< ಕೀರ್ತನೆಗಳು 77 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ಆಸಾಫನ ಕೀರ್ತನೆ. ದೇವರಿಗೆ ಮೊರೆಯಿಡುವೆನು, ಕೂಗಿ ಮೊರೆಯಿಡುವೆನು; ಆತನು ನನಗೆ ಕಿವಿಗೊಡುವನು. 2 ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು; ಬೇಸರವಿಲ್ಲದೆ ರಾತ್ರಿಯೆಲ್ಲಾ ಕೈಚಾಚಿಕೊಂಡೇ ಇದ್ದೆನು. ನನ್ನ ಮನಸ್ಸು ಶಾಂತಿಯನ್ನು ಹೊಂದಲೊಲ್ಲದೆ ಇತ್ತು. 3 ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು; ಮನಗುಂದಿದವನಾಗಿಯೇ ಹಂಬಲಿಸುವೆನು. 4 ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ. ತಳಮಳಗೊಂಡು ಮಾತನಾಡಲಾರದೆ ಇದ್ದೆನು. 5 ಹಳೆಯ ದಿನಗಳನ್ನೂ, ಪುರಾತನ ವರ್ಷಗಳನ್ನೂ ಜ್ಞಾಪಕಮಾಡಿಕೊಂಡೆನು. 6 ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಪಿಸಿಕೊಳ್ಳುವೆನು, ನನ್ನ ಆಂತರ್ಯದಲ್ಲಿ ಮಾತನಾಡಿಕೊಳ್ಳುವೆನು ಅಂದುಕೊಂಡು ನನ್ನ ಮನಸ್ಸಿನಲ್ಲಿ, 7 “ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವುದಿಲ್ಲವೋ? 8 ಆತನ ಕೃಪಾವಾತ್ಸಲ್ಯವು ನಿಂತೇ ಹೋಯಿತೋ? ಆತನ ವಾಗ್ದಾನವು ಎಂದೆಂದಿಗೂ ಬಿದ್ದೇ ಹೋಯಿತೋ? 9 ದೇವರು ದಯೆ ತೋರಿಸಲಿಕ್ಕೆ ಮರೆತುಬಿಟ್ಟನೋ? ಕೋಪದಿಂದ ತನ್ನ ಕರಳುಗಳನ್ನು ಬಿಗಿಹಿಡಿದಿದ್ದಾನೋ?” ಎಂದು ಅಂದುಕೊಂಡೆನು (ಸೆಲಾ) 10 ೧೦ ಪುನಃ ನಾನು, “ಹೀಗೆ ನೆನಸುವುದು ನನ್ನ ಬಲಹೀನತೆಯೇ. ಪರಾತ್ಪರನಾದ ದೇವರ ಭುಜಬಲವು ಪ್ರಕಟವಾದ ವರ್ಷಗಳನ್ನು ಜ್ಞಾಪಿಸಿಕೊಳ್ಳುವೆನು. 11 ೧೧ ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡೆಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. 12 ೧೨ ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು” ಅಂದುಕೊಂಡೆನು. 13 ೧೩ ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದುದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು? 14 ೧೪ ಅದ್ಭುತಗಳನ್ನು ನಡೆಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ. 15 ೧೫ ಯಾಕೋಬ ಮತ್ತು ಯೋಸೇಫರ ವಂಶದವರಾದ ನಿನ್ನ ಪ್ರಜೆಯನ್ನು, ಭುಜಬಲದಿಂದ ಬಿಡುಗಡೆಮಾಡಿದಿ. (ಸೆಲಾ) 16 ೧೬ ದೇವರೇ, ಜಲರಾಶಿಗಳು ನಿನ್ನನ್ನು ಕಂಡವು; ಕಾಣುತ್ತಲೇ ತಳಮಳಗೊಂಡು ತಳದವರೆಗೂ ಅಲ್ಲಕಲ್ಲೋಲವಾದವು. 17 ೧೭ ಮೇಘಮಂಡಲವು ಮಳೆಗರೆಯಿತು; ಆಕಾಶವು ಗರ್ಜಿಸಿತು; ನಿನ್ನ ಬಾಣಗಳು ಎಲ್ಲಾ ಕಡೆಯೂ ಹಾರಿದವು. 18 ೧೮ ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು; ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು; ಭೂಮಿಯು ಅಲ್ಲಾಡಿ ಕಂಪಿಸಿತು. 19 ೧೯ ನೀನು ಸಮುದ್ರದಲ್ಲಿ ಮಾರ್ಗಮಾಡಿದಿ; ಮಹಾಜಲರಾಶಿಗಳನ್ನು ದಾಟಿದಿ; ನಿನ್ನ ಹೆಜ್ಜೆ ಗುರುತು ಕಾಣಲಿಲ್ಲ. 20 ೨೦ ಕುರುಬನು ಕುರಿಹಿಂಡನ್ನು ಹೇಗೋ, ಹಾಗೆಯೇ ನೀನು ಮೋಶೆ ಮತ್ತು ಆರೋನರ ಮುಖಾಂತರ, ನಿನ್ನ ಪ್ರಜೆಯನ್ನು ಮುನ್ನಡೆಸಿದಿ.

< ಕೀರ್ತನೆಗಳು 77 >