< ಕೀರ್ತನೆಗಳು 63 >

1 ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ. ನನ್ನ ಆತ್ಮವೂ ನಿನಗಾಗಿ ಹಂಬಲಿಸುತ್ತದೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ, ನನ್ನ ಶರೀರವು ನಿನಗಾಗಿ ದಾಹಗೊಳ್ಳುತ್ತದೆ. 2 ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ, ಪ್ರಭಾವವನ್ನೂ ಕಂಡ ಪ್ರಕಾರ, ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ. 3 ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು. 4 ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿ ಹರಸುತ್ತಾ, ನಿನ್ನ ಹೆಸರೆತ್ತಿ ಕೈಮುಗಿಯುವೆನು. 5 ಮೃಷ್ಟಭೋಜನದಿಂದಲೋ ಎಂಬಂತೆ, ನನ್ನ ಮನಸ್ಸು ಸಂತುಷ್ಟವಾಗಿರುವುದು; ನನ್ನ ಬಾಯಿ ಉತ್ಸಾಹಧ್ವನಿ ಮಾಡುತ್ತಾ ನಿನ್ನನ್ನು ಕೊಂಡಾಡುವುದು. 6 ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ, ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು. 7 ನೀನು ನನಗೆ ಸಹಾಯಕನಾಗಿರುವೆಯಲ್ಲಾ; ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತನಾಗಿದ್ದುಕೊಂಡು, ಆನಂದಘೋಷ ಮಾಡುತ್ತಿರುವೆನು. 8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸುವುದು; ನಿನ್ನ ಬಲಗೈ ನನಗೆ ಆಧಾರವಾಗಿರುವುದು. 9 ನನ್ನ ಜೀವಕ್ಕೆ ಕೇಡು ಬಗೆಯುವವರೋ, ಅಧೋಲೋಕಕ್ಕೆ ಇಳಿದುಹೋಗುವರು. 10 ೧೦ ಅವರು ಕತ್ತಿಗೆ ಬಲಿಯಾಗುವರು; ನರಿಗಳ ಪಾಲಾಗುವರು. 11 ೧೧ ಆದರೆ ಅರಸನೋ ದೇವರಲ್ಲಿ ಆನಂದಿಸುವನು, ದೇವರ ಮೇಲೆ ಆಣೆಯಿಡುವವರೆಲ್ಲರು ಸುಳ್ಳುಬಾಯಿ ಮುಚ್ಚಿಹೋಗುವುದನ್ನು ಕಂಡು ಹಿಗ್ಗುವರು.

< ಕೀರ್ತನೆಗಳು 63 >