< ಕೀರ್ತನೆಗಳು 63 >

1 ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ. ನನ್ನ ಆತ್ಮವೂ ನಿನಗಾಗಿ ಹಂಬಲಿಸುತ್ತದೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ, ನನ್ನ ಶರೀರವು ನಿನಗಾಗಿ ದಾಹಗೊಳ್ಳುತ್ತದೆ.
ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನನ್ನ ದೇವರು ನೀವೇ, ನಿಮ್ಮನ್ನು ಕುತೂಹಲದಿಂದ ಹುಡುಕುತ್ತಿದ್ದೇನೆ. ನಾನು ನಿಮಗಾಗಿ ದಾಹಗೊಂಡಿದ್ದೇನೆ. ನೀರಿಲ್ಲದೆ ಭೂಮಿಯಲ್ಲಿದ್ದವನು ಹೇಗೆ ನೀರಿಗಾಗಿ ಹಾತೊರೆವಂತೆ ನನ್ನ ಇಡೀ ಸರ್ವಸ್ವವೂ ನಿಮಗಾಗಿ ದಾಹಗೊಂಡಿರುತ್ತದೆ. ನಾನು ನಿಮ್ಮನ್ನೇ ಅಪೇಕ್ಷಿಸುತ್ತಿದ್ದೇನೆ.
2 ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ, ಪ್ರಭಾವವನ್ನೂ ಕಂಡ ಪ್ರಕಾರ, ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ.
ನಾನು ನಿಮ್ಮ ಶಕ್ತಿಯನ್ನೂ ನಿಮ್ಮ ಮಹಿಮೆಯನ್ನೂ ಪರಿಶುದ್ಧ ಸ್ಥಳದಲ್ಲಿ ಕಂಡಿದ್ದೇನೆ. ಹೌದು, ನಾನು ನಿಮ್ಮನ್ನೇ ದೃಷ್ಟಿಸಿದ್ದೇನೆ.
3 ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು.
ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು. ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು.
4 ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿ ಹರಸುತ್ತಾ, ನಿನ್ನ ಹೆಸರೆತ್ತಿ ಕೈಮುಗಿಯುವೆನು.
ನಾನು ಜೀವಿಸುವ ಕಾಲವೆಲ್ಲಾ ನಿಮ್ಮನ್ನೇ ಸ್ತುತಿಸುವೆನು. ನಿಮ್ಮ ಹೆಸರಿನಲ್ಲಿ ನಾನು ನನ್ನ ಕೈ ಮುಗಿಯುವೆನು.
5 ಮೃಷ್ಟಭೋಜನದಿಂದಲೋ ಎಂಬಂತೆ, ನನ್ನ ಮನಸ್ಸು ಸಂತುಷ್ಟವಾಗಿರುವುದು; ನನ್ನ ಬಾಯಿ ಉತ್ಸಾಹಧ್ವನಿ ಮಾಡುತ್ತಾ ನಿನ್ನನ್ನು ಕೊಂಡಾಡುವುದು.
ಮೃಷ್ಟ ಭೋಜನದಿಂದಲೋ ಎಂಬಂತೆ ನಾನು ನಿಮ್ಮಲ್ಲಿ ಸಂತೃಪ್ತನಾಗಿದ್ದೇನೆ. ಉತ್ಸಾಹದ ತುಟಿಗಳಿಂದ ನನ್ನ ಬಾಯಿಯು ನಿಮ್ಮನ್ನು ಸ್ತುತಿಸುವುದು.
6 ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ, ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.
ನನ್ನ ಹಾಸಿಗೆಯ ಮೇಲೆ ನಿಮ್ಮನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿಮ್ಮನ್ನು ಧ್ಯಾನಿಸುತ್ತಿರುವೆನು.
7 ನೀನು ನನಗೆ ಸಹಾಯಕನಾಗಿರುವೆಯಲ್ಲಾ; ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತನಾಗಿದ್ದುಕೊಂಡು, ಆನಂದಘೋಷ ಮಾಡುತ್ತಿರುವೆನು.
ಏಕೆಂದರೆ ನೀವೇ ನನಗೆ ಸಹಾಯಕರಾಗಿದ್ದೀರಿ. ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಹಾಡುತ್ತಿರುವೆನು.
8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸುವುದು; ನಿನ್ನ ಬಲಗೈ ನನಗೆ ಆಧಾರವಾಗಿರುವುದು.
ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ.
9 ನನ್ನ ಜೀವಕ್ಕೆ ಕೇಡು ಬಗೆಯುವವರೋ, ಅಧೋಲೋಕಕ್ಕೆ ಇಳಿದುಹೋಗುವರು.
ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು.
10 ೧೦ ಅವರು ಕತ್ತಿಗೆ ಬಲಿಯಾಗುವರು; ನರಿಗಳ ಪಾಲಾಗುವರು.
ಖಡ್ಗದಿಂದ ಅವರು ಬೀಳುವರು. ನರಿಗಳಿಗೆ ಆಹಾರವಾಗುವರು.
11 ೧೧ ಆದರೆ ಅರಸನೋ ದೇವರಲ್ಲಿ ಆನಂದಿಸುವನು, ದೇವರ ಮೇಲೆ ಆಣೆಯಿಡುವವರೆಲ್ಲರು ಸುಳ್ಳುಬಾಯಿ ಮುಚ್ಚಿಹೋಗುವುದನ್ನು ಕಂಡು ಹಿಗ್ಗುವರು.
ಆದರೆ ಅರಸನು ದೇವರಲ್ಲಿ ಸಂತೋಷಿಸುವನು. ದೇವರ ಪ್ರತಿಜ್ಞೆ ಹೊಂದಿದವರು ದೇವರನ್ನು ಮಹಿಮೆಪಡಿಸುವರು. ಆದರೆ ಸುಳ್ಳಾಡುವವರ ಬಾಯಿ ಮುಚ್ಚಿಹೋಗುವುದು.

< ಕೀರ್ತನೆಗಳು 63 >