< ಕೀರ್ತನೆಗಳು 14 >

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, “ದೇವರೇ ಇಲ್ಲ” ಎಂದು ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. “ದೇವರು ಇಲ್ಲಾ,” ಎಂದು ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ಅವರು ಕೆಟ್ಟು ಹೋಗಿ, ಅಸಹ್ಯ ಕೃತ್ಯಗಳನ್ನು ಮಾಡುತ್ತಾರೆ; ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ.
2 ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ, ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ,
ದೇವರನ್ನು ಹುಡುಕುವ ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ ಯೆಹೋವ ದೇವರು ಸ್ವರ್ಗದಿಂದ, ಮನುಷ್ಯರ ಮೇಲೆ ದೃಷ್ಟಿಸಿದರು.
3 ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. ಪ್ರತಿಯೊಬ್ಬನೂ ದಾರಿತಪ್ಪಿದವನು, ಎಲ್ಲರೂ ಕೆಟ್ಟು ಹೋದವರೇ.
ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದಾರೆ; ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ, ಒಬ್ಬರಾದರೂ ಇಲ್ಲ.
4 ದುಷ್ಟತ್ವವನ್ನು ನಡೆಸುವವರೆಲ್ಲರು ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ; ಯೆಹೋವನನ್ನು ಸ್ಮರಿಸುವುದಿಲ್ಲ.
ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ.
5 ಅವರು ಫಕ್ಕನೆ ಭಯಭ್ರಾಂತರಾಗುವರು; ಏಕೆಂದರೆ ದೇವರು ನೀತಿವಂತರ ಪಕ್ಷದಲ್ಲಿದ್ದಾನೆ.
ದೇವರು ನೀತಿವಂತರ ಸಹವಾಸದಲ್ಲಿ ಇರುವುದರಿಂದ, ದುಷ್ಟತ್ವವನ್ನು ನಡೆಸುವವರು ಅತ್ಯಂತ ಭಯಭ್ರಾಂತರಾಗುವರು.
6 ನೀವು ಕುಗ್ಗಿದವರ ಸಂಕಲ್ಪವನ್ನು ಭಂಗಪಡಿಸಿದರೂ ಯೆಹೋವನು ಅವರ ಆಶ್ರಯವಲ್ಲವೇ.
ದುಷ್ಟತ್ವ ನಡೆಸುವವರೇ, ನೀವು ಬಡವರ ಯೋಜನೆಗಳನ್ನು ನಿರಾಶೆಗೊಳಿಸುತ್ತೀರಿ, ಆದರೆ ಯೆಹೋವ ದೇವರೇ ಅವರ ಆಶ್ರಯವಾಗಿದ್ದಾರೆ.
7 ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ತನ್ನ ಜನರನ್ನು ದುರವಸ್ಥೆಯಿಂದ ತಪ್ಪಿಸಿದಾಗ, ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು, ಇಸ್ರಾಯೇಲರು ಹರ್ಷಿಸುವರು.
ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು! ಯೆಹೋವ ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ, ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.

< ಕೀರ್ತನೆಗಳು 14 >