< ಕೀರ್ತನೆಗಳು 101 >

1 ದಾವೀದನ ಕೀರ್ತನೆ. ಪ್ರೀತಿ, ನೀತಿಗಳನ್ನು ಕುರಿತು ಹಾಡುವೆನು; ಯೆಹೋವನೇ, ನಿನ್ನನ್ನು ಕೊಂಡಾಡುವೆನು. 2 ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; ನನಗೆ ಯಾವಾಗ ದರ್ಶನಕೊಡುವಿ? ಮನೆಯೊಳಗೂ ಯಥಾರ್ಥ ಹೃದಯದಿಂದಲೇ ನಡೆದುಕೊಳ್ಳುವೆನು. 3 ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವುದಿಲ್ಲ; ದುರಾಚಾರವನ್ನು ಹಗೆಮಾಡುತ್ತೇನೆ, ಅದರ ಗೊಡವೆಯೇ ನನಗೆ ಬೇಡ. 4 ಮೂರ್ಖತನವು ನನ್ನನ್ನು ಬಿಟ್ಟು ಹೋಗಲಿ; ಕೆಟ್ಟತನವನ್ನು ಅರಿಯದಿರುವೆನು. 5 ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ. 6 ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು, ಸನ್ಮಾರ್ಗಿಯೇ ನನ್ನ ಸೇವೆಯಲ್ಲಿರಬೇಕು. 7 ಮೋಸಗಾರನು ನನ್ನ ಮನೆಯಲ್ಲಿ ಇರಲೇಬಾರದು; ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು. 8 ಯೆಹೋವನ ಪಟ್ಟಣದಲ್ಲಿ ಕೆಡುಕರೇ ಉಳಿಯದಂತೆ, ಪ್ರತಿ ಮುಂಜಾನೆಯಲ್ಲಿ ದೇಶದ ದುಷ್ಟರನ್ನು ಸಂಹರಿಸುತ್ತಾ ಬರುವೆನು.

< ಕೀರ್ತನೆಗಳು 101 >