< ಕೀರ್ತನೆಗಳು 56 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೋನತ್ ಎಲೆಮ್ ರೆಹೋಕೀಮ್ ಎಂಬ ರಾಗ; ದಾವೀದನು ಗತ್ ಎಂಬ ಊರಲ್ಲಿ ಫಿಲಿಷ್ಟಿಯರ ಕೈವಶವಾದಾಗ ರಚಿಸಿದ ಕಾವ್ಯ. ದೇವರೇ, ಕರುಣಿಸು; ನರರು ನನ್ನನ್ನು ತುಳಿದುಬಿಡಬೇಕೆಂದು ಎದ್ದಿದ್ದಾರೆ. ನನ್ನ ಎದುರಾಳಿಗಳು ಹಗಲೆಲ್ಲಾ ಯುದ್ಧಕ್ಕೆ ನಿಂತು ಬಾಧಿಸುತ್ತಾರೆ.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ದೂರದ ಓಕ್ ಮರದ ಮೇಲೆ ಪಾರಿವಾಳ ಕುಳಿತಿದೆ” ಎಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಗತ್ ಎಂಬ ಊರಲ್ಲಿ ಫಿಲಿಷ್ಟಿಯರ ಕೈವಶವಾದಾಗ ರಚಿಸಿದ ಕಾವ್ಯ. ದೇವರೇ ಕರುಣಿಸು, ಏಕೆಂದರೆ ಮನುಷ್ಯರು ನನ್ನನ್ನು ಬೆನ್ನಟ್ಟುತ್ತಿದ್ದಾರೆ. ದಿನವೆಲ್ಲಾ ವಿರೋಧಿಸುತ್ತಾ ನನ್ನನ್ನು ಬಾಧಿಸುತ್ತಿದ್ದಾರೆ.
2 ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ; ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಜನರು.
ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ಬೆನ್ನಟ್ಟುತ್ತಿದ್ದಾರೆ. ಗರ್ವದಿಂದ ನನಗೆ ವಿರೋಧವಾಗಿ ಯುದ್ಧ ಮಾಡುತ್ತಿದ್ದಾರೆ.
3 ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು.
ನಾನು ಭಯಪಡುವ ಸಮಯದಲ್ಲಿ ನಿಮ್ಮಲ್ಲಿ ಭರವಸೆ ಇಡುವೆನು.
4 ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು; ದೇವರನ್ನು ನಂಬಿ ನಿರ್ಭಯದಿಂದಿರುವೆನು. ನರಪ್ರಾಣಿಗಳು ನನಗೆ ಏನು ಮಾಡಾರು?
ದೇವರ ಮಾತುಗಳಲ್ಲಿ ನಾನು ಹೆಮ್ಮೆಪಡುವೆನು. ದೇವರಲ್ಲಿಯೇ ಭರವಸೆ ಇಡುವೆನು, ನಾನು ಭಯಪಡುವುದಿಲ್ಲ. ಸಾಯುವ ಮನುಷ್ಯನು ನನಗೇನು ಮಾಡಬಲ್ಲ?
5 ಹಗಲೆಲ್ಲಾ ನನ್ನ ಮಾತುಗಳನ್ನು ಅಪಾರ್ಥಮಾಡುತ್ತಾರೆ; ಅವರು ಬಗೆಯುವುದೆಲ್ಲ ನನಗೆ ಕೇಡೇ.
ಶತ್ರುಗಳು ನನ್ನ ಮಾತುಗಳನ್ನು ಸದಾ ಅಪಾರ್ಥ ಮಾಡಿಕೊಳ್ಳುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ಕೇಡಿಗಾಗಿವೆ.
6 ಅವರು ಒಟ್ಟುಗೂಡಿ ನನ್ನ ಜೀವ ತೆಗೆಯಬೇಕೆಂದು ಹೊಂಚುಹಾಕಿ, ನನ್ನ ಹೆಜ್ಜೆಜಾಡು ಹಿಡಿದು ಬರುತ್ತಾರೆ.
ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ. ನನ್ನ ಪ್ರಾಣ ತೆಗೆಯಲು ಕುತೂಹಲದಿಂದ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
7 ಇಂಥ ಅನ್ಯಾಯಗಾರರು ತಪ್ಪಿಸಿಕೊಳ್ಳಬಹುದೋ? ದೇವರೇ, ರೌದ್ರದಿಂದ ಆ ಜನಾಂಗಗಳನ್ನು ಉರುಳಿಸಿಬಿಡು.
ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ದೇವರೇ ಜನರನ್ನು ಕಠಿಣವಾಗಿ ದಂಡಿಸಿರಿ.
8 ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ. ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆಯಲ್ಲಾ; ಅದರ ವಿಷಯವಾಗಿ ನಿನ್ನ ಪುಸ್ತಕದಲ್ಲಿ ಬರೆದದೆಯಲ್ಲಾ.
ನನ್ನ ಗೋಳಾಟವನ್ನು ಎಣಿಕೆ ಮಾಡಿರಿ, ನಿಮ್ಮ ಸುರುಳಿಯಲ್ಲಿ ನನ್ನ ಕಣ್ಣೀರ ಲೆಕ್ಕಮಾಡಿರಿ, ಅವು ನಿಮ್ಮ ಗ್ರಂಥದಲ್ಲಿ ಬರೆದಿದೆಯಲ್ಲವೇ?
9 ನಾನು ಆತನಿಗೆ ಮೊರೆಯಿಡುವಾಗಲೇ ನನ್ನ ಶತ್ರುಗಳು ಫಕ್ಕನೆ ಹಿಂದಿರುಗಿ ಓಡುವರು; ದೇವರು ನನ್ನ ಸಂಗಡ ಇರುವುದು ನಿಶ್ಚಯ.
ನಾನು ನಿಮಗೆ ಮೊರೆಯಿಟ್ಟಾಗ, ನನ್ನ ಶತ್ರುಗಳು ಹಿಂದಿರುಗುವರು. ಇದರಿಂದ ದೇವರು ನನಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವೆನು.
10 ೧೦ ದೇವರ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ. ಯೆಹೋವನ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ.
ನಾನು ದೇವರಲ್ಲಿಯೂ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು. ಹೌದು, ದೇವರಲ್ಲಿಯೂ ಯೆಹೋವ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು.
11 ೧೧ ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಏನು ಮಾಡಾರು?
ನಾನು ದೇವರಲ್ಲಿ ಭರವಸೆಯಿಡುವೆನು. ನಾನು ಭಯಪಡುವುದಿಲ್ಲ. ಮಾನವನು ನನಗೇನು ಮಾಡುವನು?
12 ೧೨ ದೇವರೇ, ನಿನಗೆ ಹೊತ್ತ ಹರಕೆಗಳನ್ನು ನಾನು ಸಲ್ಲಿಸುವೆನು; ಕೃತಜ್ಞತಾ ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
ನನ್ನ ದೇವರೇ ನಾನು ನಿಮಗೆ ಸಲ್ಲಿಸಿದ ಹರಕೆಗಳಿಗೆ ಅಧೀನವಾಗಿದ್ದೇನೆ. ನಾನು ಉಪಕಾರ ಸ್ತುತಿಯ ಕಾಣಿಕೆಗಳನ್ನು ನಿಮಗೆ ಸಲ್ಲಿಸುವೆನು.
13 ೧೩ ಏಕೆಂದರೆ, ನಾನು ಜೀವದಿಂದ ಬೆಳಕಿನಲ್ಲಿದ್ದು ನಿನಗೆ ನಡೆದುಕೊಳ್ಳಬೇಕೆಂದು ನೀನು ನನ್ನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ, ನನ್ನ ಪಾದಗಳನ್ನು ಎಡವಿಬೀಳದಂತೆ ಕಾಪಾಡಿದ್ದಿ.
ಏಕೆಂದರೆ ನೀವು ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀರಿ. ನಾನು ಜೀವದ ಬೆಳಕಿನಲ್ಲಿ ನಿಮ್ಮ ಮುಂದೆ ನಡೆದುಕೊಳ್ಳುವ ಹಾಗೆ ನೀವು ನನ್ನ ಪಾದಗಳನ್ನು ಎಡವದಂತೆ ಕಾಪಾಡಿದ್ದೀರಿ.

< ಕೀರ್ತನೆಗಳು 56 >