< ಕೀರ್ತನೆಗಳು 138 >

1 ದಾವೀದನ ಕೀರ್ತನೆ. ಯೆಹೋವನೇ, ಪೂರ್ಣಮನಸ್ಸಿನಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಎದುರಿನಲ್ಲಿ ನಿನ್ನನ್ನು ಕೀರ್ತಿಸುವೆನು. 2 ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುತ್ತೇನೆ; ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ ನಿನ್ನ ನಾಮವನ್ನು ಕೊಂಡಾಡುತ್ತೇನೆ. ನಿನ್ನ ನಾಮದ ಮತ್ತು ಆಜ್ಞೆಯ ಘನಪಡಿಸಿ ತೋರಿಸಿದ್ದೀ. 3 ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ. 4 ಯೆಹೋವನೇ, ಭೂರಾಜರೆಲ್ಲರು ನೀನು ನುಡಿದ ನುಡಿಗಳನ್ನು ಕೇಳಿ ನಿನ್ನನ್ನು ಸ್ತುತಿಸುವರು. 5 ಅವರು ಯೆಹೋವನ ಮಾರ್ಗಗಳನ್ನು ಹಾಡಿಹರಸುವರು; ಯೆಹೋವನ ಪ್ರಭಾವವು ದೊಡ್ಡದಾಗಿದೆಯಲ್ಲಾ. 6 ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತು ಹಿಡಿಯುತ್ತಾನೆ. 7 ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ, ನನ್ನನ್ನು ಚೈತನ್ಯಗೊಳ್ಳಿಸುವಿ, ನನ್ನ ಶತ್ರುಗಳ ಕೋಪಕ್ಕೆ ವಿರುದ್ಧವಾಗಿ ನಿನ್ನ ಕೈ ಚಾಚುವಿ, ನಿನ್ನ ಬಲಗೈ ನನ್ನನ್ನು ರಕ್ಷಿಸುವುದು. 8 ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು. ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು, ನೀನು ಕೈಹಾಕಿದ ಕೆಲಸವನ್ನು ನೆರವೇರಿಸದೆ ಬಿಡಬೇಡ.

< ಕೀರ್ತನೆಗಳು 138 >