< ಕೀರ್ತನೆಗಳು 26 >

1 ದಾವೀದನ ಕೀರ್ತನೆ. ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ. ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ.
ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನನ್ನು ನಿರ್ದೋಷನನ್ನಾಗಿ ನಿರ್ಣಯಿಸಿರಿ, ನಾನು ದೋಷವಿಲ್ಲದ ಜೀವನ ನಡೆಸಿದ್ದೇನೆ; ನಾನು ಯೆಹೋವ ದೇವರಲ್ಲಿ ಕದಲದೆ ಭರವಸೆ ಇಟ್ಟಿದ್ದೇನೆ.
2 ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ, ಹೃದಯವನ್ನೂ ಪರಿಶೋಧಿಸು.
ಯೆಹೋವ ದೇವರೇ, ನನ್ನನ್ನು ಶೋಧಿಸಿ, ಪರೀಕ್ಷಿಸಿರಿ; ನನ್ನ ಅಂತರಿಂದ್ರಿಯಗಳನ್ನೂ ನನ್ನ ಹೃದಯವನ್ನೂ ಶೋಧಿಸಿರಿ.
3 ನಿನ್ನ ಶಾಶ್ವತವಾದ ಪ್ರೀತಿಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೇನೆ; ನಿನಗೆ ನಂಬಿಗಸ್ತನಾಗಿ ನಡೆದುಕೊಂಡಿದ್ದೇನೆ.
ನಿಮ್ಮ ಒಡಂಬಡಿಕೆಯ ಪ್ರೀತಿಯು ಯಾವಾಗಲೂ ನನ್ನ ಮನಸ್ಸು ತುಂಬ ಇದೆ; ನಿಮ್ಮ ನಂಬಿಗಸ್ತಿಕೆಯಲ್ಲಿ ನಾನು ಬಾಳುತ್ತಿದ್ದೇನೆ.
4 ನಾನು ಮೋಸಗಾರರ ಸಹವಾಸ ಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ.
ಮೋಸಗಾರರ ಸಂಗಡ ನಾನು ಕುಳಿತುಕೊಳ್ಳಲಿಲ್ಲ; ವಂಚಕರ ಸಂಗಡ ನಾನು ಹೋಗುವುದಿಲ್ಲ.
5 ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ.
ದುರ್ಮಾರ್ಗಿಗಳ ಸಭೆಯನ್ನು ದ್ವೇಷಿಸಿದ್ದೇನೆ; ದುಷ್ಟರ ಸಂಗಡ ಕುಳಿತುಕೊಳ್ಳುವುದಿಲ್ಲ.
6 ಯೆಹೋವನೇ, ನಾನು ನಿರ್ದೋಷಿ ಎಂದು, ಕೈಗಳನ್ನು ತೊಳೆದುಕೊಂಡವನಾಗಿ,
ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು, ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ,
7 ನಿನ್ನ ಅದ್ಭುತಕೃತ್ಯಗಳ ವರ್ಣನೆಯ ಸ್ತೋತ್ರ ಮಾಡುತ್ತಾ, ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.
ಸ್ತೋತ್ರ ಧ್ವನಿಯೆತ್ತಿ ಸಾರುತ್ತಾ ನಿಮ್ಮ ಅದ್ಭುತಗಳನ್ನೆಲ್ಲಾ ತಿಳಿಸುವೆನು.
8 ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವ ಸ್ಥಾನವು ನನಗೆ ಇಷ್ಟ.
ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ, ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ.
9 ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ.
ಪಾಪಿಗಳ ಸಂಗಡ ನನ್ನ ಪ್ರಾಣವನ್ನೂ, ರಕ್ತಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡಿರಿ.
10 ೧೦ ಅವರ ಕೈಗಳು ಬಲಾತ್ಕಾರ ನಡೆಸುತ್ತವೆ; ಅವರ ಬಲಗೈ ಲಂಚದಿಂದ ತುಂಬಿದೆ.
ಅವರ ಕೈಗಳಲ್ಲಿ ಕೇಡು ಇದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.
11 ೧೧ ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು; ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು.
ನಾನಾದರೋ ನನ್ನ ಯಥಾರ್ಥತೆಯಲ್ಲಿ ನಡೆಯುತ್ತೇನೆ; ನನ್ನನ್ನು ವಿಮೋಚಿಸಿರಿ; ನನಗೆ ಕರುಣೆಯುಳ್ಳವರಾಗಿರಿ.
12 ೧೨ ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಯಲ್ಲಿ ಯೆಹೋವನನ್ನು ಕೊಂಡಾಡುವೆನು.
ನನ್ನ ಪಾದವು ಸಮ ನೆಲದಲ್ಲಿ ನಿಂತಿದೆ; ನಾನು ಮಹಾಸಭೆಯಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು.

< ಕೀರ್ತನೆಗಳು 26 >