< ಕೀರ್ತನೆಗಳು 22 >

1 (ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಉದಯದ ಜಿಂಕೆ ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ.) ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಉದಯದ ಜಿಂಕೆ” ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ. ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ? ನನ್ನನ್ನು ರಕ್ಷಿಸದೆ ಏಕೆ ದೂರವಾಗಿದ್ದೀರಿ? ನನ್ನ ನರಳುವಿಕೆಯ ಮೊರೆಗೆ ಉತ್ತರ ಕೊಡದೆ ಏಕೆ ದೂರವಾಗಿದ್ದೀರಿ?
2 ನನ್ನ ದೇವರೇ, ಹಗಲಿನಲ್ಲಿ ಮೊರೆಯಿಡುತ್ತೇನೆ; ಪ್ರತ್ಯುತ್ತರವೇ ಇಲ್ಲ; ರಾತ್ರಿಯಲ್ಲಿಯೂ ನನಗೆ ಉಪಶಮನವಿಲ್ಲ.
ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ, ಆದರೆ ನೀವು ಉತ್ತರ ಕೊಡುವುದಿಲ್ಲ; ರಾತ್ರಿಯಲ್ಲಿಯೂ ನನಗೆ ವಿಶ್ರಾಂತಿ ಇರುವುದಿಲ್ಲ.
3 ಇಸ್ರಾಯೇಲರ ಸ್ತೋತ್ರಸಿಂಹಾಸನದಲ್ಲಿ ಇರುವಾತನೇ, ನೀನು ಪವಿತ್ರಸ್ವರೂಪನು.
ನೀವು ಪರಿಶುದ್ಧರು; ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ.
4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು; ನಿನ್ನನ್ನು ನಂಬಿ ಉದ್ಧಾರವಾದರು.
ನಿಮ್ಮಲ್ಲಿಯೇ ನಮ್ಮ ಪಿತೃಗಳು ಭರವಸೆಯಿಟ್ಟರು; ಅವರು ಭರವಸೆಯಿಟ್ಟಿದ್ದರಿಂದ ನೀವು ಅವರನ್ನು ವಿಮೋಚಿಸಿದಿರಿ.
5 ನಿನಗೆ ಮೊರೆಯಿಟ್ಟು ವಿಮುಕ್ತರಾದರು; ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.
ಅವರು ನಿಮಗೆ ಮೊರೆಯಿಟ್ಟದ್ದರಿಂದ ನೀವು ಅವರನ್ನು ರಕ್ಷಿಸಿದಿರಿ; ನಿಮ್ಮಲ್ಲಿ ಭರವಸೆಯಿಟ್ಟಿದ್ದರಿಂದ ಅವರು ಅಪಮಾನಕ್ಕೆ ಗುರಿಯಾಗಲಿಲ್ಲ.
6 ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.
ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ.
7 ನನ್ನನ್ನು ನೋಡುವವರೆಲ್ಲರೂ ಹಾಸ್ಯಮಾಡುತ್ತಾರೆ; ಅವರು ಓರೇ ತುಟಿ ಮಾಡಿ ತಲೆ ಆಡಿಸುತ್ತಾ,
ನನ್ನನ್ನು ನೋಡುವವರೆಲ್ಲರೂ ನನ್ನನ್ನು ಗೇಲಿಮಾಡುತ್ತಾರೆ. ಅವರು ತಲೆ ಆಡಿಸುತ್ತಾ ಹೀಗೆ ಅವಮಾನಪಡಿಸುತ್ತಾರೆ:
8 “ಯೆಹೋವನು ತನ್ನನ್ನು ರಕ್ಷಿಸುವನೆಂದು ಆತನಲ್ಲಿ ಭರವಸವಿಟ್ಟಿದ್ದಾನಲ್ಲಾ; ಆತನು ಇವನನ್ನು ಮೆಚ್ಚಿದ್ದಾದರೆ ರಕ್ಷಿಸಲಿ” ಎಂದು ಹೇಳುತ್ತಾರೆ.
“ಆತನು ಯೆಹೋವ ದೇವರ ಮೇಲೆ ಭರವಸೆಯಿಟ್ಟಿದ್ದಾನಲ್ಲಾ, ಯೆಹೋವ ದೇವರೇ ಆತನನ್ನು ಕಾಪಾಡಲಿ. ಯೆಹೋವ ದೇವರು ಆತನಲ್ಲಿ ಹರ್ಷಿಸುವುದಾದರೆ, ಅವರೇ ಆತನನ್ನು ಬಿಡಿಸಲಿ.”
9 ತಾಯಿಯ ಗರ್ಭದೊಳಗಿಂದ ನನ್ನನ್ನು ಬರಮಾಡಿದವನು ನೀನೇ ಅಲ್ಲವೇ. ತಾಯಿಯ ಎದೆಯಲ್ಲಿ ನನ್ನನ್ನು ನಿಶ್ಚಿಂತೆಯಿಂದ ಇರಿಸಿದವನು ನೀನೇ ಅಲ್ಲವೇ.
ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು; ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ.
10 ೧೦ ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ.
ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು.
11 ೧೧ ನನಗೀಗ ಕಷ್ಟವು ಪ್ರಾಪ್ತವಾಗಿದೆ; ಸಹಾಯಕರು ಯಾರೂ ಇಲ್ಲ, ದೂರವಾಗಿರಬೇಡ.
ನನ್ನಿಂದ ದೂರವಾಗಿರಬೇಡಿರಿ, ಏಕೆಂದರೆ ಇಕ್ಕಟ್ಟು ಸಮೀಪವಾಗಿದೆ, ಸಹಾಯಕರು ನನಗೆ ಯಾರೂ ಇಲ್ಲ.
12 ೧೨ ಬಹಳ ಗೂಳಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವುಳ್ಳ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.
ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.
13 ೧೩ ಅವರು ಗರ್ಜಿಸುವ ಉಗ್ರಸಿಂಹಗಳಂತೆ ನನ್ನನ್ನು ನುಂಗುವುದಕ್ಕೆ ಬಾಯಿ ತೆರೆದಿದ್ದಾರೆ.
ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ.
14 ೧೪ ನಾನು ಹೊಯ್ಯಲ್ಪಟ್ಟ ನೀರಿನಂತಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿದೆ. ನನ್ನ ಹೃದಯ ಮೇಣದಂತೆ ನನ್ನಲ್ಲಿ ಕರಗಿಹೋಗಿದೆ.
ನಾನು ಚೆಲ್ಲಿದ ನೀರಿನಂತಿದ್ದೇನೆ, ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿ ಹೋಗಿದೆ. ನನ್ನ ಹೃದಯವು ಮೇಣದ ಹಾಗೆ ನನ್ನೊಳಗೆ ಕರಗಿಹೋಗಿದೆ.
15 ೧೫ ನನ್ನ ಶಕ್ತಿಯು ಬೋಕಿಯ ಹಾಗೆ ಒಣಗಿಹೋಗಿದೆ; ನನ್ನ ನಾಲಿಗೆಯು ಬಾಯಿಯ ಅಂಗಳಕ್ಕೆ ಹತ್ತಿಹೋಗಿದೆ. ನೀನು ನನ್ನನ್ನು ಮಣ್ಣಿಗೆ ಸೇರಿಸುತ್ತೀ.
ನನ್ನ ಬಾಯಿ ಬೋಕಿಯ ಹಾಗೆ ಒಣಗಿಹೋಗಿದೆ, ನನ್ನ ನಾಲಿಗೆ ಅಂಗಳಕ್ಕೆ ಹತ್ತಿದೆ, ನೀವು ನನ್ನನ್ನು ಮಣ್ಣಿಗೆ ಸೇರಿಸುವಿರಿ.
16 ೧೬ ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ. ನನ್ನ ಕೈಕಾಲುಗಳನ್ನು ತಿವಿದಿದ್ದಾರೆ.
ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
17 ೧೭ ನನ್ನ ಎಲುಬುಗಳನ್ನೆಲ್ಲಾ ಎಣಿಸುವುದಕ್ಕಾಗುವುದು; ಅವರೋ ನನ್ನನ್ನು ನೋಡಿ ನೋಡಿ ಹಿಗ್ಗುತ್ತಾರೆ.
ನನ್ನ ಎಲುಬುಗಳನ್ನೆಲ್ಲಾ ಎಣಿಸುವಂತಾಗಿದೆ; ಅವರು ನನ್ನನ್ನು ಕಂಡು ಹಿಗ್ಗುತ್ತಾರೆ.
18 ೧೮ ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗಾಗಿ ಚೀಟುಹಾಕುತ್ತಾರೆ.
ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ.
19 ೧೯ ಯೆಹೋವನೇ, ನನ್ನ ರಕ್ಷಕನೇ, ನೀನಾದರೋ ದೂರವಾಗಿರಬೇಡ; ಬೇಗ ಬಂದು ಸಹಾಯಮಾಡು.
ಆದರೆ ಯೆಹೋವ ದೇವರೇ, ನೀವು ನನ್ನಿಂದ ದೂರವಾಗಿರಬೇಡಿರಿ; ನೀವು ನನ್ನ ಬಲವಾಗಿದ್ದೀರಿ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.
20 ೨೦ ಕತ್ತಿಗೆ ಸಿಕ್ಕದಂತೆ ನನ್ನನ್ನು ತಪ್ಪಿಸು; ನನ್ನ ಪ್ರಿಯ ಪ್ರಾಣವು ನಾಯಿಯ ವಶವಾಗದಂತೆ ಕಾಪಾಡು.
ನನ್ನ ಪ್ರಾಣವನ್ನು ಖಡ್ಗದಿಂದಲೂ ನನ್ನ ಅಮೂಲ್ಯ ಜೀವವನ್ನು ನಾಯಿಗಳ ಬಲದಿಂದಲೂ ಬಿಡಿಸಿರಿ.
21 ೨೧ ಸಿಂಹಗಳ ಬಾಯಿಂದ ರಕ್ಷಿಸು, ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸು.
ಸಿಂಹಗಳ ಬಾಯಿಂದ ನನ್ನನ್ನು ರಕ್ಷಿಸಿರಿ; ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸಿರಿ.
22 ೨೨ ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
ನಾನು ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಸಭಾ ಮಧ್ಯದಲ್ಲಿ ನಿಮ್ಮನ್ನು ಸ್ತುತಿಸುವೆನು.
23 ೨೩ ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ; ಯಾಕೋಬ ವಂಶದವರೇ, ನೀವೆಲ್ಲರೂ ಆತನನ್ನು ಕೊಂಡಾಡಿರಿ. ಇಸ್ರಾಯೇಲ್ ವಂಶಸ್ಥರೇ, ನೀವೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ.
ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ.
24 ೨೪ ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ, ಅವನ ಪ್ರಾರ್ಥನೆಗೆ ಕಿವಿಗೊಟ್ಟನು.
ಏಕೆಂದರೆ ಸಂಕಟಪಡುವವನ ಸಂಕಟವನ್ನು ಅವರು ತಿರಸ್ಕರಿಸಲಿಲ್ಲ, ಅಸಹ್ಯಪಡಲಿಲ್ಲ; ತಮ್ಮ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಆತನು ಮೊರೆ ಇಡಲು, ಅವರು ಕೇಳಿದರು.
25 ೨೫ ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು; ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
ಮಹಾಸಭೆಯಲ್ಲಿ ನಿಮ್ಮನ್ನು ಕುರಿತು ನನ್ನ ಸ್ತೋತ್ರವು ನಿಮ್ಮಿಂದ ಬರುವುದು; ನನ್ನ ಹರಕೆಗಳನ್ನು ನಿಮಗೆ ಭಯಪಡುವವರ ಮುಂದೆ ಸಲ್ಲಿಸುವೆನು.
26 ೨೬ ದೀನರು ಉಂಡು ತೃಪ್ತರಾಗುವರು; ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು. ಅವರ ಅಂತರಾತ್ಮವು ಯಾವಾಗಲು ಚೈತನ್ಯವುಳ್ಳದ್ದಾಗಿರಲಿ.
ದೀನರು ಉಂಡು ತೃಪ್ತರಾಗುವರು; ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ.
27 ೨೭ ಭೂಮಂಡಲದವರೆಲ್ಲರೂ ಎಚ್ಚರಗೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳುವರು; ಯೆಹೋವನೇ, ಎಲ್ಲಾ ಜನಾಂಗಗಳವರು ನಿನಗೆ ಅಡ್ಡಬೀಳುವರು.
ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು.
28 ೨೮ ರಾಜ್ಯವು ಯೆಹೋವನದೇ; ಎಲ್ಲಾ ಜನಾಂಗಗಳಿಗೂ ಆತನೇ ಒಡೆಯನು.
ಏಕೆಂದರೆ ರಾಜ್ಯವು ಯೆಹೋವ ದೇವರದೇ; ಜನಾಂಗಗಳನ್ನು ಆಳುವವರು ಅವರೇ.
29 ೨೯ ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಆರಾಧಿಸುವರು; ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣು ಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.
ಭೂಮಿಯ ಶ್ರೀಮಂತರೆಲ್ಲರು ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರು ಅವರ ಮುಂದೆ ಅಡ್ಡಬೀಳುವರು.
30 ೩೦ ಆತನನ್ನು ಸೇವಿಸುವವರ ಸಂತಾನದವರು ಯೆಹೋವನ ಸಂತಾನದವರೆಂದು ಎಣಿಸಲ್ಪಡವರು.
ಸಂತಾನವು ದೇವರನ್ನು ಸೇವಿಸುವುದು; ಮುಂದಿನ ಸಂತತಿಗಳಿಗೆ ಯೆಹೋವ ದೇವರ ಬಗ್ಗೆ ಹೇಳಲಾಗುವುದು.
31 ೩೧ ಅವರು ಬಂದು ಆತನ ನೀತಿಯನ್ನೂ, ಆತನು ನಡೆಸಿದ ಕಾರ್ಯಗಳನ್ನೂ ಮುಂದೆ ಹುಟ್ಟುವ ಜನಕ್ಕೆ ತಿಳಿಸುವರು.
ಆ ಸಂತತಿಯವರು ದೇವರ ನೀತಿಯನ್ನು ಇನ್ನೂ ಜನಿಸದ ಜನಾಂಗಕ್ಕೆ ಸಾರಿ ತಿಳಿಸುವರು, ಏಕೆಂದರೆ ಇದನ್ನೆಲ್ಲ ಮಾಡಿದವರು ದೇವರೇ!

< ಕೀರ್ತನೆಗಳು 22 >