< ಕೀರ್ತನೆಗಳು 2 >

1 ಅನ್ಯಜನಾಂಗಗಳು ದಂಗೆಗೆ ಏಳುವುದೂ, ಜನಾಂಗಗಳು ವ್ಯರ್ಥಕಾರ್ಯಗಳನ್ನು ಯೋಚಿಸುವುದೂ ಏಕೆ? 2 ಅರಸರು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ದೇಶಾಧಿಪತಿಗಳು ಯೆಹೋವನಿಗೂ ಮತ್ತು ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರುದ್ಧವಾಗಿ ಸನ್ನದ್ಧರಾಗಿ ನಿಂತಿದ್ದಾರೆ, 3 “ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತುಹಾಕಿ, ಬೇಡಿಗಳನ್ನು ಮುರಿದು ಬಿಸಾಡೋಣ” ಎಂದು ಮಾತನಾಡಿಕೊಳ್ಳುತ್ತಾರಲ್ಲಾ. 4 ಪರಲೋಕದಲ್ಲಿ ಆಸೀನನಾಗಿರುವಾತನು ಅದಕ್ಕೆ ನಗುವನು; ಕರ್ತನು ಅವರನ್ನು ಪರಿಹಾಸ್ಯಮಾಡುವನು. 5 ಅನಂತರ ಆತನು ಸಿಟ್ಟಾಗಿ, ಕೋಪಾವೇಶದಿಂದ ಅವರನ್ನು ಕಳವಳಗೊಳಿಸಿ, 6 “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು” ಎಂದು ಹೇಳುವನು. 7 ನಾನು ಯೆಹೋವನ ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ; ಆತನು ನನಗೆ, “ನನಗೆ ನೀನು ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ. 8 ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು; ಭೂಮಿಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವತ್ತಾಗಿ ಕೊಡುವೆನು. 9 ನೀನು ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವಿ; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ” ಎಂದು ಹೇಳಿದನು. 10 ೧೦ ಆದುದರಿಂದ ಅರಸುಗಳಿರಾ, ವಿವೇಕಿಗಳಾಗಿರಿ; ದೇಶಾಧಿಪತಿಗಳಿರಾ, ಬುದ್ಧಿವಾದಕ್ಕೆ ಕಿವಿಗೊಡಿರಿ. 11 ೧೧ ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ; ನಡುಗುತ್ತಾ ಉಲ್ಲಾಸಪಡಿರಿ. 12 ೧೨ ಆತನ ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಯೆಹೋವನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ. ಯೆಹೋವನನ್ನು ಆಶ್ರಯಿಸುವವರೆಲ್ಲರು ಧನ್ಯರು.

< ಕೀರ್ತನೆಗಳು 2 >