< ಕೀರ್ತನೆಗಳು 25 >

1 ದಾವೀದನ ಕೀರ್ತನೆ. ಯೆಹೋವನೇ, ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ. 2 ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ, ನನ್ನನ್ನು ಅಪಮಾನಕ್ಕೆ ಗುರಿಪಡಿಸಬೇಡ. ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ. 3 ನಿಷ್ಕಾರಣ ದ್ರೋಹಿಗಳಿಗೆ ಅಪಮಾನವಾಗಬೇಕೇ ಹೊರತು, ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು. 4 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಯಪಡಿಸು; ನೀನು ಒಪ್ಪುವ ದಾರಿಯನ್ನು ತೋರಿಸು. 5 ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡೆಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ. 6 ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ, ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ. 7 ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ, ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ. 8 ಯೆಹೋವನು ದಯಾಳುವೂ, ಸತ್ಯಸ್ವರೂಪನೂ ಆಗಿದ್ದಾನೆ; ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವನು. 9 ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು. 10 ೧೦ ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ, ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು. 11 ೧೧ ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ; ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು. 12 ೧೨ ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವರೋ ಅವರಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು. 13 ೧೩ ಅವರು ಸುಖದಿಂದಲೇ ಇರುವರು; ಅವರ ಸಂತತಿಯವರು ದೇಶವನ್ನು ಅನುಭವಿಸುವರು. 14 ೧೪ ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು; ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು. 15 ೧೫ ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ; ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು. 16 ೧೬ ನಾನು ಒಬ್ಬೊಂಟಿಗನೂ, ಬಾಧೆಪಡುವವನೂ ಆಗಿದ್ದೇನೆ; ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು. 17 ೧೭ ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು. 18 ೧೮ ನಾನು ಕುಗ್ಗಿರುವುದನ್ನೂ, ಕಷ್ಟಪಡುವುದನ್ನೂ ನೋಡಿ, ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು. 19 ೧೯ ನನಗೆ ಎಷ್ಟೋ ಶತ್ರುಗಳು ಇದ್ದಾರಲ್ಲಾ; ಅವರು ಕಡು ವೈರತ್ವದಿಂದ ನನ್ನನ್ನು ಹಗೆಮಾಡುತ್ತಾರೆ. 20 ೨೦ ನನ್ನ ಪ್ರಾಣವನ್ನು ಕಾಪಾಡಿ ಉಳಿಸು; ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ, ನನಗೆ ಆಶಾಭಂಗವಾಗಬಾರದು. 21 ೨೧ ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನಿರ್ದೋಷಭಕ್ತಿಯೂ ಮತ್ತು ಯಥಾರ್ಥತ್ವವೂ ನನ್ನನ್ನು ಕಾಯಲಿ. 22 ೨೨ ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಬಾಧೆಗಳಿಂದ ವಿಮೋಚಿಸು.

< ಕೀರ್ತನೆಗಳು 25 >