< ಕೀರ್ತನೆಗಳು 10 >

1 ಯೆಹೋವನೇ, ನೀನು ಏಕೆ ದೂರವಾಗಿ ನಿಂತಿದ್ದೀ? ಕಷ್ಟಕಾಲದಲ್ಲಿ ಏಕೆ ಮರೆಯಾಗುತ್ತೀ? 2 ದುಷ್ಟರು ಅಹಂಕಾರದಿಂದ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಕುಯುಕ್ತಿಯಲ್ಲಿ ತಾವೇ ಸಿಕ್ಕಿ ಬೀಳಲಿ. 3 ದುಷ್ಟನು ತನ್ನ ಹೃದಯದ ಸಂಕಲ್ಪಗಳು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ; ಲಾಭಬಡುಕನು ಯೆಹೋವನನ್ನು ದೂಷಿಸಿ ತಿರಸ್ಕರಿಸುತ್ತಾನೆ. 4 ದುಷ್ಟನು ಸೊಕ್ಕಿನ ಮುಖದಿಂದ, “ಯೆಹೋವನು ವಿಚಾರಿಸುವುದಿಲ್ಲ” ಎಂದು ಹೇಳಿಕೊಂಡು, ದೇವರಿಲ್ಲ ಎಂಬುದಾಗಿ ಸದಾ ಯೋಚಿಸುತ್ತಾನೆ. 5 ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ; ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ ಅದು ಅವನ ಗ್ರಹಿಕೆಗೆ ಬರುವುದಿಲ್ಲ; ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ. 6 ಅವನು, “ನಾನು ಕದಲುವುದೇ ಇಲ್ಲ; ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ” ಅಂದುಕೊಂಡಿದ್ದಾನೆ. 7 ಅವನ ಬಾಯಿಯು ಶಾಪ, ಬಲಾತ್ಕಾರ ಮತ್ತು ವಂಚನೆಗಳಿಂದ ತುಂಬಿದೆ; ಅವನ ನಾಲಿಗೆಯ ಕೆಳಗೆ ಹಾನಿಯೂ, ನಾಶನವೂ ಇವೆ. 8 ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು, ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ. ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ. 9 ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು. ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ. 10 ೧೦ ಕುಗ್ಗಿದವನು ಜಜ್ಜಲ್ಪಟ್ಟು ಉರುಳಿಕೊಳ್ಳುತ್ತಾನೆ, ಗತಿಯಿಲ್ಲದವನು ಅವನ ಬಲಾತ್ಕಾರದಿಂದ ಬಿದ್ದು ಹೋಗುತ್ತಾನೆ. 11 ೧೧ ಆ ದುಷ್ಟನು ತನ್ನೊಳಗೆ, “ದೇವರು ಇವನನ್ನು ಬಿಟ್ಟು ವಿಮುಖನಾಗಿದ್ದಾನೆ; ಆತನು ನೋಡುವುದೇ ಇಲ್ಲ” ಅಂದುಕೊಳ್ಳುತ್ತಾನೆ. 12 ೧೨ ಯೆಹೋವನೇ, ಏಳು; ದೇವರೇ, ಕುಗ್ಗಿದವನನ್ನು ಮರೆಯಬೇಡ; ಅವನನ್ನು ರಕ್ಷಿಸುವುದಕ್ಕೆ ಕೈಚಾಚು. 13 ೧೩ “ದೇವರು ವಿಚಾರಿಸುವುದೇ ಇಲ್ಲ” ಎಂದು ಹೇಳುತ್ತಾ, ದುಷ್ಟನು ನಿನ್ನನ್ನು ಏಕೆ ಅಲಕ್ಷ್ಯಮಾಡಬೇಕು? 14 ೧೪ ನೀನು ಅವರ ಅನ್ಯಾಯ ಹಾಗು ಬಲಾತ್ಕಾರಗಳನ್ನು ನೋಡಿದ್ದಿ; ಅವುಗಳನ್ನು ವಿಚಾರಿಸುತ್ತೀ, ಗತಿಯಿಲ್ಲದವನು ತನ್ನನ್ನು ನಿನಗೇ ಒಪ್ಪಿಸುವನು; ದಿಕ್ಕಿಲ್ಲದವನಿಗೆ ನೀನೇ ದಿಕ್ಕು. 15 ೧೫ ದುಷ್ಟನ ಭುಜಬಲವನ್ನು ಮುರಿದುಹಾಕು, ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲಮಾಡಿಬಿಡು. 16 ೧೬ ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು; ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು. 17 ೧೭ ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದಿ; ಅವರ ಹೃದಯವನ್ನು ಧೈರ್ಯಪಡಿಸುತ್ತಿ; ಅವರ ಮೊರೆಗೆ ಕಿವಿಗೊಡುತ್ತಿ. 18 ೧೮ ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ. ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.

< ಕೀರ್ತನೆಗಳು 10 >