< ಕೀರ್ತನೆಗಳು 72 >

1 ಸೊಲೊಮೋನನ ಕೀರ್ತನೆ. ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು; ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು. 2 ಅವನು ನಿನ್ನ ಜನರಿಗೆ ನೀತಿಯಿಂದಲೂ, ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ. 3 ಗುಡ್ಡ ದಿನ್ನೆಗಳೆಲ್ಲವು ನಿನ್ನ ಜನರಿಗೋಸ್ಕರ, ನೀತಿಗನುಸಾರವಾಗಿ ಸುಕ್ಷೇಮವನ್ನು ಫಲಿಸಲಿ. 4 ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ; ದೀನರ ಮಕ್ಕಳನ್ನು ಉದ್ಧರಿಸಲಿ; ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ. 5 ಸೂರ್ಯನು, ಚಂದ್ರನು ಇರುವವರೆಗೂ, ತಲತಲಾಂತರಗಳವರೆಗೂ ಅವರು ನಿನಗೆ ಭಯಪಡಲಿ. 6 ಹುಲ್ಲುಕೊಯ್ದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಟಿಯಂತೆಯೂ, ಭೂಮಿಯನ್ನು ನೆನಸುವ ಹದಮಳೆಯಂತೆಯೂ ಅವನು ಇರಲಿ. 7 ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. 8 ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ. 9 ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ. 10 ೧೦ ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ. 11 ೧೧ ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ; ಸರ್ವಜನಾಂಗಗಳು ಆತನನ್ನು ಸೇವಿಸಲಿ. 12 ೧೨ ಏಕೆಂದರೆ ಅವನು ಮೊರೆಯಿಡುವ ಬಡವರನ್ನೂ, ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. 13 ೧೩ ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. 14 ೧೪ ಕುಯುಕ್ತಿ, ಬಲಾತ್ಕಾರಗಳಿಗೆ ತಪ್ಪಿಸಿ ಅವರ ಜೀವವನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು. 15 ೧೫ ಅವನು ಬಾಳಲಿ; ಶೆಬಾ ಪ್ರಾಂತ್ಯದ ಬಂಗಾರವು ಅವನಿಗೆ ಸಮರ್ಪಣೆಯಾಗಲಿ. ಅವನಿಗೋಸ್ಕರ ಯಾವಾಗಲೂ ದೇವರಲ್ಲಿ ವಿಜ್ಞಾಪನೆಯು ನಡೆಯಲಿ; ದಿನದಿನವೂ ಅವನಿಗೆ ಆಶೀರ್ವಾದಗಳು ಉಂಟಾಗಲಿ. 16 ೧೬ ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ; ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರಲಿ. ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ. 17 ೧೭ ಅವನ ನಾಮವು ಸ್ಥಿರವಾಗಿರಲಿ; ಅವನ ಹೆಸರು ಸೂರ್ಯನಿರುವವರೆಗೆ ಇರಲಿ. ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ, ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ. 18 ೧೮ ಮಹತ್ಕಾರ್ಯಗಳನ್ನು ನಡೆಸುವುದರಲ್ಲಿ ಅದ್ವಿತೀಯನೂ, ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವು. 19 ೧೯ ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲಕ್ಕೂ ಸ್ತುತಿ ಇರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್. 20 ೨೦ ಇಲ್ಲಿಗೆ ಇಷಯನ ಮಗನಾದ ದಾವೀದನ ಪ್ರಾರ್ಥನೆಗಳ ಸಮಾಪ್ತಿ.

< ಕೀರ್ತನೆಗಳು 72 >