< ಕೀರ್ತನೆಗಳು 87 >

1 ಕೋರಹೀಯರ ಕೀರ್ತನೆ; ಗೀತೆ. ಯೆಹೋವನು ಸ್ಥಾಪಿಸಿದ ಪಟ್ಟಣವು ಪರಿಶುದ್ಧ ಪರ್ವತದ ಮೇಲಿದೆ. 2 ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ, ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ. 3 ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ, 4 “ರಹಬ, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು” ಎಂಬುದೇ. 5 ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನಾದ ದೇವರು ತಾನೇ ಸ್ಥಿರಪಡಿಸುವನು. 6 ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ, “ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು” ಎಂದು ಬರೆಯುವನು. (ಸೆಲಾ) 7 ಇವರು ಹಾಡುತ್ತಾ, ಕುಣಿಯುತ್ತಾ, “ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ” ಎಂದು ಹೇಳುವರು.

< ಕೀರ್ತನೆಗಳು 87 >