< ಕೀರ್ತನೆಗಳು 113 >

1 ಯೆಹೋವನಿಗೆ ಸ್ತೋತ್ರ! ಯೆಹೋವನ ಸೇವಕರೇ, ಸ್ತೋತ್ರಮಾಡಿರಿ; ಯೆಹೋವನ ನಾಮವನ್ನು ಸ್ತುತಿಸಿರಿ. 2 ಈಗಿನಿಂದ ಯುಗಯುಗಕ್ಕೂ, ಯೆಹೋವನ ನಾಮವು ಕೀರ್ತಿಸಲ್ಪಡಲಿ. 3 ಯೆಹೋವನ ನಾಮವು ಪೂರ್ವದಿಂದ, ಪಶ್ಚಿಮದವರೆಗೂ ಸ್ತುತಿಹೊಂದಲಿ. 4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಕ್ಕಿಂತಲೂ ಉನ್ನತವಾಗಿದೆ. 5 ನಮ್ಮ ಯೆಹೋವ ದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ, 6 ಆಕಾಶವನ್ನೂ, ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ. 7 ಆತನು ದೀನರನ್ನು ಧೂಳಿನಿಂದ ಎಬ್ಬಿಸಿ, ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ. 8 ಪ್ರಭುಗಳ ಜೊತೆಯಲ್ಲಿ, ಅಂದರೆ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುತ್ತಾನೆ. 9 ಬಂಜೆಯು ಮಕ್ಕಳೊಂದಿಗೆ, ಸಂತೋಷದಿಂದ ಮನೆಯಲ್ಲಿ ವಾಸಿಸುವ ಹಾಗೆ ಮಾಡುತ್ತಾನೆ. ಯೆಹೋವನಿಗೆ ಸ್ತೋತ್ರ!

< ಕೀರ್ತನೆಗಳು 113 >