< ಕೀರ್ತನೆಗಳು 17 >

1 ದಾವೀದನ ಪ್ರಾರ್ಥನೆ. ಯೆಹೋವನೇ, ನ್ಯಾಯವಾದುದನ್ನು ಆಲೈಸು; ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಕಪಟವಾದ ಬಾಯಿಂದ ಬಂದದ್ದಲ್ಲ. 2 ನಿನ್ನಿಂದ ನನಗೆ ನ್ಯಾಯವಾದ ತೀರ್ಪು ಉಂಟಾಗಲಿ; ನೀನು ನೀತಿಗನುಸಾರವಾಗಿ ನೋಡುವವನಲ್ಲವೇ. 3 ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ, ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ, ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ; ನನ್ನ ಬಾಯಿ ಮಾತುಗಳಲ್ಲಿ ತಪ್ಪುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. 4 ನಾನಂತೂ ಲೋಕವ್ಯವಹಾರಗಳಲ್ಲಿ ಬಲಾತ್ಕಾರಿಗಳಂತೆ ನಡೆಯದೆ ನಿನ್ನ ಮಾತನ್ನೇ ಅನುಸರಿಸಿದ್ದೇನೆ. 5 ನಿನ್ನ ಮಾರ್ಗದಲ್ಲೇ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ; ನನ್ನ ಕಾಲು ಜಾರಲಿಲ್ಲ. 6 ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ, ಕಿವಿಗೊಟ್ಟು ಕೇಳು. 7 ಭುಜಬಲವನ್ನು ಪ್ರಯೋಗಿಸಿ, ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ, ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು. 8 ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ. 9 ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ದುಷ್ಟರಿಂದ ಕಾಯಿ; ಕಣ್ಣು ಗುಡ್ಡಿನಂತೆಯೇ ಕಾಪಾಡು. 10 ೧೦ ಅವರು ತಮ್ಮ ಹೃದಯವನ್ನು ಕಠಿಣಮಾಡಿದ್ದಾರೆ; ಅಹಂಕಾರದಿಂದ ಮಾತನಾಡುತ್ತಾರೆ. 11 ೧೧ ನಾವು ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲಾ ನಮ್ಮನ್ನು ಸುತ್ತಿಕೊಳ್ಳುತ್ತಾರೆ; ನಮ್ಮನ್ನು ನೆಲಕ್ಕೆ ಬೀಳಿಸಬೇಕೆಂದು ಸಮಯನೋಡುತ್ತಾರೆ. 12 ೧೨ ನನ್ನ ಶತ್ರುವು ಸೀಳಿಬಿಡಲಾಶಿಸುವ ಸಿಂಹದಂತೆಯೂ, ಮರೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹದಂತೆಯೂ ಇದ್ದಾನೆ. 13 ೧೩ ಯೆಹೋವನೇ, ನೀನು ಅವನಿಗೆ ಎದುರಾಗಿ ನಿಂತು ಅವನನ್ನು ಕೆಡವಿಬಿಡು; ನಿನ್ನ ಕತ್ತಿಯಿಂದ ನನ್ನ ಪ್ರಾಣವನ್ನು ದುಷ್ಟರಿಗೆ ತಪ್ಪಿಸಿ ಕಾಪಾಡು. 14 ೧೪ ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು; ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ. ಅವರು ಸಂತಾನವೃದ್ಧಿಹೊಂದಿ ಉಳಿದ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಡುತ್ತಾರೆ. 15 ೧೫ ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು. ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

< ಕೀರ್ತನೆಗಳು 17 >