< ಕೀರ್ತನೆಗಳು 30 >

1 ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ, ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು. 2 ಯೆಹೋವನೇ, ನನ್ನ ದೇವರೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ. 3 ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ; ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ. (Sheol h7585) 4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ. 5 ಆತನ ಕೋಪವು ಕ್ಷಣಮಾತ್ರವೇ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ, ಮುಂಜಾನೆ ಹರ್ಷಧ್ವನಿಯು ಕೇಳಿಸುವುದು. 6 ನಾನಂತೂ ಸುಖದಿಂದಿದ್ದಾಗ, “ನಾನು ಎಂದಿಗೂ ಕದಲುವುದಿಲ್ಲ” ಎಂದು ಹೇಳಿಕೊಂಡಿದ್ದೆನು. 7 ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ. ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು. 8 ಯೆಹೋವನೇ, ನಿನಗೆ ಮೊರೆಯಿಟ್ಟೆನು; ನನ್ನ ಒಡೆಯನಿಗೆ ಬಿನ್ನವಿಸಿ, 9 “ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು? ಮಣ್ಣು ನಿನ್ನನ್ನು ಸ್ತುತಿಸುವುದೋ? ಅದು ನಿನ್ನ ನಂಬಿಕೆಯನ್ನು ಹೊಗಳುವುದೇನು? 10 ೧೦ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು. 11 ೧೧ ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು, ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ. 12 ೧೨ ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು; ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.

< ಕೀರ್ತನೆಗಳು 30 >