< ಕೀರ್ತನೆಗಳು 111 >

1 ಯೆಹೋವನಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ, ನೆರೆದ ಸಭೆಯಲ್ಲಿಯೂ, ಮನಃಪೂರ್ವಕವಾಗಿ ಕೀರ್ತಿಸುವೆನು. 2 ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು. 3 ಆತನ ಕಾರ್ಯವು ಘನ, ಮಾನಗಳುಳ್ಳದ್ದು; ಆತನ ನೀತಿಯು ಸದಾಕಾಲವೂ ಇರುವುದು. 4 ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ. ಯೆಹೋವನು ಕೃಪೆಯೂ, ಕನಿಕರವೂ ಉಳ್ಳವನು. 5 ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ; ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದಾನೆ 6 ಆತನು ಅನ್ಯಜನಗಳ ಸ್ವತ್ತನ್ನು ತನ್ನ ಪ್ರಜೆಗೆ ಕೊಡುವುದರ ಮೂಲಕ ಸ್ವಪ್ರತಾಪವನ್ನು ತೋರ್ಪಡಿಸಿದ್ದಾನೆ. 7 ಆತನ ಕೈಕೆಲಸಗಳು ನೀತಿ, ಸತ್ಯತೆಗಳನ್ನು ಪ್ರಕಟಿಸುತ್ತವೆ; ಆತನ ನಿಯಮಗಳೆಲ್ಲಾ ಸ್ಥಿರವಾಗಿವೆ. 8 ಅವು ದೃಢವಾದ ಆಧಾರವುಳ್ಳವುಗಳು; ಯುಗಯುಗಾಂತರಕ್ಕೂ ಇರುವವು. ಸತ್ಯ, ನೀತಿಗಳಿಗನುಸಾರವಾಗಿ ವಿಧಿಸಲ್ಪಟ್ಟಿವೆ. 9 ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನು ಉಂಟುಮಾಡಿದ್ದಾನೆ; ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ; ಆತನ ನಾಮವು ಪರಿಶುದ್ಧವೂ, ಮಹೋನ್ನತವೂ ಆಗಿದೆ. 10 ೧೦ ಯೆಹೋವನ ಭಯವೇ ಜ್ಞಾನಕ್ಕೆ ಮೂಲ; ಆತನ ಕಟ್ಟಳೆಗಳನ್ನು ಕೈಕೊಳ್ಳುವವರು ಪೂರ್ಣ ವಿವೇಕಿಗಳು. ಆತನ ಸ್ತುತಿಯು ನಿರಂತರವಾದದ್ದು.

< ಕೀರ್ತನೆಗಳು 111 >