< ಕೀರ್ತನೆಗಳು 92 >

1 ಕೀರ್ತನೆ; ಸಬ್ಬತ್ ದಿನದ ಗೀತೆ. ಯೆಹೋವನೇ, ನಿನ್ನನ್ನು ಕೊಂಡಾಡುವುದೂ, ಪರಾತ್ಪರನಾದ ದೇವರೇ, ನಿನ್ನ ನಾಮವನ್ನು ಸಂಕೀರ್ತಿಸುವುದೂ ಯುಕ್ತವಾಗಿದೆ. 2 ವೀಣೆ, ಸ್ವರಮಂಡಲಗಳಿಂದಲೂ, ಕಿನ್ನರಿಯ ಘನಸ್ವರದಿಂದಲೂ, 3 ಹೊತ್ತಾರೆಯಲ್ಲಿ ನಿನ್ನ ಪ್ರೇಮವನ್ನೂ, ರಾತ್ರಿಯಲ್ಲಿ ನಿನ್ನ ಸತ್ಯವನ್ನೂ ವರ್ಣಿಸುವುದು ಉಚಿತವಾಗಿದೆ. 4 ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದಿ; ನಿನ್ನ ಕೆಲಸಗಳಿಗಾಗಿ ಉತ್ಸಾಹಧ್ವನಿ ಮಾಡುತ್ತೇನೆ. 5 ಯೆಹೋವನೇ, ನಿನ್ನ ಕೃತ್ಯಗಳು ಎಷ್ಟೋ ಶ್ರೇಷ್ಠವಾಗಿವೆ; ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ. 6 ಪಶುಪ್ರಾಯನು ಅರಿಯನು; ಮೂರ್ಖನು ಇದನ್ನು ಗ್ರಹಿಸಿಕೊಳ್ಳನು. 7 ದುಷ್ಟರು ಹುಲ್ಲಿನಂತೆ ಬೆಳೆಯುವುದೂ, ಕೆಡುಕರು ಹೂವಿನಂತೆ ಮೆರೆಯುವುದೂ ತೀರಾ ಹಾಳಾಗುವುದಕ್ಕಾಗಿಯೇ. 8 ಯೆಹೋವನೇ, ನೀನಾದರೋ ಸದಾ ಉನ್ನತಸ್ಥಾನದಲ್ಲಿರುತ್ತೀ. 9 ಯೆಹೋವನೇ, ಇಗೋ ನಿನ್ನ ಶತ್ರುಗಳು! ಅವರೆಲ್ಲಾ ನಾಶವಾಗುತ್ತಿದ್ದಾರೆ. ಅಧರ್ಮಿಗಳೆಲ್ಲಾ ಚದರಿಹೋಗುವರು. 10 ೧೦ ಆದರೆ ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಂತೆ ಎತ್ತಿದ್ದಿ; ಚೈತನ್ಯತೈಲದಿಂದ ನನ್ನನ್ನು ಅಭಿಷೇಕಿಸಿದ್ದಿ. 11 ೧೧ ನನ್ನ ಶತ್ರುಗಳಿಗುಂಟಾದ ದುರ್ಗತಿಯನ್ನು ಕಣ್ಣಾರೆ ಕಂಡಿದ್ದೇನೆ; ನನಗೆ ವಿರುದ್ಧವಾಗಿ ಎದ್ದವರ ವಿಪತ್ತನ್ನು ಕಿವಿಯಾರೆ ಕೇಳಿದ್ದೇನೆ. 12 ೧೨ ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು; ಲೆಬನೋನಿನ ದೇವದಾರು ವೃಕ್ಷದ ಹಾಗೆ ವೃದ್ಧಿಯಾಗುವರು. 13 ೧೩ ಯೆಹೋವನ ಆಲಯದಲ್ಲಿ ಸಸಿಗಳಂತೆ ನೆಡಲ್ಪಟ್ಟವರು, ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು. 14 ೧೪ ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು. 15 ೧೫ ಹೀಗೆ ಅವರು ಯೆಹೋವನ ಸತ್ಯಸಂಧತೆಗೆ ದೃಷ್ಟಾಂತರಾಗಿರುವರು. ಆತನೇ ನನ್ನ ಬಂಡೆಯು; ಆತನು ನಿರ್ವಂಚಕನು.

< ಕೀರ್ತನೆಗಳು 92 >