< ಕೀರ್ತನೆಗಳು 140 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು, ದಾವೀದನ ಕೀರ್ತನೆ. ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು, ಬಲಾತ್ಕಾರಿಗಳಿಂದ ತಪ್ಪಿಸಿ ಕಾಪಾಡು.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ಕೆಡುಕರಿಂದ ನನ್ನನ್ನು ತಪ್ಪಿಸಿರಿ, ಬಲಾತ್ಕಾರಿಗಳಿಂದ ನನ್ನನ್ನು ತಪ್ಪಿಸಿ ಕಾಪಾಡಿರಿ.
2 ಅವರು ಕೇಡು ಕಲ್ಪಿಸುತ್ತಾರೆ, ಯಾವಾಗಲೂ ಜಗಳವೆಬ್ಬಿಸುತ್ತಾರೆ.
ಅವರು ಹೃದಯದಲ್ಲಿ ಕೇಡನ್ನು ಕಲ್ಪಿಸುತ್ತಾರೆ; ಅವರು ಪ್ರತಿದಿನ ಕಲಹವೆಬ್ಬಿಸುತ್ತಾರೆ.
3 ತಮ್ಮ ನಾಲಿಗೆಯನ್ನು ಸರ್ಪದಂತೆ ಹದಮಾಡಿದ್ದಾರೆ, ಅವರ ತುಟಿಗಳ ಹಿಂದೆ ಹಾವಿನ ವಿಷವಿದೆ. (ಸೆಲಾ)
ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಹದಮಾಡುತ್ತಾರೆ; ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ.
4 ಯೆಹೋವನೇ, ದುಷ್ಟರ ಕೈಗೆ ಸಿಕ್ಕದಂತೆ ನನ್ನನ್ನು ಕಾಪಾಡು, ಬಲಾತ್ಕಾರಿಗಳಿಂದ ತಪ್ಪಿಸಿ ರಕ್ಷಿಸು. ಅವರು ನನ್ನ ಕಾಲುಗಳನ್ನು ಎಡವಿಸಿಬಿಡಬೇಕೆಂದು ಯೋಚಿಸಿದ್ದಾರೆ.
ಯೆಹೋವ ದೇವರೇ, ದುಷ್ಟರ ಕೈಗಳಿಂದ ನನ್ನನ್ನು ತಪ್ಪಿಸಿ ಕಾಯಿರಿ. ಹಿಂಸಕರಿಂದ ನನ್ನನ್ನು ರಕ್ಷಿಸು, ಅವರು ನನ್ನ ಮಾರ್ಗಗಳನ್ನು ಕೆಡಿಸುವುದಕ್ಕೆ ಉದ್ದೇಶಿಸುತ್ತಾರೆ.
5 ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ ಉರುಲನ್ನೂ, ಪಾಶಗಳನ್ನೂ ಒಡ್ಡಿದ್ದಾರೆ, ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ, ನನಗಾಗಿ ಬಲೆಬೀಸಿಟ್ಟಿದ್ದಾರೆ. (ಸೆಲಾ)
ಗರ್ವಿಷ್ಠರು ನನಗೆ ಉರುಲನ್ನೂ, ಪಾಶಗಳನ್ನೂ ರಹಸ್ಯವಾಗಿ ಇಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನನಗೆ ಬೋನಿಟ್ಟಿದ್ದಾರೆ.
6 ನಾನು ಯೆಹೋವನಿಗೆ, “ನೀನೇ ನನ್ನ ದೇವರು, ಯೆಹೋವನೇ, ನನ್ನ ವಿಜ್ಞಾಪನೆಗೆ ಕಿವಿಗೊಡು,
ನಾನು ಯೆಹೋವ ದೇವರಿಗೆ ಹೀಗೆ ಹೇಳಿದೆನು, “ನೀವು ನನ್ನ ದೇವರಾಗಿದ್ದೀರಿ; ಯೆಹೋವ ದೇವರೇ, ಕರುಣೆಗಾಗಿ ಬೇಡುವ ನನ್ನ ಮೊರೆಗೆ ಕಿವಿಗೊಡಿರಿ.
7 ಕರ್ತನೇ, ಯೆಹೋವನೇ, ನನ್ನ ಆಶ್ರಯದುರ್ಗವೇ, ಯುದ್ಧ ಸಮಯದಲ್ಲಿ ನೀನೇ ನನ್ನ ಶಿರಸ್ತ್ರಾಣ,
ನನ್ನ ರಕ್ಷಣೆಯ ಬಲವಾಗಿರುವ ಸಾರ್ವಭೌಮ ಯೆಹೋವ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಕಾಪಾಡುತ್ತೀರಿ.
8 ಯೆಹೋವನೇ, ದುಷ್ಟರು ತಮ್ಮನ್ನು ಹೆಚ್ಚಿಸಿಕೊಳ್ಳದಂತೆ, ಅವರ ಆಶೆಗಳನ್ನು ನೆರವೇರಿಸಬೇಡ, ಅವರ ಕುಯುಕ್ತಿಯನ್ನು ಸಾಗಗೊಡಿಸಬೇಡ” ಎಂದು ಹೇಳುತ್ತೇನೆ. (ಸೆಲಾ)
ಯೆಹೋವ ದೇವರೇ, ದುಷ್ಟರಿಗೆ ಅವರ ಇಷ್ಟಾರ್ಥವನ್ನು ಕೊಡಬೇಡಿರಿ; ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡಿರಿ.”
9 ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು ಅವರ ತಲೆಯ ಮೇಲೆಯೇ ಬರಲಿ,
ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು, ಅವರ ತಲೆಯ ಮೇಲೇ ಬರಲಿ.
10 ೧೦ ಅವರ ಮೇಲೆ ಕೆಂಡಗಳು ಸುರಿಯಲಿ, ಅವರು ಅಗ್ನಿಕುಂಡದೊಳಕ್ಕೂ, ಆಳವಾದ ತಗ್ಗಿನೊಳಕ್ಕೂ ದೊಬ್ಬಲ್ಪಟ್ಟು ತಿರುಗಿ ಏಳದಿರಲಿ.
ಉರಿ ಕೆಂಡಗಳು ಅವರ ಮೇಲೆ ಬೀಳಲಿ; ಬೆಂಕಿಯಲ್ಲಿಯೂ ಅವರು ಏಳಲಾರದ ಹಾಗೆ, ಇತರರು ಅವರನ್ನು ಕುಣಿಯಲ್ಲಿ ಕೆಡವಲಿ.
11 ೧೧ ಚಾಡಿಗಾರನು ದೇಶದಲ್ಲಿ ಉಳಿಯನು, ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವುದು.
ಚಾಡಿಕೋರರು ದೇಶದಲ್ಲಿ ಉಳಿಯದಿರಲಿ; ಬಲಾತ್ಕಾರಿಯನ್ನು ಕೇಡು ಬೇಟೆಯಾಡಿ ಕೆಡವಲಿ.
12 ೧೨ ಯೆಹೋವನು ದೀನರ ವ್ಯಾಜ್ಯವನ್ನು ನಡೆಸುವನೆಂತಲೂ, ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು.
ಯೆಹೋವ ದೇವರು ಬಡವನಿಗೆ ವ್ಯಾಜ್ಯವನ್ನು, ಬಲಹೀನರಿಗೆ ನ್ಯಾಯವನ್ನೂ ತೀರಿಸುವರೆಂದೂ ನಾನು ಬಲ್ಲೆನು.
13 ೧೩ ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು, ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು.
ನಿಶ್ಚಯವಾಗಿ ನೀತಿವಂತರು ನಿಮ್ಮ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು; ಯಥಾರ್ಥರು ನಿಮ್ಮ ಸನ್ನಿಧಿಯಲ್ಲಿ ಬಾಳುವರು.

< ಕೀರ್ತನೆಗಳು 140 >