< ಕೀರ್ತನೆಗಳು 143 >

1 ದಾವೀದನ ಕೀರ್ತನೆ. ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲಿಸು; ನನ್ನ ಬಿನ್ನಹಕ್ಕೆ ಕಿವಿಗೊಡು; ನಿನ್ನ ನೀತಿ ಸತ್ಯತೆಗಳಿಗೆ ಅನುಸಾರವಾಗಿ ಸದುತ್ತರವನ್ನು ದಯಪಾಲಿಸು. 2 ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ; ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ. 3 ವೈರಿಯು ನನ್ನ ಪ್ರಾಣವನ್ನು ಹಿಂಸಿಸಿದ್ದಾನೆ; ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾನೆ. ಕಾರ್ಗತ್ತಲೆಯಲ್ಲಿ ನನ್ನನ್ನು ಹಾಕಿದ್ದಾನೆ; ಬಹು ಕಾಲದಿಂದ ಸತ್ತವರಂತಿದ್ದೇನೆ. 4 ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ. 5 ಹಳೆಯ ದಿನಗಳನ್ನು ನೆನಪುಮಾಡಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ; 6 ಕೈಚಾಚಿ ಬೇಡುತ್ತೇನೆ; ಒಣನೆಲವು ನೀರಿಗಾಗಿ ಹೇಗೋ, ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. (ಸೆಲಾ) 7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು; ನನ್ನ ಆತ್ಮವು ಕುಂದಿಹೋಗಿದೆ. ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು. 8 ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ. 9 ಯೆಹೋವನೇ, ನಿನ್ನನ್ನೇ ಮೊರೆಹೊಕ್ಕಿದ್ದೇನೆ; ಶತ್ರುಗಳಿಂದ ನನ್ನನ್ನು ಬಿಡಿಸು. 10 ೧೦ ನಿನ್ನ ಚಿತ್ತದಂತೆ ನಡೆಯಲು ನನಗೆ ಕಲಿಸು, ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಸಮದಾರಿಯಲ್ಲಿ ನಡೆಸಲಿ. 11 ೧೧ ಯೆಹೋವನೇ, ನಿನ್ನ ಹೆಸರಿನ ನಿಮಿತ್ತ ನನ್ನನ್ನು ಉಜ್ಜೀವಿಸಮಾಡು; ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು. 12 ೧೨ ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು. ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು; ನಾನು ನಿನ್ನ ಸೇವಕನಲ್ಲವೇ.

< ಕೀರ್ತನೆಗಳು 143 >