ಥಿರವಾಗಿದೆ; ಯುಗಯುಗಾಂತರದಿಂದಲೂ ನೀನು ಇರುವಿ. 3 ಯೆಹೋವನೇ, ನದಿಗಳು ಮೊರೆದವು, ನದಿಗಳು ಭೋರ್ಗರೆದವು; ನದಿಗಳು ಘೋಷಿಸುತ್ತವೆ. 4 ಜಲರಾಶಿಗಳ ಘೋಷಕ್ಕಿಂತಲೂ, ಮಹಾತರಂಗಗಳ ಗರ್ಜನೆಗಿಂತಲೂ, ಉನ್ನತದಲ್ಲಿರುವ ಯೆಹೋವನ ಮಹಿಮೆಯು ಗಾಂಭೀರ್ಯವುಳ್ಳದ್ದು. 5 ಯೆಹೋವನೇ, ನಿನ್ನ ಕಟ್ಟಳೆಗಳು ಬಹುಖಂಡಿತವಾಗಿವೆ; ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.

< ಕೀರ್ತನೆಗಳು 93 >