< ಕೀರ್ತನೆಗಳು 85 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ. ಯೆಹೋವನೇ, ನಿನ್ನ ದೇಶವನ್ನು ಕಟಾಕ್ಷಿಸಿದ್ದಿ; ಯಾಕೋಬ್ಯರನ್ನು ಸೆರೆಯಿಂದ ಬಿಡಿಸಿ ಬರಮಾಡಿದ್ದಿ. 2 ನಿನ್ನ ಪ್ರಜೆಯ ದ್ರೋಹವನ್ನು ಕ್ಷಮಿಸಿದ್ದಿ; ಅವರ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿದ್ದಿ. (ಸೆಲಾ) 3 ನಿನ್ನ ರೌದ್ರವನ್ನೆಲ್ಲಾ ತೊರೆದಿದ್ದಿ; ನಿನ್ನ ಉಗ್ರಕೋಪವನ್ನು ಬಿಟ್ಟಿದ್ದಿ. 4 ನಮ್ಮನ್ನು ರಕ್ಷಿಸುವ ದೇವರೇ, ನಮಗೆ ಅಭಿಮುಖನಾಗು; ನಮ್ಮ ವಿಷಯದಲ್ಲಿ ಬೇಸರವನ್ನು ಬಿಡು. 5 ಸದಾಕಾಲವೂ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವೆಯಾ? ತಲತಲಾಂತರಗಳಿಗೂ ಕೋಪವನ್ನು ಬೆಳೆಸುವಿಯೋ? 6 ನಿನ್ನ ಪ್ರಜೆಯಾದ ನಾವು ನಿನ್ನಲ್ಲಿ ಆನಂದಿಸುವಂತೆ, ನೀನು ನಮ್ಮನ್ನು ಪುನಃ ಉಜ್ಜೀವಿಸುವುದಿಲ್ಲವೋ? 7 ಯೆಹೋವನೇ, ನಿನ್ನ ಕೃಪೆಯನ್ನು ನಮಗೆ ತೋರಿಸು; ನಿನ್ನ ರಕ್ಷಣೆಯನ್ನು ನಮಗೆ ಅನುಗ್ರಹಿಸು. 8 ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ. 9 ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು. 10 ೧೦ ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು; ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು. 11 ೧೧ ಸತ್ಯತೆಯು ಭೂಮಿಯಿಂದ ಹುಟ್ಟುವುದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. 12 ೧೨ ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವುದು. 13 ೧೩ ನೀತಿಯು ಆತನ ಮುಂದೆ ಹೋಗುತ್ತಾ, ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.

< ಕೀರ್ತನೆಗಳು 85 >