< ಕೀರ್ತನೆಗಳು 82 >

1 ಆಸಾಫನ ಕೀರ್ತನೆ. ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ, ದೇವರುಗಳೆಂದು ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ. 2 “ನೀವು ಅನ್ಯಾಯವಾಗಿ ತೀರ್ಪುಕೊಡುವುದೂ, ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ? (ಸೆಲಾ) 3 ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ, ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ. 4 ಕುಗ್ಗಿದವರನ್ನು, ಬಡವರನ್ನು ದುಷ್ಟರ ಕೈಯಿಂದ ಬಿಡಿಸಿ ರಕ್ಷಿಸಿರಿ.” 5 ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ. 6 “ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು, 7 ಆದರೂ ನರರಂತೆ ಸತ್ತೇ ಹೋಗುವಿರಿ, ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದು ಹೋಗುವಿರಿ” ಎಂದು ನಾನು ಹೇಳಿದೆನು. 8 ದೇವರೇ, ಏಳು; ಭೂಲೋಕದಲ್ಲಿ ನ್ಯಾಯವನ್ನು ಸ್ಥಾಪಿಸು. ನೀನು ಎಲ್ಲಾ ಜನಾಂಗಗಳ ಒಡೆಯನು ಅಲ್ಲವೋ?

< ಕೀರ್ತನೆಗಳು 82 >