< ಕೀರ್ತನೆಗಳು 75 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ಕೀರ್ತನೆ; ಹಾಡು; ಆಸಾಫನದು. ದೇವರೇ, ಕೊಂಡಾಡುತ್ತೇವೆ; ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮ ಮಹತ್ವವನ್ನು ನೆನಪುಮಾಡಿಕೊಂಡು; ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತೇವೆ. 2 ದೇವರು ನುಡಿದದ್ದು, “ನಿಯಮಿತ ಕಾಲವು ಬಂದಾಗ, ನಾನೇ ನೀತಿಯಿಂದ ತೀರ್ಪುಕೊಡುವೆನು. 3 ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ, ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ” ಎಂಬುದು. (ಸೆಲಾ) 4 ನಾನು ಹೆಮ್ಮೆಗಾರರಿಗೆ, “ಕೊಚ್ಚಿಕೊಳ್ಳಬೇಡಿರಿ” ಎಂದು; ದುಷ್ಟರಿಗೆ, “ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ; 5 ಕೊಂಬುಗಳನ್ನು ಮೇಲೆತ್ತಬೇಡಿರಿ; ಸೊಕ್ಕಿನಿಂದ ಮಾತನಾಡಬೇಡಿರಿ” ಎಂದು ಹೇಳುವೆನು. 6 ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ, ಅರಣ್ಯದಿಂದಾಗಲಿ ಬರುವುದಿಲ್ಲ. 7 ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು, ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ. 8 ಯೆಹೋವನ ಕೈಯಲ್ಲಿ ಪಾತ್ರೆ ಇದೆ; ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ. ಅದರಿಂದ ಹೊಯ್ದು ಹಂಚುತ್ತಾನೆ. ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು. 9 ನಾನಾದರೋ ಸದಾ ವರ್ಣಿಸುವವನಾಗಿ, ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುತ್ತಾ ವರ್ಣಿಸಿ ಹಾಡುವೆನು. 10 ೧೦ ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳನ್ನು ಉನ್ನತಮಟ್ಟಕ್ಕೆ ಎತ್ತಲ್ಪಡುವವು.

< ಕೀರ್ತನೆಗಳು 75 >